ಚನ್ನಪಟ್ಟಣ: ಪಟ್ಟಣದ ವಂದಾರಗುಪ್ಪೆ ಬಳಿ ಇರುವ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ಬೆಂಕಿ ನಂದಿಸುವ ಮತ್ತು ಬೆಂಕಿಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಠಾಣಾಧಿಕಾರಿ ಶಿವರಾಮ್ ಮಾತನಾಡಿ, ಮನೆ, ಮಳಿಗೆ, ವಾಣಿಜ್ಯ ಸಂಕೀರ್ಣ ಹೀಗೆ ಮಾನವ ಜೀವನ ನಡೆಸಲು ಮಾಡಿಕೊಂಡಿರುವ ವ್ಯವಸ್ಥೆಗಳಿರುವ ಎಲ್ಲಾ ಕಡೆಗಳಲ್ಲೂ ಆಕಸ್ಮಿಕವಾಗಿ ಬೆಂಕಿ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ರೀತಿ ಉಂಟಾದ ಆಕಸ್ಮಿಕ ಬೆಂಕಿಯಿಂದ ಆಸ್ತಿಪಾಸ್ತಿ, ಬೆಲೆಬಾಳುವ ಪದಾರ್ಥಗಳು, ದಾಖಲೆಗಳು ನಾಶವಾಗುವ ಜತೆಗೆ ಪ್ರಾಣ ಹಾನಿಗಳು ಸಂಭವಿಸುತ್ತವೆ. ಆದ್ದರಿಂದ ಆಕಸ್ಮಿಕ ಬೆಂಕಿ ಸಂದರ್ಭದಲ್ಲಿ ನಮ್ಮ ಸೇವೆ ಪಡೆಯುವುದು ಒಂದು ಭಾಗವಾದರೆ. ಮುನ್ನೆಚ್ಚರಿಕೆ ಕ್ರಮಗಳು ಇನ್ನೂ ಪರಿಣಾಮಕಾರಿ ಎಂದು ತಿಳಿಸಿದರು.
ತುರ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡಿ: ಆಕಸ್ಮಿಕ ಬೆಂಕಿ ಸಂಭವಿಸಿದಾಗ ಅಗ್ನಿಶಾಮಕ ಉಪಕರಣಗಳ ಬಳಕೆ ಬಗ್ಗೆ ತಿಳಿಸಿಕೊಟ್ಟರು. ಪ್ರತಿ ಕಟ್ಟಡಗಳಲ್ಲಿ ತುರ್ತು ನಿರ್ಗಮನಕ್ಕೆ ವ್ಯವಸ್ಥೆ ಇರುವಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮೊದಲು ಯೋಗ ಶಿಕ್ಷಕಿ ರಾಧಿಕಾ, ಎನ್‌ಸಿಸಿ ಕೆಡಿಟ್‌ಗಳಿಗೆ ಯೋಗಾಭ್ಯಾಸ ಮಾಡಿಸಿ, ಯೋಗದ ಮಹತ್ವದ ಬಗ್ಗೆ ತಿಳಿಸಿದರು.
ಎನ್‌ಸಿಸಿ ಕೆಡೆಟ್‌ಗಳಿಗಾಗಿ ಥ್ರೋಬಾಲ್, ವಾಲಿಬಾಲ್ ಪಂದ್ಯಾವಳಿಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಸುಮಾರು 600ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿ ಬೆಂಕಿ ನಂದಿಸುವ ಮತ್ತು ಬೆಂಕಿಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ಪಡೆದರು. ಶಿಬಿರದ ಅಧಿಕಾರಿಗಳಾದ ಮಲ್ಲಿಕಾರ್ಜುನ್, ಜೆ.ಎನ್. ಕುಮಾರ್, ಭಾಜಪಯ್, ಚನ್ನಮಲ್, ಕ್ಯಾಪ್ಟನ್ ರಾಘವೇಂದ್ರ ರಾವ್, ರಾಜಮೌಳಿ, ಹರಿನಾರಾಯಣ, ಸುಬೇದಾರ್ ಎನ್.ಬಿ.ಭಟ್, ಚನ್ನಪಟ್ಟಣ ಬಾಲಕರ ಸರಕಾರಿ ಕಾಲೇಜಿನ ಅನಿಲ್ ಕುಮಾರ್, ಗೋವಿಂದ ಸಿಂಗ್, ಜಾನ್ ಬಾಸ್ಕೊ , ಪೂರ್ಣಿಮಾ ಹಾಜರಿದ್ದರು.