Advertisement

ನಕಲಿ ಎಸಿಬಿ ಅಧಿಕಾರಿ ಪೊಲೀಸ್‌ ಆಗಿದ್ದ!

11:13 AM Jun 15, 2022 | Team Udayavani |

ಬೆಳಗಾವಿ: ಸರ್ಕಾರಿ ಅಧಿಕಾರಿಗಳನ್ನೇ ಟಾರ್ಗೆಟ್‌ ಮಾಡಿ ಭ್ರಷ್ಟಾಚಾರ ನಿಗ್ರಹದ ದಳ(ಎಸಿಬಿ) ಡಿಎಸ್‌ಪಿ ಎಂದು ಹೇಳಿಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಬಂಧಿತ ಚಿಕ್ಕೋಡಿ ತಾಲೂಕಿನ ಸದಲಗಾದ ಮುರುಗೆಪ್ಪ ನಿಂಗಪ್ಪ ಕುಂಬಾರ(56) 9 ವರ್ಷಗಳ ಹಿಂದೆ ಪೊಲೀಸ್‌ ಕಾನ್ಸಟೇಬಲ್‌ ಹುದ್ದೆಯಿಂದ ವಜಾಗೊಂಡಿದ್ದನು.

Advertisement

ಲೋಕಾಯುಕ್ತ ಅಧಿಕಾರಿ ಹಾಗೂ ಎಸಿಬಿ ಅಧಿಕಾರಿ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಮುರುಗೆಪ್ಪ ಕುಂಬಾರ ಮೇಲೆ ಈವರೆಗೆ ಒಟ್ಟು 22 ಕೇಸ್‌ ದಾಖಲಾಗಿವೆ. ಅನೇಕ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ದೋಚುವ ಕಾಯಕ ಮಾಡಿಕೊಂಡಿದ್ದನು. ರಾಜ್ಯದ ವಿವಿಧೆಡೆ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ಮಾಡುವುದಾಗಿ ಹೆದರಿಸುತ್ತಿದ್ದನು. ನಂತರ ಬ್ಲ್ಯಾಕ್‌ಮೇಲ್‌ ಮಾಡಿ ಹಣ ಕಬಳಿಸುವುದನ್ನು ಅನೇಕ ವರ್ಷಗಳಿಂದ ಕರಗತ ಮಾಡಿಕೊಂಡಿದ್ದನು. ಈತನ ನೀಚ ಕೆಲಸಕ್ಕೆ ಬೇಸತ್ತಿರುವ ಹೆಂಡತಿ, ಮಕ್ಕಳೂ ಇವನನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ.

ಪೊಲೀಸ್‌ ಇದ್ದಾಗಲೂ ಬ್ಲ್ಯಾಕ್‌ಮೇಲ್‌: 1986ರಲ್ಲಿ ಮುರುಗೆಪ್ಪ ಕುಂಬಾರ ಪೊಲೀಸ್‌ ಇಲಾಖೆಗೆ ಹೆಡ್‌ ಕಾನ್ಸಟೇಬಲ್‌ ಆಗಿ ಸೇರಿಕೊಂಡಾಗಲೂ ಜನರಿಗೆ ವಂಚನೆ ಮಾಡಿದ್ದಾನೆ. 1992-93ರಲ್ಲಿ ಲೋಕಾಯುಕ್ತ ಪೊಲೀಸ್‌ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾನೆ. ಬೆಳಗಾವಿ ನಗರದ ಮಾರ್ಕೆಟ್‌ ಠಾಣೆಯಲ್ಲಿ ಹೆಡ್‌ ಕಾನ್ಸಟೇಬಲ್‌ ಆಗಿದ್ದಾಗ ಜನರಿಗೆ ವಾರೆಂಟ್‌ಗಳನ್ನು ನೀಡಿ ಹೆದರಿಸುತ್ತಿದ್ದನು. ಈತನೊಂದಿಗೆ ಕೆಎಸ್‌ಆರ್‌ಟಿಸಿ ನಿರ್ವಾಹಕ ಸೇರಿ ಇನ್ನೂ ಮೂವರು ಪೊಲೀಸರು ಸೇರಿಕೊಂಡಿದ್ದರು. ಕೆಲಸದಿಂದ ಡಿಸ್‌ಮಿಸ್‌ ಆಗಿದ್ದ: ಕರ್ತವ್ಯದಲ್ಲಿ ಇದ್ದುಕೊಂಡು ಜನರಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾಗ ಆಗಿನ ಎಸ್‌ಪಿ ರಾಮಕೃಷ್ಣ ಅವರು ದೂರು ದಾಖಲಿಸಿಕೊಳ್ಳುತ್ತಾರೆ. ಬೆ„ಲಹೊಂಗಲ ಎಎಸ್‌ಪಿ ಆಗಿದ್ದ ಅಲೋಕಕುಮಾರ ಪ್ರಕರಣದ ತನಿಖೆ ನಡೆಸಿ, 2003ರಲ್ಲಿ ಮುರುಗೆಪ್ಪನನ್ನು ಕೆಲಸದಿಂದಲೇ ತೆಗೆದು ಹಾಕುತ್ತಾರೆ. ಈತನೊಂದಿಗೆ ಆಗಿನ ಸಿಬ್ಬಂದಿಗಳಾದ ಮಠ, ಶೀಲವಂತ ಹಾಗೂ ಪಕಾಲಿ ಎಂಬವರನ್ನೂ ಅಮಾನತು ಮಾಡುತ್ತಾರೆ.

