Advertisement
ನೀನು ಬರೆದಿರುವ ಹಾಗೆ ಅಕ್ಟೋಪಸ್ಸುಗಳು ಅಂತಹ ದುಷ್ಟ ಜೀವಿಗಳೇನೂ ಅಲ್ಲ. ಅವುಗಳು ಬಹಳ ಸೌಮ್ಯ ಸ್ವಭಾವದ, ಸಂಕೋಚದ, ತಮ್ಮಷ್ಟಕ್ಕೆ ತಾವು ಕಡಲೊಳಗೆ ಕನಸು ಕಾಣುತ್ತ¤ ಬದುಕುವ ಒಂಟಿ ಜೀವಿಗಳು. ಪ್ರೇಮಿಸುವ ಸಮಯದಲ್ಲಿ ಮಾತ್ರ ಒಂದನ್ನೊಂದು ಸ್ವಲ್ಪ ಸಮಯ ರಮಿಸುತ್ತವೆ, ಅಷ್ಟೇ. ಪ್ರೇಮಿಸುವ ಸಮಯದಲ್ಲೂ ಅಷ್ಟೇ ಗಂಡು ಅಕ್ಟೋಪಸ್ಸು ಬಹಳ ಜಾಗರೂಕವಾಗಿರುತ್ತವೆ. ಏಕೆಂದರೆ ಪ್ರೇಮ ಕ್ರಿಯೆಯ ನಂತರ ಹೆಣ್ಣು ಅಕ್ಟೋಪಸ್ಸು ಗಂಡು ಅಕ್ಟೋಪಸ್ಸನ್ನು ತಿನ್ನುತ್ತದೆ. ಏಕೆಂದರೆ, ಪ್ರೇಮಿಸಿದ ನಂತರ ಆಕೆಗೆ ಭಯಂಕರ ಹಸಿವಾಗುತ್ತದೆ. ಮೊಟ್ಟೆಯಿಡಲು ಆಕೆಗೆ ಶಕ್ತಿ ಬೇಕಾಗುತ್ತದೆ. ಹಾಗಾಗಿ, ಹೆಣ್ಣು ಅಕ್ಟೋಪಸ್ಸು ಗಂಡು ಅಕ್ಟೋಪಸ್ಸನ್ನು ನುಂಗಬೇಕಾಗುತ್ತದೆ. ಎಲ್ಲೋ ಕೆಲವು ಗಂಡುಗಳು ಮಾತ್ರ ಬಹಳ ಜಾಗರೂಕತೆಯಿಂದ ತಮ್ಮ ಮೋಹನಬಾಹುವನ್ನು ಅನತಿ ದೂರದಿಂದಲೇ ಹೆಣ್ಣಿನ ದೇಹಕ್ಕೆ ಅತಿ ಕ್ಲುಪ್ತವಾಗಿ ಸೋಕಿಸಿ, ಗರ್ಭವತಿ ಮಾಡಿ ಪಲಾಯನ ಮಾಡುತ್ತವೆ. ಆಕೆಯ ಸ್ಪರ್ಶಕ್ಕೆ ಹಾತೊರೆದು ಬಳಿಯಲ್ಲೇನಾದರೂ ಉಳಿದು ಬಿಟ್ಟರೆ ಆಕೆಗೇ ಆಹಾರವಾಗಬೇಕಾಗುತ್ತದೆ. ಹಾಗಾಗಿ ನಶ್ವರವೂ, ಅಲ್ಪಕಾಲೀನವೂ ಆದ ಅಕ್ಟೋಪಸ್ಸಿನ ಕುರಿತು ಕನ್ನಡಕಾವ್ಯದಲ್ಲಿ ನೀನು ಬರೆದಿರುವ ಅಬದ್ಧವಾದ ಸಾಲುಗಳನ್ನು ಮುಂದಿನ ಆವೃತ್ತಿಯಲ್ಲಾದರೂ ಬದಲಿಸಬೇಕಾಗುತ್ತದೆ, ಇಲ್ಲದಿದ್ದರೆ ಲಿಂಗ ಪಕ್ಷಪಾತಿಯಾದ ನಿನ್ನ ಕಾವ್ಯವನ್ನು ನಾನು ದ್ವೇಷಿಸಬೇಕಾಗುತ್ತದೆ ಎಂದು ದೂರದಿಂದಲೇ ಆಕೆಯ ಚಂದದ ಕಣ್ಣೀರನ್ನು ಒರೆಸಲು ನಾನು ಪ್ರಯತ್ನಿಸುತ್ತಿದ್ದೆ.
