ಮಂಡ್ಯ: ಸತ್ತವನ ಹೆಸರಲ್ಲಿ ನಕಲಿ ಚುನಾವಣಾ ಗುರುತಿನ ಚೀಟಿ ಸೃಷ್ಟಿಸಿ ಆತನಿಗೆ ಸೇರಿದ ಎರಡು ಎಕರೆ ಜಮೀನನ್ನು ಹಲವರು ಕಬಳಿಸಿರುವ ಸಂಗತಿ ನಾಗಮಂಗಲ ತಾಲೂಕು ಹೊಣಕೆರೆ ಹೋಬಳಿ ಪಡುವಲಪಟ್ಟಣ ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ 11 ಮಂದಿ ಆರೋಪಿಗಳ ವಿರುದ್ಧ ಗೊಲ್ಲರಹಳ್ಳಿ ಗ್ರಾಮದ ಚಿನ್ನೇಗೌಡರ ಪತ್ನಿ ಸರೋಜಮ್ಮ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ಮಾರುತಿ ಸ್ಟೋನ್ ಕ್ರಷರ್ ಪಾಲುದಾರರಾದ ಕೆ.ಎಂ. ರವಿ, ಎಚ್.ಬಿ.ಪ್ರಕಾಶ್, ಎಸ್.ನಂಜಪ್ಪ, ಚನ್ನರಾಯಪಟ್ಟಣದ ಡಿ.ಆರ್. ರವಿಕುಮಾರ್, ಪಡುವಲಪಟ್ಟಣದ
ಎಚ್.ಪಿ.ಕೃಷ್ಣಪ್ಪ, ಬಂಕಾಪುರ ಗ್ರಾಮದ ಲಕ್ಷ್ಮಮ್ಮ, ಮಕ್ಕಳಾದ ಬಿ.ಕೆ.ಬೋರೇಗೌಡ, ಬಿ.ಕೆ.ಮರೀಗೌಡ, ಬಿ.ಕೆ.ನಂಜೇಗೌಡ, ಲಕ್ಷ್ಮಮ್ಮ ಸೊಸೆಯಂದಿರಾದ ಕಾಮಾಕ್ಷಮ್ಮ, ಭಾಗ್ಯಮ್ಮ, ಕಲಾವತಿ ವಿರುದ್ಧ ಸರೋಜಮ್ಮ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?: ನಾಗಮಂಗಲ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಹಳೇ ಸ.ನಂ.5ರ (ಹೊಸ ಸರ್ವೆ ನಂ.34) ಪಡುವಲಪಟ್ಟಣ ಗ್ರಾಮದ ವಾಸಿ ಹೊನ್ನೇಗೌಡರಿಗೆ ದರಖಾಸ್ತು ಆಧಾರದ ಮೇಲೆ 1961ನೇ ಸಾಲಿನಲ್ಲಿ ಸರ್ಕಾರದಿಂದ ಷರತ್ತಿಗೊಳಪಟ್ಟು ಎರಡು ಎಕರೆ ಜಮೀನು ಮಂಜೂರಾಗಿತ್ತು. ನಂತರ ಈ ಜಮೀನನ್ನು ಹೊನ್ನೇಗೌಡರು ಬಂಕಾಪುರ ಗ್ರಾಮದ ವಾಸಿ ನಂಜೇಗೌಡರಿಗೆ 1973ರಲ್ಲಿ ಆಧಾರ ಮಾಡಿದ್ದು, ನಂತರ 1974ರಲ್ಲಿ ಕ್ರಯ ಮಾಡಿಕೊಡಲಾಗಿದೆ. ಆದರೆ, ಸರ್ಕಾರದ ದರಖಾಸ್ತು ಷರತ್ತನ್ನು ಪಾಲಿಸದೆ ಮುಂಗಡವಾಗಿ ಜಮೀನನ್ನು ಮಾರಾಟ ಮಾಡಿದ್ದರಿಂದ ನಂಜೇಗೌಡರಿಗೆ ಇದುವರೆಗೂ ಖಾತೆಯಾಗದೆ ಆರ್ ಟಿಸಿಯು ಹೊನ್ನೇಗೌಡರ ಹೆಸರಿನಲ್ಲೇ ಮುಂದುವರಿದಿದೆ.
