Advertisement

ಹೆಸ್ಕಾಂ ಕಚೇರಿ ಗೇಟಿಗೆ ಬೀಗ ಹಾಕಿ ಪ್ರತಿಭಟಿಸಿದ ರೈತ

01:15 PM Dec 28, 2019 | Suhan S |

ಹಾವೇರಿ: ಹೊಲದಲ್ಲಿದ್ದ ವಿದ್ಯುತ್‌ ಕಂಬಗಳನ್ನು ತೆಗೆದಿರುವುದು ಹಾಗೂ ಜಮೀನಿನಲ್ಲಿರುವ ಪಂಪ್‌ ಸೆಟ್‌ಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರೈತನೋರ್ವ ಹೆಸ್ಕಾಂ ಕಚೇರಿ ಗೇಟಿಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

Advertisement

ಕುರುಬಗೊಂಡ ಗ್ರಾಮದ ಭರಮಗೌಡ ರಾಯಣ್ಣನವರ ಪ್ರತಿಭಟನೆ ಮಾಡಿದ ರೈತ. ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರು ಬಂದು ಹೆಸ್ಕಾಂ ಕಚೇರಿ ಆವರಣ ಗೇಟಿಗೆ ಬಾಗಿಲು ಹಾಕಿ ಪ್ರತಿಭಟನೆ ಆರಂಭಿಸಿದರು. ಇದರಿಂದ ಆಗ ತಾನೇ ಕಚೇರಿಗೆ ಆಗಮಿಸುತ್ತಿದ್ದ ಕಚೇರಿಯ ಸಿಬ್ಬಂದಿ, ಅಧಿಕಾರಿಗಳು ಗೇಟಿನ ಹೊರಗೇ ನಿಲ್ಲಬೇಕಾಯಿತು. ಅಧಿಕಾರಿ, ಸಿಬ್ಬಂದಿಗಳು ಎಷ್ಟೇ ಮನವೊಲಿಸಿದರೂ ರೈತ ಗೇಟು ತೆಗೆಯಲು ಒಪ್ಪಲಿಲ್ಲ. ಆಗ ಕಚೇರಿ ಸಿಬ್ಬಂದಿಗಳೇ ಬಲವಂತದಿಂದ ಆತನನ್ನು ಪಕ್ಕಕ್ಕಿ ತಳ್ಳಿ ಗೇಟ್‌ ತೆಗೆದು ಒಳ ನಡೆದರು.

ರೈತನೊಂದಿಗೆ ಅಧಿಕಾರಿ, ಸಿಬ್ಬಂದಿಗಳು ವಾಗ್ವಾದ ನಡೆಸುತ್ತಿದ್ದಂತೆ ನೂರಾರು ಜನರು ಜಮಾಯಿಸಿ ಕೆಲಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈತನನ್ನು ಸಮಾಧಾನಗೊಳಿಸಿ, ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳ ಎದುರು ಕರೆದೊಯ್ದರು.

ದೂಡಿ ಒಳಗೆ ಬಂದರು: ಕಚೇರಿಯ ಹಿರಿಯ ಅಧಿಕಾರಿಗಳ ಎದುರು ಬಂದ ರೈತ ಭರಮಗೌಡ, ಕಳೆದ ಒಂದು ವರ್ಷದಿಂದ ಅಲೆದಾಡಿದರೂ ಅಧಿಕಾರಿಗಳು ಕೆಲಸ ಮಾಡಿಕೊಡುತ್ತಿಲ್ಲ. ಮೊನ್ನೆ ನಾನು ಅವರಿಗೆ ಎಚ್ಚರಿಕೆ ಕೊಟ್ಟಂತೆ ಇಂದು ಗೇಟಿಗೆ ಕೀಲಿ ಹಾಕಿ ಪ್ರತಿಭಟನೆ ಮಾಡಿದ್ದೇನೆ. ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿ ನನ್ನನ್ನು ಬಲವಂತದಿಂದ ದೂಡಿ ಕೀಲಿ ತೆಗೆದರು. ಇವರ ವರ್ತನೆಯಿಂದ ಪೆಟ್ರೋಲ್‌ ಸುರಿದುಕೊಂಡು ಕಚೇರಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುವಷ್ಟು ಕೋಪ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಅಧಿಕಾರಿ : ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಹಾಯಕ ಇಂಜಿನಿಯರ್‌ ಸಿ.ವಿ. ಹೊಸಮನಿ, ಪ್ರತಿಭಟನಾನಿರತ ರೈತನ ಹೊಲದಲ್ಲಿದ್ದ ವಿದ್ಯುತ್‌ ಕಂಬಗಳನ್ನು ಇಲಾಖೆಯಿಂದ ತೆಗೆದಿಲ್ಲ. ಪಕ್ಕದ ಹೊಲದವರು ತೆಗೆದಿರಬಹುದು. ಕಂಬಗಳು ಅಲ್ಲಿಯೇ ಇವೆ. ಇನ್ನು ರೈತನ ಹೊಲ ವ್ಯಾಪ್ತಿಯಲ್ಲಿ 25 ಎಚ್‌ಪಿ ವಿದ್ಯುತ್‌ ಪರಿವರ್ತಕವಿದ್ದು, ಅದನ್ನು ಇವತ್ತೇ 63 ಎಚ್‌ಪಿ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕ ಅಳವಡಿಸಿ ರೈತನ ಹೊಲಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡಲಾಗುವುದು. ಬಳಿಕ ಅಕ್ರಮ-ಸಕ್ರಮ ಯೋಜನೆಯಡಿ ಅದನ್ನು ಸಕ್ರಮಗೊಳಿಸಲಾಗುವುದು. ಸದ್ಯಕ್ಕೆ ವಿದ್ಯುತ್‌ ಸಂಪರ್ಕ ಸಮಸ್ಯೆ ಬಗೆಹರಿಸಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next