Related Articles
Advertisement
ಇಂತಹ ಹೊತ್ತಲ್ಲೇ ಅನಘ ರತ್ನವೊಂದರಂತೆ ನನ್ನ ಬಾಳಲ್ಲಿ ಹೊಕ್ಕಿದ್ದ ಆತ್ಮಸಖೀಯ ಸಾವು ಸಂಭವಿಸಿತ್ತು. ಬದುಕೆಂದರೆ ಸೌಂದರ್ಯೋಪಾಸನೆ ಮತ್ತು ಪ್ರೇಮಿಸುವ ಸುಖದ ಉತ್ತುಂಗದಲ್ಲಿ ಸದಾ ಶೇಷಶಯನನಂತೆ ಪವಡಿಸಿಕೊಂಡಿರುವುದು ಎಂದುಕೊಂಡಿದ್ದವನನ್ನು ಆಕೆಯ ಅಕಾಲ ಮರಣ ಶೀತಲ ಮಂಜುಗಡ್ಡೆಯೊಂದರ ಕೂರಲಗಿನಂತೆ ಇರಿದಿತ್ತು. “ಪ್ರೇಮಸುಖದ ಉತ್ತುಂಗವೆಂದರೆ ಸಾವಂತೆ ಅನಂತದಲ್ಲಿ ಲೀನವಾಗುವುದು’ ಅನ್ನುತ್ತಿದ್ದವಳು ನೋವಿನ ಅಸಾಧ್ಯ ಮಡುವಲ್ಲಿ ಸಿಲುಕಿ ನನ್ನನ್ನು ಯಾರಾದರೂ ಬದುಕಿಸಿ ಎಂದು ಮೊರೆಯಿಡುತ್ತ ಯಾವ ದೈವಿಕ ಸಹಾಯವೂ ಸಿಗದೆ ಲೋಕಕ್ಕೊಂದು ಶಾಪವಿಟ್ಟು ವಿರಮಿಸಿದ್ದಳು. ಕಟೀಲಿನ ದುರ್ಗಾಪರಮೇಶ್ವರಿ, ಗುಲ್ಬರ್ಗಾದ ಬಂದೇ ನವಾಜರು, ಹಿಮಾಲಯ ಶೃಂಗದ ಬೌದ್ಧ ಗುರು ಪದ್ಮಸಂಭವ, ಕೊಡಗಿನ ಕುಟ್ಟದ ಮಾಂಕಾಳಿ ಈ ಎಲ್ಲರ ಅಪರಿಮಿತ ದೈವಶಕ್ತಿಯ ಕಥೆಗಳನ್ನು ನನ್ನಿಂದ ಕೇಳಿದ್ದ ಆಕೆ ಇವರಲ್ಲಿ ಯಾರಾದರೂ ಅವಳನ್ನು ಕೊನೆಗಾದರೂ ಬದುಕಿಸಬಹುದು ಎಂದುಕೊಂಡಿದ್ದಳು. ಕೊನೆಗೆ, “ನಿನ್ನ ಮಹಾನುಭಾವರ ಪಿಂಗಾಣಿ ಬಟ್ಟಲನ್ನಾದರೂ ಹುಡುಕಿ ತಾ ಬದುಕಿಕೊಳ್ಳುತ್ತೇನೆ’ ಎಂದು ಅತ್ತಿದ್ದಳು. ಅವಳ ಕೊನೆಗಾಲದಲ್ಲಿ ಮತ್ತು ಬರಿಸುವ ನೋವು ನಿವಾರಕ ತೈಲವೊಂದನ್ನು ಕೊಡುವ ದೈನೇಶಿ ಪರಿಸ್ಥಿತಿ ನನ್ನದಾಗಿತ್ತು. “ನಿನ್ನ ದೈವಿಕ ಶಕ್ತಿಗಳ ಕಥೆಗಳು ಬರೀ ಲೊಟ್ಟೆ. ನೀನೊಬ್ಬ ಕಥೆ ಮಾತ್ರ ಹೇಳಬಲ್ಲ ವಿದೂಷಕ’ ಎನ್ನುವುದು ಅವಳು ನನ್ನೊಡನೆ ಬರೆದು ಹೇಳಿದ ಕೊನೆಯ ಮಾತಾಗಿತ್ತು. ನನ್ನ ಸೌಂದರ್ಯವನ್ನು ಕಂಡಿರುವ ನೀನು ನನ್ನ ಮೃತದೇಹವನ್ನು ಕಾಣಬಾರದು ಎನ್ನುವುದು ಅವಳ ಆಸೆಯಾಗಿತ್ತು. ಅದನ್ನೂ ಈಡೇರಿಸಿಕೊಂಡಿದ್ದಳು ಆಕೆ.
