ಕುಣಿಗಲ್: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಗಳಲ್ಲಿ ಒಂದಾಗಿರುವ ಮಾರ್ಕೋನಹಳ್ಳಿ ಜಲಾಶಯ ನಿರ್ಲಕ್ಷ್ಯತೆಗೆ ಒಳಗಾಗಿ ತನ್ನ ಅಸ್ಥಿತ್ವ ಕಳೆದುಕೊಳ್ಳವ ಹಂಚಿನಲ್ಲಿದೆ. ಜಲಾಶಯದಲ್ಲಿನ ಕ್ರಸ್ಟ್‌ಗೇಟ್ ಗಳು ತುಕ್ಕು ಹಿಡಿದಿದ್ದು ನಾಲಾ ಏರಿಗಳು ಬಿರುಕು ಬಿಟ್ಟಿವೆ. ಇದರಿಂದಾಗಿ ನೀರು ಸಾಕಷ್ಟು ಪ್ರಮಾಣದಲ್ಲಿ ಪೋಲಾಗುತ್ತಿದೆ. ಡ್ಯಾಂನ ತಳ ಭಾಗದಲ್ಲಿ ವಿಶಾಲವಾದ ಉದ್ಯಾ ನವನ ಇದೆ. ಇಲ್ಲಿ ಈಗ ಜಾನುವಾರುಗಳು ಹುಲ್ಲು ಮೇಯುತ್ತಿವೆ. ಬೃಹತ್ ಗಾತ್ರದ 5 ಕ್ರೆಸ್ಟ್ ಗೇಟುಗಳು ಇದರ ಪಕ್ಕದಲ್ಲೇ ಎರಡು ಸ್ವಯಂ ಚಾಲಿತ ಸೈಫಾನ್‌ಗಳು ಇವೆ. ಡ್ಯಾಂ ತುಂಬಿ ಸ್ವಯಂ ಚಾಲಿತ ಸೈಫಾನ್‌ಗಳಲ್ಲಿ ನೀರು ಹೊರ ಹೋಗಲಿದ್ದು ಈ ದೃಶ್ಯ ಕಣ್ಮನ ಸೆಳೆಯುತ್ತದೆ.
ಪ್ರವಾಸಿ ಮಂದಿರದಿಂದ ಏರಿ ಮೂಲಕದವರೆಗೂ ಜಲಾಶಯದ ಮೇಲೆ ನಡೆದು ಹೋಗುವಾಗ ಇಡೀ ಜಲಾಶಯ ರಮಣೀಯವಾಗಿ ಕಣ್ಮನ ಸೆಳೆಯುತ್ತದೆ. ಈ ಜಲಾಶಯ ತುಂಬಿ ಹೆಚ್ಚುವರಿ ನೀರು ಕೋಡಿ ಮೂಲಕ ಹರಿದು ಶಿಂಷಾ ಕೊಳ್ಳಕ್ಕೆ ಹರಿಯಲಿದೆ. ಹೀಗಿದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪ್ರವಾಸಿತಾಣವ ನ್ನಾಗಿ ಅಭಿವೃದ್ಧಿಪಡಿಸಲು ಮುಂದಾಗದಿರುವುದು ಅಸಮಾಧಾನ ಮೂಡಿಸಿದೆ.
