ಹೈದ್ರಾಬಾದ್: ಅನಾರೋಗ್ಯದಿಂದ ಮೃತಪಟ್ಟ ತನ್ನ ಐದು ವರ್ಷ ಪ್ರಾಯದ ಮಗುವಿನ ಶವವನ್ನು ಮಣ್ಣು ಮಾಡಲು 38 ವರ್ಷದ ತಂದೆ ತನ್ನ ಮಗುವಿನ ಶವದೊಂದಿಗೆ ಬರೋಬ್ಬರಿ 88 ಕಿಲೋ ಮೀಟರ್ ನಡೆದುಬಂದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ತೆಲಂಗಾಣದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಸ್ಥಿತಿ ಇರುವುದರಿಂದ ಈ ಹೃದಯವಿದ್ರಾವಕ ಘಟನೆ ಸರಿಸುಮಾರು ಒಂದು ವಾರಗಳ ಬಳಿಕ ವರದಿಯಾಗಿದೆ. ಅನಂತಪುರ ಜಿಲ್ಲೆಯ ಗೊರಂಟ್ಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ದಿನಗೂಲಿ ಕಾರ್ಮಿಕನಾಗಿರುವ ಮಂಚಾಲ ಮನೋಹರ್ ಎಂಬ ವ್ಯಕ್ತಿಯ ಐದು ವರ್ಷದ ಮಗು ದೇವಾ ತೀವ್ರ ಸ್ವರೂಪದ ಗಂಟಲು ಬೆನೆಯಿಂದ ಬಳಲುತ್ತಿತ್ತು. ಈ ಸಂದರ್ಭದಲ್ಲಿ ಮನೋಹರ್ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.
ಆದರೆ ಇಲ್ಲಿ ಮಗುವಿನ ಸ್ಥಿತಿ ಇನ್ನಷ್ಟು ಗಂಭೀರವಾಗತೊಡಗಿದಾಗ ಮಗುವನ್ನು ಹಿಂದೂಪುರದಲ್ಲಿರುವ ಸರಕಾರಿ ಆಸ್ಪತ್ರೆಗೆ ವರ್ಗಾಯಿಸಲಾಗುತ್ತದೆ. ಇಲ್ಲಿ ಈ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ನಗರದಲ್ಲಿರುವ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ.
ಆದರೆ, ಅಷ್ಟೆಲ್ಲಾ ಅನುಕೂಲ ಇಲ್ಲದಿರುವ ಕಾರಣ ಮನೋಹರ್ ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಕಳೆದ ಬುಧವಾರ ಮಗುವಿನ ಮೂಗಿನಲ್ಲಿ ಹಾಗೂ ಬಾಯಲ್ಲಿ ರಕ್ತಸ್ರಾವವಾಗಿದೆ ಮತ್ತು ಕೆಲವೇ ಸಮಯದಲ್ಲಿ ಮಗು ತೀರಿಕೊಂಡಿದೆ. ಆದರೆ ಬಿಗು ಕರ್ಫ್ಯೂ ಕಾರಣದಿಂದ ತನ್ನ ಮಗುವಿನ ಶವವನ್ನು ಸ್ವಂತ ಗ್ರಾಮಕ್ಕೆ ಸಾಗಿಸಲು ಯಾವುದೇ ವಾಹನ ಸೌಕರ್ಯ ಸಿಗದೇ ಇದ್ದ ಸಂದರ್ಭದಲ್ಲಿ ತಂದೆ ಮನೋಹರ್ ದೇವನ ಶವವನ್ನು ಹೊತ್ತುಕೊಂಡೇ 88 ಕಿಲೋಮೀಟರ್ ಕ್ರಮಿಸಿ ಬಂದಿದ್ದಾರೆ.
ಹಿಂದೂಪುರದ ಆಸ್ಪತ್ರೆಯಿಂದ ಅನಂತಪುರದವರೆಗೆ ಮಗುವಿನ ಶವವನ್ನು ಹೊತ್ತುಕೊಂಡು ಕಾಲ್ನಡಿಗೆಯಲ್ಲೇ ಸಾಗಿ ಬಂದ ಮನೋಹರ್ ಬಳಿಕ ತನ್ನ ಕಂದನ ಶವವನ್ನು ಚಿತ್ರಾವತಿ ನದಿ ದಂಡೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.