ಕನಕಗಿರಿ: ಪಟ್ಟಣದ ಇತಿಹಾಸ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನಕ್ಕೆ ನಿತ್ಯ ಹಾಗೂ ಅಮವಾಸ್ಯೆ, ಹುಣ್ಣಿಮೆ, ಹಬ್ಬ ಹರಿದಿನಗಳಲ್ಲಿ ಆಪಾರ ಭಕ್ತರು ಹಾಗೂ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ದೇವಸ್ಥಾನದಲ್ಲಿ ಮೂಲಭೂತ ಸೌಲಭ್ಯವಿಲ್ಲದ ಕಾರಣ ಭಕ್ತರು ಪರದಾಡುವಂತಾಗಿದೆ.
ದೇವಸ್ಥಾನವು ಮುಜರಾಯಿ ಇಲಾಖೆ ಎ ವರ್ಗಕ್ಕೆ ಸೇರಿದರು ಕೂಡ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ದೇವಸ್ಥಾನದಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಸ್ನಾನ ಗೃಹಗಳು, ವಾಹನ ನಿಲುಗಡೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ಪರಿಸ್ಥಿತಿ ಹೇಳತೀರದಾಗಿದೆ. ದೇವಸ್ಥಾನಕ್ಕೆ ಉತ್ತಮವಾದ ಆದಾಯವಿದ್ದು, ಬರುವ ಆದಾಯ ಮಾತ್ರ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತಿಂಗಳ ವೇತನಕ್ಕೆ ಸರಿ ಹೋಗುತ್ತಿದೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿ ಕಾರಿಗಳು ಮಾತ್ರ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಗಮನ ಹರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.
ಇನ್ನು ಜಾತ್ರೆ ಸಮಯದಲ್ಲಿ ಮಾತ್ರ ಶಾಸಕರ ಅಧ್ಯಕ್ಷತೆಯಲ್ಲಿ ತಾತ್ಕಾಲಿಕವಾಗಿ ಮೂಲ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುತ್ತದೆ. ಆದರೆ ಪ್ರತಿ ನಿತ್ಯ ಬರುವ ಭಕ್ತರಿಗೆ ಶೌಚಾಲಯವಿಲ್ಲದೇ ಪರದಾಡುವಂತಾಗಿದೆ. ದೇವಸ್ಥಾನಕ್ಕೆ ಬರುವ ಆದಾಯದಲ್ಲೇ ಸೌಲಭ್ಯ ಒದಗಿಸುವುದನ್ನು ಬಿಟ್ಟು ಅನುದಾನಕ್ಕಾಗಿ ದೇವಸ್ಥಾನದ ಸಿಬ್ಬಂದಿ ಕಾಯುತ್ತಿದ್ದಾರೆ.
ಏನಿದೂ ಕಾಮಗಾರಿ: ಕನಕಾಚಲಪತಿ ದೇವಸ್ಥಾನದ ಸುತ್ತಲೂ ಸಿ.ಸಿ. ರಸ್ತೆ ನಿರ್ಮಾಣ, ಪ್ರಸಾದ ನಿಲಯ, ವಾಹನ ನಿಲುಗಡೆ, ತೇರಿನ ಮನೆ ಸ್ಥಳಾಂತರ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಕಾಮಗಾರಿ ಇದಾಗಿದ್ದು, ಪ್ರವಾಸೋದ್ಯಮ ಇಲಾಖೆಯಿಂದ 2 ಕೋಟಿ ರೂ. ಬಿಡುಗಡೆಯಾಗಿದೆ ಎನ್ನುತ್ತಾರೆ ದೇವಸ್ಥಾನ ಸಿಬ್ಬಂದಿ.
ಪ್ರಾರಂಭವಾಗದ ಕಾಮಗಾರಿ: ಕಳೆದ ಎರಡು ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆಯಿಂದ 2 ಕೋಟಿ ರೂ. ಅನುದಾನವು ಕನಕಾಚಲಪತಿ ದೇವಸ್ಥಾನದ ಅಭಿವೃದ್ಧಿಗೆ ಬಿಡುಗಡೆಯಾಗಿದೆ ಎನ್ನುತ್ತಿದ್ದಾರೆಯೇ ಹೊರತು ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ 2 ವರ್ಷಗಳ ಹಿಂದೆ ಮಾಜಿ ಶಾಸಕ ಶಿವರಾಜ ತಂಗಡಗಿ ಭೂಮಿಪೂಜೆ ನೆರವೇರಿಸಿದ್ದಾರೆ. ಆದರೆ ಶಾಸಕ ಬಸವರಾಜ ದಢೇಸುಗೂರು ಒಂದು ವರ್ಷದ ಹಿಂದೆ ಇದೇ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಆದರೆ ಕಾಮಗಾರಿ ಮಾತ್ರ ಇನ್ನು ಪ್ರಾರಂಭವಾಗಿಲ್ಲ. ಅಧಿಕಾರಿಗಳಾಗಲಿ ಹಾಗೂ ಜನಪ್ರತಿನಿಧಿಗಳಾಗಲಿ ಇನ್ನಾದರೂ ಎಚ್ಚೆತ್ತು ದೇವಸ್ಥಾನಕ್ಕೆ ಮೂಲಭೂತ ಸೌಲಭ್ಯ ಒದಗಿಸಲು ಮುಂದಾಗಬೇಕಿದೆ.
ಶರಣಪ್ಪ ಗೋಡಿನಾಳ