ಸರ್ ಎಂ.ವಿ.ಪುತ್ಥಳಿ ಸ್ಥಾಪಿಸಿ: ವಿಶ್ವೇಶ್ವರಯ್ಯ ಅವರನ್ನು ನೆನಪಿಸಿಕೊಳ್ಳುವ ಹಾಗೂ ಗೌರವ ಸಲ್ಲಿಸುವ ಕೆಲಸ ಅಗಿಲ್ಲ. ಬಹುತೇಕ ಎಂಜಿನಿಯರ್ ಗಳಿಂದಲೇ ತುಂಬಿ ತುಳುಕುತ್ತಿರುವ ಕಾವೇರಿ ನೀರಾವರಿ ನಿಗಮದ ಎಂಜಿನೀಯರ್‌ಗಳು, ರೈತ ಬಾಂಧವರು ಎಚ್ಚೆತ್ತು ಜಲಾಶಯದ ಅದ್ಭುತ ತಂತ್ರಜ್ಞಾನ ಪರಿಚಯ, ಸಾಧನೆ ತಿಳಿಸಲು ಪುತ್ಥಳಿ ನಿರ್ಮಿಸಲು ಸ್ಥಳೀಯರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈಗಿನ ನೀರಿನ ಮಟ್ಟ: ಜಲಾಶಯ 4700 ಚ.ಮೀ ವಿಸ್ತೀರ್ಣ ಹೊಂದಿದೆ. ಒಟ್ಟು 2.4ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯಹೊಂದಿದೆ. ಹಾಲಿ ಈಗ 1.6 ಟಿಎಂಸಿ ನೀರು ಲಭ್ಯವಿದ್ದು 15ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಕಳೆದ ವರ್ಷ ಇದೇ ವೇಳೆ ಡ್ಯಾಂನಲ್ಲಿ 227ಎಂಟಿಎಫ್‌ಸಿ ಮಾತ್ರ ನೀರು ಸಂಗ್ರಹವಾಗಿತ್ತು. ಶಿಂಷಾ ನದಿ, ವೀರವೈಷ್ಣವಿ ನದಿ, ಹೇಮಾವತಿ ಲೀಕೇಜ್ ನೀರೇ ಜಲಾಶಯದ ನೀರಿನ ಮೂಲ. ಡಿಕೆ ಬ್ರದರ್ಸ್ ಹಾಗೂ ಶಾಸಕ ಡಾ.ರಂಗನಾಥ್ ರ ಪ್ರಯತ್ನದ ಫಲವಾಗಿ ಪ್ರಸಕ್ತ ವರ್ಷ ದಿಂದ ಹೇಮಾವತಿ ಜಲಾಶದಿಂದ ಒಂದು ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶ ಮಾಡಿರುವುದು ರೈತರ ಮುಖದಲ್ಲಿ ಹರ್ಷ ಮೂಡಿಸಿದೆ.
ಕೇಂದ್ರ ಸರ್ಕಾರದ ಡ್ಯಾಂ ಅಭಿವೃದ್ಧಿ ಯೋಜನೆಯಡಿ ಮಾರ್ಕೋನಹಳ್ಳಿ ಜಲಾಶಯದಲ್ಲಿನ ಕ್ರೆಸ್ಟ್ ಗೇಟ್ ರಿಪೇರಿ, ಲೀಕೇಜ್ ದುರಸ್ತಿ, ಕೋಡಿ ದುರಸ್ತಿ ಕಾರ್ಯಕ್ಕೆ ಈಗಾಗಲೇ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಪ್ರವಾಸಿ ತಾಣ ಮಾಡಲೂ ಯೋಜನೆ ಸಿದ್ಧಪಡಿಸಲಾಗುತ್ತಿದ್ದು ಜಲಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
●ಮಂಜೇಶ್‌ಗೌಡ, ಇಇ, ಹೇಮಾವತಿನಾಲಾವಲಯ ಯಡಿಯೂರು
ಮಾರ್ಕೋನಹಳ್ಳಿ ಜಲಾಶಯದಿಂದ ಸಾವಿರಾರು ರೈತ ಕುಟುಂಬ ಸೇರಿದಂತೆ ಮೀನುಗಾರರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ಅದ್ಬುತ ಜಲಾಶಯ ನಿರ್ಮಿಸಿದ ಸರ್ ಎಂ.ವಿ. ಅವರನ್ನು ನೆನಪಿಸಿಕೊಳ್ಳದಿರುವುದು ನೋವಿನ ಸಂಗತಿ. 75 ವರ್ಷ ಪೂರೈಸಿರುವ ಜಲಾಶಯಕ್ಕೆ ವಜ್ರಮಹೋತ್ಸವ ಸಂಭ್ರಮ ಆಚರಿಸಬೇಕಾಗಿದೆ.
●ಆನಂದ್ ಪಟೇಲ್, ಜಿಲ್ಲಾ ರೈತ ಸಂಘದ ಅಧ್ಯಕ್ಷ
ಲೋಕೇಶ್