ಅಂಕೋಲಾ: ಆಂತರಿಕ ಕಲಹ ಮತ್ತು ಆಸ್ತಿ ವಿವಾದದಿಂದ ಒಡೆದು ಹೋದ ಕುಟುಂಬದ ಸಮಸ್ಯೆಯನ್ನು ಸ್ಥಳೀಯ ಗ್ರಾಪಂ ಸಾಮಾಜಿಕ ನ್ಯಾಯ ಸಮಿತಿ ಬಗೆಹರಿಸಿ ಎಲ್ಲರನ್ನೂ ಒಂದುಗೂಡಿಸಿ ಸುಖೀ ಜೀವನ ನಡೆಸಲು ದಾರಿ ಮಾಡಿಕೊಟ್ಟ ಘಟನೆ ತಾಲೂಕಿನ ಅಗಸೂರಿನಿಂದ ವರದಿಯಾಗಿದೆ.
ಅಗಸೂರು ಗ್ರಾಮದ ಉಳಗದ್ದೆಯ ಲೋಕಪ್ಪಾ ತಿಮ್ಮಪ್ಪಾ ನಾಯ್ಕ ಕುಟುಂಬವೇ ಈಗ ಒಂದಾಗಿದೆ.
ಕಳೆದ 25 ವರ್ಷಗಳಿಂದ ಮನೆಯಲ್ಲಿನ ಚಿಕ್ಕಪುಟ್ಟ ಕಾರಣಗಳಿಗಾಗಿ ಮನಸ್ತಾಪಗೊಂಡು ಕುಟುಂಬದಲ್ಲಿ ಬಿರುಕು ಉಂಟಾಗಿತ್ತು. ಆರು ಜನ ಸಹೋದರ- ಸಹೋದರಿಯರನ್ನು ಒಳಗೊಂಡ ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮನೆ ಕಟ್ಟಿಕೊಳ್ಳಲು ತಗಾದೆ ಎದ್ದು, ನ್ಯಾಯಾಲಯದ ಮೇಟ್ಟಿಲೇರಿತ್ತು. ಇದರಿಂದಾಗಿ ನಾಲ್ಕು ಮನೆಗಳು ಗೋಡೆ ಹಂತಕ್ಕೆ ಬಂದು ಅರ್ಧಕ್ಕೆ ನಿಂತಿದ್ದವು. ಹೀಗಾಗಿ ಈ ಕುಟುಂಬದವರೆಲ್ಲ ಜೋಪಡಿಯಲ್ಲೇ ವಾಸಿಸುವಂತಾಗಿತ್ತು.
ಲೋಕಪ್ಪ ನಾಯ್ಕರ ಕುಟುಂಬದಲ್ಲಿನ ಕಲಹ ಕಂಡು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಕಾರ್ಯದರ್ಶಿ ಸುಭಾಷ ಕಾರೇಬೈಲ ಮುಂದಾಗಿ ಅಗಸೂರು ಗ್ರಾಪಂ ಸದಸ್ಯ ಗೋಪಾಲ ನಾಯಕ ಹಾಗೂ ರಾಮಚಂದ್ರ ನಾಯಕರ ವಿಶೇಷ ಸಹಕಾರದಲ್ಲಿ ಗ್ರಾಪಂ ಕಚೇರಿಯಲ್ಲಿ ಉಪಾಧ್ಯಕ್ಷ ಯಶ್ವಂತ ಗೌಡರ ಅಧ್ಯಕ್ಷತೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಸಭೆ ನಡೆಸಿದರು.
ಈ ಸಭೆಗೆ ಕುಟುಂಬಸ್ಥರೆಲ್ಲರನ್ನೂ ಕರೆದು ವೈಷಮ್ಯದ ಕುರಿತು ಚರ್ಚಿಸಿ ಆಸ್ತಿ ವಿವಾದವನ್ನು ಬಗೆಹರಿಸಿ, ನ್ಯಾಯಾಲಯದಲ್ಲಿ ಹೂಡಿದ್ದ ವ್ಯಾಜ್ಯವನ್ನೂ ಹಿಂತೆಗೆದುಕೊಳ್ಳುವ ನಿರ್ಧಾರದ ಮೂಲಕ ಈ ಕುಟುಂಬವು ಒಂದಾಗಿದೆ.
ಸಭೆಯಲ್ಲಿ ಹಾಜರಿದ್ದ ಪಿಎಸ್‌ಐ ಶ್ರೀಧರ ಮಾತನಾಡಿ, ಪ್ರತಿ ಮನೆಯಲ್ಲೂ ವೈಷಮ್ಯಗಳಿರುವುದನ್ನು ಕಾಣುತ್ತೇವೆ. ಅದನ್ನು ಕುಟುಂಬದಲ್ಲಿಯೇ ಪರಿಹರಿಸಿಕೊಂಡರೆ ಸುಖವಾಗಿ ಜೀವನ ಸಾಗಿಸಬಹುದು ಎಂದರು.
ಗ್ರಾಪಂ ಸದಸ್ಯ ಗೋಪಾಲ ನಾಯಕ ಮಾತನಾಡಿ, ನಾವು ಎಲ್ಲೇ ಹೋದರೂ, ನಮ್ಮ ಮನೆಯಲ್ಲಿ ಸಿಗುವ ನೆಮ್ಮದಿ- ಸಂತೋಷ ಇನ್ನೆಲ್ಲೂ ಸಿಗಲು ಸಾಧ್ಯವಿಲ್ಲ. ತಾವೆಲ್ಲರೂ ಅರ್ಧಕ್ಕೇ ನಿಂತ ಮನೆಯನ್ನು ಪೂರ್ತಿಗೊಳಿಸಿ ಸಾಮರಸ್ಯ ಬೆಸೆದು ಜೀವನ ಸಾಗಿಸಿ ಎಂದರು.
ಕುಟುಂಬದ ನವೀನ ನಾಯ್ಕ ಮಾತನಾಡಿ, ನಮ್ಮ ಕುಟುಂಬದಲ್ಲಿನ ವೈಷಮ್ಯಕ್ಕೆ ನಾವು ಎಂದೋ ತೆರೆ ಎಳೆಯಬೇಕಿತ್ತು. ಆದರೆ ಇಂದು ಗ್ರಾಪಂ ಸದಸ್ಯರಾದ ಗೋಪಾಲ ನಾಯಕ ಹಾಗೂ ರಾಮಚಂದ್ರ ನಾಯಕ ನೇತೃತ್ವದಲ್ಲಿ ಈ ಆಶಯ ಕೈಗೂಡಿದೆ. ಸಾಮಾಜಿಕ ನ್ಯಾಯ ಸಮಿತಿ ನೀಡಿದ ನ್ಯಾಯವನ್ನು ಸ್ವೀಕರಿಸಿ ಒಂದಾಗಿ, ನಮ್ಮ ನಮ್ಮ ಮನೆಗಳನ್ನು ಕಟ್ಟಿಕೊಳ್ಳುತ್ತೇವೆ ಎಂದರು.
ಗ್ರಾಪಂ ಸದಸ್ಯರಾದ ನಿರ್ಮಲಾ ನಾಯಕ, ಹವಾಲ್ದಾರ್ ಮೋಹನದಾಸ ಶೇಣ್ವಿ, ಕರವೇ ರಂಜನ್ ಹಿಚ್ಕಡ, ಗ್ರಾಪಂ ಸಿಬ್ಬಂದಿ ಮಧುಸೂದನ ನಾಯ್ಕ ಸೇರಿದಂತೆ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.