ಅನಘ ಪ್ರೇಮಿಯಾಗಿದ್ದವನು ಕಥೆ ಮಾತ್ರ ಬರೆಯಬಲ್ಲ, ಸಾವಿಂದ ಮರಳಿ ತರಲಾರದ ವಿದೂಷಕನಾಗಿ ಪರಿಣಮಿಸಿಬಿಟ್ಟೆಯಲ್ಲ ಎಂದು ಈಕೆ ಸಿಗರೇಟಿನ ಬೂದಿ ಉದುರಿಸುತ್ತ ಚುಚ್ಚಿದ್ದಳು. ಅದು ಒಂದು ರೀತಿಯ ಈಷ್ಯೆìಯ ಮಾತು. ಜೊತೆಗೆ ಇವನ ಜೊತೆ ಅವಳು ಇನ್ನಿಲ್ಲವೆಂಬ ನಿರಾಳತೆಯ ಉದ್ಘಾರವದು. “ಇನ್ನಾದರೂ ಮರಳಿ ಬರೆಯಲು ತೊಡಗು ಸುಂದರಾಂಗ. ನೀನು ಹುಟ್ಟಿರುವುದು ಬರೆದು ಆನಂದಿಸಲು. ಅರಿಷಡ್ವರ್ಗಗಳಲ್ಲಿ ಮುಳುಗೇಳಲಲ್ಲ’ ಎಂದೂ ಅಂದಿದ್ದಳು.ಇದೊಂದು ಸುಮ್ಮನೆ ಸಮಾಧಾನಿಸುವ ವ್ಯರ್ಥ ಮಾತು ಇವಳದು. ಆದರೂ ಇರಲಿ, ಇದನ್ನು ನಾನೇಕೆ ಗಂಭೀರವಾಗಿ ಪ್ರಯತ್ನಿಸಬಾರದು ಎಂದು ಹೇಳದೇ ಕೇಳದೇ ಹಡಗು ಹತ್ತಿ ಹೊರಟಿದ್ದೆ. ಎರಡು ಹಗಲು ಎರಡು ರಾತ್ರಿ ಸಂಪರ್ಕವೇ ಇಲ್ಲದ ನನ್ನನ್ನು ಮೂರನೇ ಇರುಳು, “ಎಲ್ಲಿರುವೆ ಧೀರಾ ರಾಜಗಂಭೀರಾ’ ಎಂದು ಕೇಳಿದ್ದಳು. “ಏಳು ಕಡಲಿನ ಆಚೆ, ಏಳು ಆಕಾಶದ ಈಚೆ ಹಸಿರು ಗಿಣಿಯ ಒಡಲಲ್ಲಿ ಮಾಣಿಕ್ಯ ಹುಡುಕುತ್ತಿರುವೆ’ ಎಂದು ಉತ್ತರಿಸಿದ್ದೆ. “ನೀನು ಪ್ರಯೋಜನವಿಲ್ಲ. ಬರುವಾಗ ನನಗೆ ಇನ್ನೊಬ್ಬ ರಾಜಕುಮಾರನನ್ನು ಹುಡುಕಿ ತಾ’ ಅಂದಿದ್ದಳು. “ಇನ್ನು ಹಾಗೆಲ್ಲ ಹುಡುಗಾಟಿಕೆ ಇಲ್ಲ. ಮಹಾನುಭಾವರೊಬ್ಬರ ಪಿಂಗಾಣಿ ಬಟ್ಟಲನ್ನು ಹುಡುಕುತ್ತ ದ್ವೀಪವೊಂದನ್ನು ತಲುಪಿರುವೆ. ಇನ್ನು ಕೆಲವು ಕಾಲದ ನಂತರ ಮತ್ತೆ ಸಿಗುವೆ’ ಎಂದು ಮತ್ತೂ ಹಲವು ಕಾಲ ಅವಳಿಂದ ಅಜ್ಞಾತನಾಗಿದ್ದೆ.
ಈಗ ನೋಡಿದರೆ, ನಾನು ಬರೆಯುತ್ತಿರುವ ಈ ಅಂಕಣವನ್ನು ವಾರವಾರವೂ ಮುಂದಿಟ್ಟುಕೊಂಡು, ಟೀಕೆಟಿಪ್ಪಣಿಗಳನ್ನು ಬರೆದಿಟ್ಟುಕೊಂಡು ಕ್ಲುಪ್ತವಾಗಿ ಆದರೆ ಮುಲಾಜಿಲ್ಲದೆ ವಿಮರ್ಶಿಸುತ್ತಾಳೆ.
