Advertisement

ಕಂದಾಯ ಸಚಿವರ ಕಾಲಿಗೆ ಬಿದ್ದು ಪರಿಹಾರಕ್ಕೆ ಅಂಗಲಾಚಿದ ರೈತ

12:30 AM Jan 30, 2019 | Team Udayavani |

ಬೈಲಹೊಂಗಲ: “ಬರ ಬಿದ್ದು ವಿಮಾ ಪರಿಹಾರ ಕೂಡ ನಮಗೆ ದಕ್ಕಿಲ್ಲ. ನೀವಾದ್ರೂ ಪರಿಹಾರ ಕೊಡಸ್ರಿ’ ಎಂದು ರೈತನೊಬ್ಬ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರ ಕಾಲಿಗೆ ಬಿದ್ದು ಬೇಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಸಚಿವ ಸಂಪುಟದ ಉಪಸಮಿತಿ ಮಂಗಳವಾರ ಬೆಳಗ್ಗೆ ಬರ ಪರಿಹಾರ ಅಧ್ಯಯನ ನಡೆಸುತ್ತಿದ್ದ ವೇಳೆ ತಾಲೂಕಿನ ಕಲಕುಪ್ಪಿ ಗ್ರಾಮದ ಕ್ರಾಸ್‌ ಸಮೀಪ
ಸಚಿವರ ಬಳಿ ಬಂದ ರೈತನೊಬ್ಬ, “ನಮ್ಮ ಕಡೆಗೆ ಬರದ ಸಮಸ್ಯೆ ಆಗೇತಿ ಸಾಹೇಬ್ರ. ದನಗಳಿಗೆ ಕುಡಿಯಲು ನೀರು, ಮೇವಿಲ್ಲದ್ದರಿಂದ ಮಾರುವ ಸ್ಥಿತಿ ಐತಿ. ಸರಕಾರದಿಂದ ಬರಬೇಕಾಗಿದ್ದ ವಿಮಾ ಪರಿಹಾರ ಇನ್ನೂ ಬಂದಿಲ್ಲ. ಎಷ್ಟು ಬಾರಿ ವಿನಂತಿ
ಮಾಡಿಕೊಂಡರೂ ಇನ್ನೂವರೆಗೆ ಪರಿಹಾರ ಸಿಕ್ಕಿಲ್ಲ. ನೀವಾದ್ರೂ ಪರಿಹಾರ ಕೊಡಸ್ರಿ’ ಎಂದು ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ಮನವಿ ಮಾಡಿದ್ದಾನೆ.

Advertisement

ಬರಗಾಲದಿಂದ ನೇಸರಗಿ ಭಾಗದ ಜನತೆ ತತ್ತರಿಸಿದ್ದೇವೆ. ಈ ಭಾಗದಲ್ಲಿ ನೀರಾವರಿ ಮಾಡಿ ಶಾಶ್ವತ ಪರಿಹಾರ ದೊರಕಿಸಿ ಕೊಡಿ ಎಂದು ರೈತ ಸಚಿವರಲ್ಲಿ ಮನವಿ ಮಾಡಿಕೊಂಡರು. ರೈತರನ್ನು ಸಮಾಧಾನ ಪಡಿಸಿದ ಸಚಿವ ದೇಶಪಾಂಡೆ, ಬೆಳೆ ವಿಮಾ ಯೋಜನೆಯಡಿ ಹಣ ತುಂಬಿದ ಜನಕ್ಕೆ ಅನ್ಯಾಯವಾಗಬಾರದು. ಶೀಘ್ರವೇ ಪರಿಹಾರ ಹಣವನ್ನು ಜಿಲ್ಲಾಡಳಿತದ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಲಕುಪ್ಪಿ ಗ್ರಾಮದ ರೈತ ಬಸಪ್ಪ ಗುರವ ಅವರು 1 ಎಕರೆ 13 ಗುಂಟೆಯಲ್ಲಿ ಬೆಳೆದ ಜೋಳ, ಕಡಲೆ ಬೆಳೆ ಹಾಗೂ ನೇಮಣ್ಣ ವನ್ನೂರ ಅವರ ಹೊಲದಲ್ಲಿ ಹಾಳಾಗಿರುವ ಬೆಳೆಯನ್ನು ಸಚಿವರು, ತಂಡದವರು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next