1988ರಲ್ಲಿ ಜಮೀನಿನ ಮಾಲೀಕ ಹೊನ್ನೇಗೌಡರು ನಿಧನರಾಗಿದ್ದಾರೆ. ಬಳಿಕ ಆರೋಪಿಗಳೆಲ್ಲರೂ ಜಮೀನನ್ನು ಕಬಳಿಸುವ ಉದ್ದೇಶದಿಂದ ಜಮೀನಿನ ವಾರಸುದಾರ ಹೊನ್ನೇಗೌಡರು ಮೃತರಾಗಿದ್ದರೂ ಪಡುವಲಪಟ್ಟಣ ಗ್ರಾಮದ ವಾಸಿ ದಾನಮ್ಮನ ಹಾರುವೇಗೌಡರ ಮಗ ಕೃಷ್ಣಪ್ಪ ಅವರನ್ನು ಮೃತ ಹೊನ್ನೇಗೌಡ ಎಂದು ಬಿಂಬಿಸಿ ನಕಲಿ ಚುನಾವಣಾ ಗುರುತಿನ ಚೀಟಿ ಮಾಡಿಸಿದ್ದಾರೆ. ಬಳಿಕ ಬಂಕಾಪುರ ಗ್ರಾಮದ ಕುಳ್ಳೇಗೌಡನ ಹೆಂಡತಿ ಲಕ್ಷ್ಮಮ್ಮ ಅವರಿಗೆ 2016ರ ಆಗಸ್ಟ್ ನಲ್ಲಿ ಬೋಗಸ್ ಕ್ರಯ ಮಾಡಿದ್ದಾರೆ. ನಂತರ ಅದೇ ವರ್ಷದ ಅಕ್ಟೋಬರ್‌ನಲ್ಲಿ ಲಕ್ಷ್ಮಮ್ಮರವರು ತಮ್ಮ ಮೂವರು ಗಂಡುಮಕ್ಕಳೊಂದಿಗೆ ಗೊಲ್ಲರಹಳ್ಳಿ ಗ್ರಾಮದ ನಂಜಪ್ಪರವರಿಗೆ ಭೋಗ್ಯಪತ್ರ ಮಾಡಿಕೊಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಭೋಗ್ಯವಾಗಿ ಪಡೆದ ಜಮೀನನ್ನು ನಂಜಪ್ಪರವರು ಹೊಸೂರು ಗ್ರಾಮದ ಪ್ರಕಾಶ್ ಮತ್ತು ಬಂಕಾಪುರ ಗ್ರಾಮದ ಕೆ.ಎಂ.ರವಿ ಅವರೊಂದಿಗೆ ಪಾಲುದಾರಿಕೆ ಮಾಡಿ ಕೊಂಡು ಮಾರುತಿ ಸ್ಟೋನ್ ಕ್ರಷರ್ ಮತ್ತು ಎಂ-ಸ್ಯಾಂಡ್ ಕಂಪನಿಯನ್ನು ಯಾವುದೇ ಪರವಾನಗಿ ಪಡೆಯದೆ, ಹಾಗೂ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಲು ಭೂ ಪರಿವರ್ತನೆಯನ್ನು ಮಾಡಿಸದೆ ಆರೋಪಿಗಳು ಜಮೀನನ್ನು ಒತ್ತುವರಿ ಮಾಡಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
2019ರಲ್ಲಿ ಬೋಗಸ್ ಕ್ರಯದ ರೂಪದಲ್ಲಿ ಪಡೆದಿದ್ದ ಜಮೀನನ್ನು ಲಕ್ಷ್ಮಮ್ಮ ಅವರು ತಮ್ಮ ಮೂವರು ಸೊಸೆಯಂದಿರಿಗೆ ದಾನಪತ್ರ ಮೂಲಕ ರಿಜಿಸ್ಟರ್ ಮಾಡಿಸಿದ್ದಾರೆ. ನಂತರ ಅದೇ ವರ್ಷ ಲಕ್ಷ್ಮಮ್ಮ ಹಾಗೂ ಅವರ ಮೂವರು ಸೊಸೆಯಂದಿರು ಸೇರಿಕೊಂಡು ಜಮೀನನ್ನು ಚನ್ನರಾಯಯಪಟ್ಟಣದ ರವಿಕುಮಾರ್ ಅವರಿಗೆ ಮಾರಾಟ ಮಾಡಿದ್ದಾರೆ ಎಂದು ದೂರಲಾಗಿದೆ. ಅಕ್ರಮವಾಗಿ ಸರ್ಕಾರದ ದರಖಾಸ್ತು ಜಮೀನನ್ನು ಕಬಳಿಸಿರುವುದಲ್ಲದೆ, ವಿನಾ ಕಾರಣ ನಮಗೆ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರೋಜಮ್ಮ ದೂರಿನಲ್ಲಿ ತಿಳಿಸಿದ್ದಾರೆ.