Advertisement

ಶ್ರೀ ಕ್ಷೇತ್ರ ಉಳವಿಯಲ್ಲಿ ಭಕ್ತರ ದಂಡು

06:19 PM Feb 16, 2022 | Team Udayavani |

ಜೊಯಿಡಾ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಳವಿ ಶ್ರೀ ಚೆನ್ನಬಸವೇಶ್ವರ ಜಾತ್ರೋತ್ಸವ ಆರಂಭಗೊಂಡಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ. ಎಲ್ಲೆಡೆ ಭಕ್ತಾದಿಗಳ “ಹರಹರ ಮಹಾದೇವ’ ಎಂಬ ಜಯಘೋಷ ಮಾರ್ದನಿಸುತ್ತಿದೆ. ನೂರಾರು ಚಕ್ಕಡಿಗಳಲ್ಲಿ ಭಕ್ತರು ಉಳವಿ ಕ್ಷೇತ್ರದತ್ತ ಸಾಗುತ್ತಿದ್ದಾರೆ.

Advertisement

ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸರಳ ರಥೋತ್ಸವಕ್ಕೆ ಅವಕಾಶ ನೀಡಿ ಭಕ್ತರ ಪ್ರವೇಶ ನಿಷೇಧಿಸಿದ್ದರೂ ಭಕ್ತರ ದಂಡು ಮಾತ್ರ ಕಡಿಮೆಯಾಗಿಲ್ಲ. ಜಾತ್ರೋತ್ಸವವನ್ನು ಧಾರ್ಮಿಕ ಆಚರಣೆಗಷ್ಟೇ ಸೀಮಿತಗೊಳಿಸಿ ಚಕ್ಕಡಿಗಾಡಿಗಳು, ಬೃಹತ್‌ ವಾಹನಗಳಿಗೆ ಅವಕಾಶ ನೀಡದಂತೆ ಭಕ್ತರ ಪ್ರವೇಶ ನಿಷೇಧಿಸಿ ಆದೇಶಿಸಿತ್ತು. ಆದರೆ ಭಕ್ತಾದಿಗಳು ದೇವಾಲಯದ ಆಡಳಿತ ಮಂಡಳಿ ಮನವಿಯನ್ನೂ ಲೆಕ್ಕಿಸದೇ ಜಾತ್ರೆಗೆ ಆಗಮಿಸಿದ್ದಾರೆ.

ಉಳವಿ ಕ್ಷೇತ್ರದ ದೇವಸ್ಥಾನದ ಆವಾರದಲ್ಲಿ ನೂರಾರು ಚಕ್ಕಡಿಗಳು, ಪಾದಯಾತ್ರಿಗಳು ಬೀಡು ಬಿಟ್ಟಿದ್ದಾರೆ. ದಾಸೋಹ ಇಲ್ಲದಿದ್ದರೂ ಬುತ್ತಿಯನ್ನು ಕಟ್ಟಿಕೊಂಡು ಬಂದ ಭಕ್ತಾದಿಗಳು ದೇವಸ್ಥಾನದ ಆವರಣದಲ್ಲಿ ಹಾಗೂ ಉಳವಿ ಶಾಲಾ ಆವರಣದಲ್ಲಿ ಉಳಿದುಕೊಂಡಿದ್ದಾರೆ.

ಈ ಬಾರಿ ಧಾರ್ಮಿಕ ಆಚರಣೆ ಹಾಗೂ ಸಂಪ್ರದಾಯಕ್ಕೆ ಸೀಮಿತವಾಗಿ ರಥೋತ್ಸವ ನಡೆಯಲಿದ್ದು, ಕೊರೊನಾ ನಿಯಮಾನುಸಾರ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳುವ ಸೀಮಿತ ಭಕ್ತರು ದೇವರ ದರ್ಶನ ಪಡೆದ ಕೂಡಲೇ ಕ್ಷೇತ್ರದಿಂದ ವಾಪಸ್‌ ತೆರಳುವಂತೆ ಉಳವಿ ದೇವಸ್ಥಾನ ಟ್ರಸ್ಟ್‌ ಕಮಿಟಿ ವಿನಂತಿ ಮಾಡಿಕೊಂಡಿತ್ತು. ಆದರೆ ಭಕ್ತರು ಮಾತ್ರ ದೇವಸ್ಥಾನದ ಮೈದಾನ ಸೇರಿದಂತೆ ಸುತ್ತಮುತ್ತ ಟೆಂಟ್‌ ಕಟ್ಟಿದ್ದು, ಎತ್ತುಗಳನ್ನು ಕೂಡಾ ಇಟ್ಟುಕೊಂಡು ವಾಸ್ತವ್ಯ ಹೂಡಿದ್ದಾರೆ. ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಭಕ್ತರು ಆಗಮಿಸುತ್ತಿರುವುದು ಪೊಲೀಸ್‌ ಇಲಾಖೆ, ಹಾಗೂ ದೇವಾಲಯ ಸಮಿತಿಗೆ ನುಂಗಲಾರದ ತುತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next