Advertisement

Flexes and banners: ಫ್ಲೆಕ್ಸ್‌, ಬ್ಯಾನರ್‌ಗಳ ಹಾಕಿದ್ರೆ ಬೀಳುತ್ತೆ 50 ಸಾವಿರ ದಂಡ

09:46 AM Aug 09, 2023 | Team Udayavani |

ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ರಾರಾಜಿಸುತ್ತಿರುವ ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌, ಹೋರ್ಡಿಂಗ್ಸ್‌ ಹಾವಳಿಗೆ ನಿರ್ದಾಕ್ಷಿಣ್ಯವಾಗಿ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ, ಮುಂದಿನ ಎರಡು- ಮೂರು ದಿನಗಳು “ಆಪರೇಷನ್‌ ಫ್ಲೆಕ್ಸ್‌’ ನಡೆಸಲಿದೆ.

Advertisement

“ಧಾರ್ಮಿಕ, ರಾಜಕೀಯ ಸೇರಿದಂತೆ ನಗರದಲ್ಲಿ ಇನ್ಮುಂದೆ ಎಲ್ಲ ಪ್ರಕಾರದ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಹೋರ್ಡಿಂಗ್‌ಗಳನ್ನು ನಿಷೇಧಿಸಲಾಗಿದೆ. ಈಗಾಗಲೇ ಆದೇಶ ಇದ್ದರೂ ಪಾಲನೆ ಆಗದಿರುವುದು ಕಂಡುಬಂದಿದೆ. ಎರಡು- ಮೂರು ದಿನಗಳಲ್ಲಿ ಫ್ಲೆಕ್ಸ್‌ಗಳು, ಆ ಸಂಬಂಧದ ಸ್ಟ್ರಕ್ಚರ್‌ಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ನನ್ನ ಮತ್ತು ಮುಖ್ಯಮಂತ್ರಿಗಳ ಭಾವಚಿತ್ರ ಇದ್ದರೂ ತೆಗೆದುಹಾಕಲು ಸೂಚಿಸಲಾಗಿದೆ. ಇದರಲ್ಲಿ ಯಾವುದೇ ರಾಜೀ ಇಲ್ಲ. ನ್ಯಾಯಾಲಯದ ಆದೇಶದಂತೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ ಮಾಹಿತಿ ನೀಡಿದರು.

ಈ ಸಂಬಂಧ ಈಗಾಗಲೇ ಸಚಿವರು, ಪಕ್ಷದ ಶಾಸಕರು, ನಾಯಕರಿಗೆ ಮನದಟ್ಟು ಮಾಡಲಾಗಿದೆ. ಉಳಿದೆಲ್ಲ ರಾಜಕೀಯ ಪಕ್ಷಗಳು, ನಾಗರಿಕರು ಕೂಡ ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಇದಕ್ಕಾಗಿ ಪ್ರತ್ಯೇಕ ನೀತಿ ರೂಪಿಸಲಾಗುವುದು. ಅಲ್ಲಿ ತಾತ್ಕಾಲಿಕವಾಗಿ ನಿರ್ದಿಷ್ಟ ಅವಧಿ, ಅಳತೆ, ಸ್ಥಳ ನಿಗದಿಪಡಿಸಿ ಅನುಮತಿ ನೀಡಲಾಗುವುದು. ಒಂದು ವೇಳೆ ಅನಧಿಕೃತ ಫ್ಲೆಕ್ಸ್ ಹಾಕಿದರೆ, ಯಾರೇ ಆಗಿರಲಿ, ಪಾಲಿಕೆ ಅಧಿಕಾರಿಗಳು ಎಫ್ಐಆರ್‌ ದಾಖಲಿಸಿ, ಪ್ರತಿ ಅನಧಿಕೃತ ಫ್ಲೆಕ್ಸ್‌ ಗೆ ತಲಾ 50 ಸಾವಿರ ರೂ. ದಂಡ ವಿಧಿಸಲಾಗುವುದು. ಜತೆಗೆ ಫ್ಲೆಕ್ಸ್‌ ಹಾಕಿದವರ ವಿರುದ್ಧ ಎಫ್ಐಆರ್‌ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ನಗರದಲ್ಲಿ 59 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ. 134 ದೂರುಗಳನ್ನು ದಾಖಲಿಸಿಕೊಂಡು, 40 ಎಫ್ಐಆರ್‌ ದಾಖಲಿಸಲಾಗಿದೆ. ಇನ್ನು ಖಾಸಗಿ ಸ್ಥಳಗಳಲ್ಲಿ ಫ್ಲಕ್ಸ್ ಹಾಕಲು ನಿರ್ಬಂಧ ಇರುವುದಿಲ್ಲ ಎಂದ ಅವರು, ಮೂರು ವಾರದಲ್ಲಿ ತೆರವುಗೊಳಿಸುವುದಾಗಿ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವುದರಿಂದ ಅದರಂತೆ ಜನ್ಮದಿನ, ಶ್ರದ್ಧಾಂಜಲಿ, ಶುಭ ಸಂದೇಶ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಚಾರ ಸೇರಿ ಯಾವುದೇ ಅನಧಿಕೃತ ಫ್ಲೆಕ್ಸ್‌ ಗೆ ಅವಕಾಶ ಇಲ್ಲ ಎಂದು ಪುನರುತ್ಛರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next