“ನನ್ನನ್ನು ಯಾಮಾರಿಸಿದ ಹಾಗೆ ಓದುಗರನ್ನೂ ಯಾಕೆ ಯಾಮಾರಿಸುತ್ತೀಯಾ? ಪಿಂಗಾಣಿ ತಟ್ಟೆಯ ರಹಸ್ಯದ ಬದಲು ನಿನ್ನ ಪ್ರೇಮಪ್ರಲಾಪಗಳನ್ನು ಬರೆಯುತ್ತೀಯಾ, ಆಡು ಮಾರುವವರ ಮೊದಲ ವಿವಾಹ ವೈಫಲ್ಯದ ಕಥೆಯನ್ನು ಹೇಳಬೇಕಾದವನು ಮಕ್ಕಾ ಯಾತ್ರೆಯ ಪುರಾಣ ಬರೆಯುತ್ತೀಯಾ, ಕನ್ನಡನಾಡಿನ ಸೂಫಿ ಸಂತನ ಜೀವನ ಕಥೆಯನ್ನು ಹೇಳಬೇಕಾದವನು ನಿನ್ನ ಲಡಾಸು ಪೆಠಾರಿಯ ಪ್ರವರವನ್ನು ಬರೆಯುತ್ತೀಯಾ. ಅಕ್ಟೋಪಸ್ ಬೆೇಟೆಯ ಕಥೆ ಹೇಳಬೇಕಾದವನು ನಕ್ಷತ್ರಗಳ ವಿರಹದ ಕಥೆಯನ್ನು ವಿವರಿಸುತ್ತೀಯಾ. ನೀನು ಬರೆದಿದ್ದನ್ನು ಏನೆಂದು ಪರಿಭಾವಿಸುವುದು?’ ಎಂದು ಇನ್ನೊಂದು ಸಿಗರೇಟು ಹಚ್ಚುತ್ತಾಳೆ. ಫೋನಿನ ಆಚೆ ತುದಿಯಲ್ಲಿ ಆಕೆ ಲೈಟರ್ ಹಚ್ಚುವ ತೀಕ್ಷ್ಣ ಸದ್ದು.
ಏನು ಗೊತ್ತಾ? ಇಲ್ಲಿ ನಾನು ಇಲ್ಲಿ ವೀಳ್ಯದೆಲೆ ಜಗಿಯುವುದನ್ನು ಕಲಿತಿದ್ದೇನೆ. ಪುರಾಣಗಳನ್ನು ಹಾಡಾಗಿ ಹೇಳುವ ವೃದ್ಧೆಯೊಬ್ಬಳ ಸ್ನೇಹವಾಗಿದೆ. ಆಕೆಯ ಎಲೆ ಅಡಿಕೆಯ ಸಣ್ಣ ಸಂಚಿ, ಬೆಳ್ಳಿಯ ಸಣ್ಣ ಕರಂಡಿಕೆಯಲ್ಲಿ ಕಡಲ ಹವಳಗಳ ಪುಡಿಯಿಂದ ಮಾಡಿದ ಸುಣ್ಣ ಮತ್ತು ಮಂಗಳೂರಿಂದ ಹಡಗಲ್ಲಿ ಬರುವ ನೀರಲ್ಲಿ ನೆನೆಸಿದ ಗೋಟಡಿಕೆ. ಅವಳು ಹಾಡು ಹೇಳುವುದನ್ನು ಕೇಳಿ ಮುಗಿಸಿ ಸೈಕಲ್ಲು ಹೊಡೆಯುತ್ತ ದ್ವೀಪಕ್ಕೊಂದು ಸುತ್ತು ಹಾಕುತ್ತೇನೆ. “ಚೂರುಪಾರಾಗಿರುವ ಜೀವನದ ಬಗ್ಗೆ ಒಂಚೂರು ಒಂಟಿಯಾಗಿ ಚಿಂತಿಸಬೇಕು. ಈಗ ದಯವಿಟ್ಟು ಫೋನ್ ಇಡು’ ಎಂದು ವೀಳ್ಯದೆಲೆ ಬಾಯಿಗೆ ಹಾಕುತ್ತ ಬಾಯ್ ಹೇಳುತ್ತೇನೆ.
ಅಬ್ದುಲ್ ರಶೀದ್