Advertisement

ಡಿಎಪಿ ಸಿಗದೆ ಹಿಂಗಾರಲ್ಲಿ ಕಂಗಾಲಾದ ರೈತ!

03:26 PM Oct 22, 2021 | Team Udayavani |

ರಾಯಚೂರು: ಮುಂಗಾರು ಮುಗಿದು ಹಿಂಗಾರು ಶುರುವಾಗಿದ್ದರೂ ರಸಗೊಬ್ಬರ ಸಮಸ್ಯೆ ಮಾತ್ರ ನೀಗಿಲ್ಲ. ಇದರಿಂದ ರೈತರು ಪೇಚಾಡುವಂತಾಗಿದ್ದು, ಡಿಎಪಿ ಗೊಬ್ಬರವಿಲ್ಲದೇ ಪರದಾಡುತ್ತಿದ್ದಾರೆ.

Advertisement

ಸರ್ಕಾರ ಡಿಎಪಿ, ಯೂರಿಯಾಕ್ಕೆ ಸಬ್ಸಿಡಿ ಹೆಚ್ಚು ನೀಡಿ, ಬೇರೆ ಕಂಪನಿಗಳಿಗೆ ಕಡಿತಗೊಳಿಸಿದೆ ಎನ್ನಲಾಗುತ್ತಿದ್ದು,ಉಳಿದ ಗೊಬ್ಬರಗಳ ಬೆಲೆ ಹೆಚ್ಚಾಗಿದೆ. ಆದರೆ, ಸಬ್ಸಿಡಿ ಹೆಚ್ಚಿಸಿದರೂ ಉತ್ಪಾದನೆ ಕುಗ್ಗಿಸಿದ್ದು, ಎಲ್ಲೆಡೆ ಡಿಎಪಿ ಸಿಗುತ್ತಿಲ್ಲ. ಆದರೆ, ಹಿಂಗಾರು ಬಿತ್ತನೆಗೆ ಮುಂದಾಗಿರುವ ರೈತರು ಸಾಂಪ್ರದಾಯದಂತೆ ಡಿಎಪಿ ಕೇಳಿದರೆ ಯಾವುದೇ ಸೊಸೈಟಿಯಲ್ಲಾಗಲಿ, ಅಂಗಡಿಗಳಲ್ಲಾಗಲಿ ಗೊಬ್ಬರವೇ ದಾಸ್ತಾನಿಲ್ಲ. ಬೇಕಿದ್ದರೆ ಬೇರೆ ಗೊಬ್ಬರವಿದೆ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ.

ಡಿಎಪಿ 1250 ರೂ.ಗೆ ಸಿಕ್ಕರೆ, ಬೇರೆ ರಸಗೊಬ್ಬರ ಬೆಲೆ 1350 ಮೇಲ್ಪಟ್ಟು ಇದೆ. ಬೆಲೆ ಹೋಲಿಕೆ ಮಾಡಿದರೆ ಪ್ರತಿ ಚೀಲಕ್ಕೆ 200ರಿಂದ 300 ರೂ. ವರೆಗೆ ಹೆಚ್ಚು ಕೊಟ್ಟು ಖರೀದಿಸಬೇಕಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.

ಡಿಎಪಿ ಪೂರೈಕೆಯೇ ಕಡಿಮೆ

ಸರ್ಕಾರ ಈ ವರ್ಷದ ಮುಂಗಾರು ಹಂಗಾಮಿನಲ್ಲಿಯೂ ಡಿಎಪಿ ರಸಗೊಬ್ಬರವನ್ನು ಅಗತ್ಯದಷ್ಟು ಪೂರೈಸಿಲ್ಲ. ಮುಂಗಾರು ಹಂಗಾಮಿನಲ್ಲಿ ಯೂರಿಯಾ 63888 ಮೆಟ್ರಿಕ್‌ ಟನ್‌ ಬೇಡಿಕೆಯಿದ್ದರೆ, 71533 ಮೆಟ್ರಿಕ್‌ ಟನ್‌ ಪೂರೈಕೆಯಾಗಿತ್ತು. ಆದರೆ, ಡಿಎಪಿ 33319 ಮೆಟ್ರಿಕ್‌ ಟನ್‌ ಬೇಡಿಕೆಯಿದ್ದರೆ, ಬಂದಿದ್ದು ಮಾತ್ರ 28767 ಮೆಟ್ರಿಕ್‌ ಟನ್‌ ಮಾತ್ರ. ಅಂದರೆ ಸರಾಸರಿ 4550 ಮೆಟ್ರಿಕ್‌ ಟನ್‌ ರಸಗೊಬ್ಬರ ಕಡಿಮೆ ಬಂದಿದೆ. ಇನ್ನೂ ಕಾಂಪ್ಲೆಕ್ಸ್‌ 1,22,765 ಮೆಟ್ರಿಕ್‌ ಟನ್‌ ಬೇಕಿದ್ದರೆ, 1,20,039 ಮೆಟ್ರಿಕ್‌ ಟನ್‌ ಬಂದಿತ್ತು. ಈಗ ಹಿಂಗಾರು ಶುರುವಾಗಿದ್ದು ಎಲ್ಲೆಡೆ ಬಿತ್ತನೆ ಕಾರ್ಯ ಶುರುವಾಗಿದೆ. 11,325 ಯೂರಿಯಾ ಬೇಡಿಕೆ ಇದ್ದರೆ7,506 ಮೆಟ್ರಿಕ್‌ ಟನ್‌ ಮೆಟ್ರಿಕ್‌ ಟನ್‌ ಬಂದಿದೆ. ಡಿಎಪಿ 2,336 ಮೆಟ್ರಿಕ್‌ ಟನ್‌ ಬೇಡಿಕೆ ಇದ್ದರೆ; 536 ಮೆಟ್ರಿಕ್‌ ಟನ್‌ ಬಂದಿದೆ. ಇನ್ನೂ ಕಾಂಪ್ಲೆಕ್ಸ್‌15,664ಮೆಟ್ರಿಕ್‌ಟನ್‌ ಬೇಡಿಕೆ ಇದ್ದರೆ 5,647 ಮೆಟ್ರಿಕ್‌ ಟನ್‌ ಬಂದಿದೆ. ಒಟ್ಟಾರೆ 29,864 ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಡಿಕೆಯಿ¨ರೆ, ‌ª ಈವರೆಗೆ 13,688 ಮೆಟ್ರಿಕ್‌ ಟನ್‌ ಮಾತ್ರ ಬಂದಿದೆ. ಇನ್ನೂ ಒಂದು ರೇಕ್‌ ಡಿಎಪಿ ಬರಬಹುದು ಎನ್ನಲಾಗುತ್ತಿದೆ.