ಕೆಲಸ ಇಲ್ಲದೇ ಖಾಲಿ ಉಳಿದಿದ್ದ ಮುರುಗೆಪ್ಪ ಮಹಾರಾಷ್ಟ್ರದ ಸಾಂಗಲಿ ಮತ್ತು ಮಿರಜ್‌ನಲ್ಲಿ ಮಟಕಾ ದಂಧೆ ಮುಂದುವರಿಸುತ್ತಾನೆ. ಅಲ್ಲಿಯ ಎಸ್‌ಪಿ ಕೃಷ್ಣಪ್ರಸಾದ ಅವರು ಈತನನ್ನು ಬಂಧಿಸುತ್ತಾರೆ. ನಂತರ 2009ರಲ್ಲಿ ಲೋಕಾಯುಕ್ತ ಡಿಎಸ್‌ಪಿ ಎಂದು ಹೇಳಿಕೊಂಡು ಅನೇಕ ಅಧಿಕಾರಿಗಳಿಗೆ ಹೆದರಿಸಿ ಹಣ ದೋಚಿದ್ದನು. ಲೋಕಾಯುಕ್ತ ಇಲಾಖೆ ವಿಸರ್ಜನೆ ಮಾಡಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆ ಆಗುತ್ತದೆ. ಆಗ ಈ ಹೆಸರಿನಲ್ಲಿ ಜನರನ್ನು ವಂಚಿಸಲು ಆರಂಭಿಸುತ್ತಾನೆ.

ಬೆಳಗಾವಿ, ಬಾಗಲಕೋಟೆ, ಬೆಂಗಳೂರು, ಹಾಸನ ಸೇರಿದಂತೆ ಅನೇಕ ಕಡೆಗೆ ಈತ ಸರ್ಕಾರಿ ಅಧಿಕಾರಿಗಳನ್ನು ವಂಚಿಸಿದ್ದಾನೆ ಎಂಬ ದೂರುಗಳು ದಾಖಲಾಗಿವೆ. ವಿವಿಧ ಕಡೆಗೆ ಒಟ್ಟು 22 ಕೇಸುಗಳು ದಾಖಲಾಗಿವೆ.

Advertisement

ಜೈಲಿನಲ್ಲಿ ಸ್ನೇಹ ಬೆಳೆದಿತ್ತು: ಜೈಲಿನಲ್ಲಿ ಇದ್ದಾಗ ಅಲ್ಲಿ ಕೊಲೆ ಪ್ರಕರಣದ ಆರೋಪಿಗಳನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಳ್ಳುತ್ತಾನೆ. ಈ ಸ್ನೇಹ ತನ್ನ ದಂಧೆಗೆ ಬಳಸಿಕೊಳ್ಳುತ್ತಾನೆ. ಜೈಲಿನಲ್ಲಿ ಇದ್ದಾಗ ಮತ್ತು ಹೊರ ಬಂದಾಗಲೂ ಮತ್ತೆ ತನ್ನ ಹಳೆ ಚಾಳಿ ಶುರು ಮಾಡಿ ಬೇರೆ ಬೇರೆ ಮೊಬೆ„ಲ್‌ ನಂಬರ್‌ಗಳಿಂದ ಎಸಿಬಿ ಡಿಎಸ್‌ಪಿ ಎಂದು ಹೇಳಿಕೊಂಡು ಹೆದರಿಸುತ್ತಾನೆ. ಆಗ ಅನೇಕ ಅ ಧಿಕಾರಿಗಳು ಈತನ ಕರೆಗೆ ಹೆದರಿ ಹಣ ಹಾಕುತ್ತಾರೆ. ಈತನ ಸ್ನೇಹಿತರಾಗಿದ್ದ ಬಿಹಾರ, ಹಾಸನ, ಮಹಾರಾಷ್ಟ್ರ ಸೇರಿದಂತೆ ಅನೇಕ ಅಕೌಂಟಿಗೆ ಹಣ ಹಾಕಿಸಿಕೊಳ್ಳುತ್ತಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

3 ವಂಚಕರು ಪೊಲೀಸರ ಬಲೆಗೆ: ಎಸಿಬಿ ಅಧಿಕಾರಿ ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಮೂವರನ್ನು ಸಿಇಎನ್‌ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ಸದಲಗಾದ ಮುರುಗೆಪ್ಪ ನಿಂಗಪ್ಪ ಕುಂಬಾರ, ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳದ ರಾಜೇಶ ಬಾಪುಸೋ ಚೌಗುಲೆ ಹಾಗೂ ಸಕಲೇಶಪುರದ ರಜನಿಕಾಂತ ನಾಗರಾಜ ಬಂಧಿತರು.

ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳೆಂದು ಬೇರೆ ಬೇರೆ ಮೊಬೈಲ್‌ ನಂಬರ್‌ಗಳಿಂದ ಕರೆ ಮಾಡಿ ಹಣ ವಸೂಲಿ ಮಾಡಿದ್ದಾರೆ. ಹಣ ನೀಡದಿದ್ದರೆ ತಮ್ಮ ಕಚೇರಿ ಹಾಗೂ ಆಸ್ತಿ-ಅಂತಸ್ತಿನ ಕಡತಗಳನ್ನು ಪರಿಶೀಲಿಸಿ ಮನೆಗೆ ದಾಳಿ ಮಾಡುವುದಾಗಿ ಬೆದರಿಸುತ್ತಿದ್ದರು.

ಈ ಬಗ್ಗೆ ಬೆಳಗಾವಿಯ ಆರ್‌ಟಿಒ, ಕಮರ್ಷಿಯಲ್‌ ಟ್ಯಾಕ್ಸ್‌ ಅಧಿಕಾರಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಸಿಇಎನ್‌ ಪೊಲೀಸರು ಮೊಬೈಲ್‌ ನಂಬರ್‌ಗಳ ಮೂಲಕ ವಿಳಾಸ ಪತ್ತೆ ಹಚ್ಚಿ ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪೊಲೀಸ್‌ ಕಮೀಷನರ್‌ ಎಂ.ಬಿ. ಬೋರಲಿಂಗಯ್ಯ ಮಾರ್ಗದರ್ಶನದಲ್ಲಿ ಡಿಸಿಪಿ ರವೀಂದ್ರ ಗಡಾದಿ, ಇನ್ಸಪೆಕ್ಟರ್‌ ಬಿ.ಆರ್‌. ಗಡ್ಡೇಕರ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದೆ.

ನಕಲಿ ಅಧಿಕಾರಿ-ಬಹುಕೋಟಿ ರೂ. ವಂಚಕ ಒಂದೇ ಊರಿನವರು: ಚಿಕ್ಕೋಡಿ ತಾಲೂಕಿನ ಸದಲಗಾದ ಮುರುಗೆಪ್ಪ ನಿಂಗಪ್ಪ ಕುಂಬಾರ(56) ಎಸಿಬಿ ಅಧಿಕಾರಿ ಎಂದು ವಂಚಿಸಿ ಹಣ ಸುಲಿಗೆ ಮಾಡಿದ್ದರೆ, ಇದೇ ಗ್ರಾಮದ ಶಿವಾನಂದ ದಾದು ಕುಂಬಾರ(46) ಎಂಬಾತ ಹಣ ದುಪ್ಪಟ್ಟು ಮಾಡಿ ಕೊಡುವುದಾಗಿ ಹೇಳಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.

ಒಂದೇ ಊರಿನ ಈ ಇಬ್ಬರು ವಂಚಕರ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿ ಹಾಗೂ ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ನೂರಾರು ಕೋಟಿ ರೂ. ವಂಚನೆ ಪ್ರಕರಣದಲ್ಲಿ ಶಿವಾನಂದ ಕುಂಬಾರ ಎಂಬಾತ ಭಾಗಿಯಾಗಿದ್ದಾನೆ. ವಿವಿಧ ಕಡೆಗಳಲ್ಲಿ ನಕಲಿ ಕಂಪನಿ ತೆರೆದು ಹಣ ದುಪ್ಪಟ್ಟು ಮಾಡಿ ಕೊಡುವುದಾಗಿ ಹೇಳಿ ಜನರಿಂದ ಠೇವಣಿ ಇಟ್ಟುಕೊಂಡು ಪರಾರಿಯಾಗಿದ್ದನು.

ಹಣ ಕಳೆದುಕೊಂಡಿರುವವರು ಈತನ ವಿರುದ್ಧ ಅನೇಕ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಪೊಲೀಸರು ಶಿವಾನಂದನ ಶೋಧ ನಡೆಸಿದಾಗ ನೇಪಾಳ ದೇಶದಲ್ಲಿ ಪತ್ನಿಯೊಂದಿಗೆ ಸಿಕ್ಕಿ ಬಿದ್ದಿದ್ದಾನೆ.

ಬೆಳಗಾವಿಗೆ ಕರೆ ತಂದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು, ಬೆಳಗಾವಿಯಲ್ಲಿಯೇ 100 ಕೋಟಿ ರೂ. ಹಾಗೂ ಮಹಾರಾಷ್ಟ್ರದಲ್ಲಿ 200 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈತನಿಗೆ ಹಣ ನೀಡಿ ಕೈ ಸುಟ್ಟುಕೊಂಡಿರುವವರು ಹೇಗಾದರೂ ಮಾಡಿ ಈತನಿಂದ ಹಣ ವಸೂಲಿ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿ ವಸೂಲಿ ಮಾಡಿ ಕೊಟ್ಟರೆ ಜನ ನಿರಾಳರಾಗುತ್ತಾರೆ. ಸಾರ್ವಜನಿಕರಿಗೆ ಪೊಲೀಸರಿಂದ ನ್ಯಾಯ ಸಿಗುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ.

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next