Advertisement

ಸಬ್ಸಿಡಿ, ಪ್ರೋತ್ಸಾಹ ಧನ ಕೊರತೆ

ಸರ್ಕಾರ ಡಿಎಪಿಗೆ ಸಬ್ಸಿಡಿ ಜತೆಗೆ ಪ್ರೋತ್ಸಾಹ ಧನ ಕೂಡ ನೀಡುತ್ತಿದೆ. ಇದರಿಂದ ರೈತರಿಗೆ ಇದು ಕಡಿಮೆ ಬೆಲೆಗೆ ಸಿಗುತ್ತದೆ. ಆದರೆ, ಈಗ ವರ್ತಕರು, ಕೃಷಿ ಅಧಿಕಾರಿಗಳು 10-20-26, 20-20-013, 20-20-0 ರಸಗೊಬ್ಬರ ಬಳಸುವಂತೆ ಹೇಳುತ್ತಿದ್ದಾರೆ. ಆದರೆ, ಡಿಎಪಿಗೆ ಸಿಕ್ಕಷ್ಟು ಸಬ್ಸಿಡಿ, ಪ್ರೋತ್ಸಾಹ ಧನ ಬೇರೆ ಗೊಬ್ಬರಗಳಿಗೆ ಸರಿಯಾಗಿ ಸಿಗದಿರುವುದೇ ಹೊರೆಯಾಗುತ್ತಿದೆ. ಅಧಿಕಾರಿಗಳ ವಿಶ್ಲೇಷಣೆ ಪ್ರಕಾರ ಡಿಎಪಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ತೈಲ ಬೆಲೆ ಹೆಚ್ಚಳದಿಂದ ಮುಂಗಾರಿನಿಂದಲೇ ಆಮದು ಕಡಿತಗೊಳಿಸಿದ್ದು, ಸ್ಥಳೀಯ ಕಂಪನಿಗಳ ಉತ್ಪನ್ನಗಳಿಗೆ ಉತ್ತೇಜನ ನೀಡಲು ಒತ್ತು ನೀಡಲಾಗುತ್ತಿದೆ ಎನ್ನುತ್ತಾರೆ. ಆದರೆ, ಪ್ರತಿ ರೂಪಾಯಿಗೂ ಲೆಕ್ಕಾಚಾರ ಮಾಡುವ ರೈತರಿಗೆ ನೂರಾರು ಹೆಚ್ಚು ಬೆಲೆ ಗೊಬ್ಬರ ಖರೀದಿಸುವುದು ಹೊರೆಯಾಗುತ್ತಿದೆ.

ಮಾರುಕಟ್ಟೆಯಲ್ಲಿ ಡಿಎಪಿ ರಸಗೊಬ್ಬರ ಸಿಗದಿರುವುದು ಅಂತಾರಾಷ್ಟ್ರೀಯ ಸಮಸ್ಯೆ. ಈ ಬಗ್ಗೆ ಈಗಾಗಲೇ ನಾವು ರೈತರಿಗೆ ಮನವರಿಕೆ ಮಾಡಿಕೊಡುವಂತೆ ಎಲ್ಲ ವರ್ತಕರಿಗೆ ತಿಳಿಸಿದ್ದೇವೆ. ಅಲ್ಲದೇ, ಮುಂಗಾರು ಹಂಗಾಮಿನಲ್ಲಿಯೇ ನಾವು ಡಿಪಿಎ ಬದಲಿಗೆ 10-20-26, 20-20-013, 20-20-0 ಗೊಬ್ಬರ ನೀಡಲು ತಿಳಿಸಲಾಗಿದೆ. ಹಿಂಗಾರಿನಲ್ಲಿ ಜೋಳ, ಕಡಲೆಗೂ ಡಿಪಿಎಗಿಂತ ಬೇರೆ ರಸಗೊಬ್ಬರ ಖರೀದಿಸುವುದು ಸೂಕ್ತವಾಗಿದ್ದು, ರೈತರು ಕಾಲಕ್ಷೇಪ ಮಾಡದೆ ಬಿತ್ತನೆಗೆ ಮುಂದಾಗಬೇಕು. -ನಯೀಮ್‌ ಹುಸೇನ್‌, ಉಪನಿರ್ದೇಶಕ, ಕೃಷಿ ಇಲಾಖೆ ಸಿದ್ಧಯ್ಯಸ್ವಾಮಿ ಕುಕನೂರು

 

Advertisement

Udayavani is now on Telegram. Click here to join our channel and stay updated with the latest news.

Next