Advertisement

ಸಾಲ ಮುಗಿಯುವ ಮುನ್ನ ಕುಸಿಯುತ್ತಿರುವ ಮನೆ

09:21 AM Jun 21, 2019 | Team Udayavani |

ಉಡುಪಿ, ಜೂ. 20: ಮಣಿಪಾಲ ಸಮೀಪದ 80 ಬಡಗುಬೆಟ್ಟು ಗ್ರಾಪಂ ವ್ಯಾಪ್ತಿಯ ಮಣಿಪಾಲ- ಅಲೆವೂರು ರಸ್ತೆಯ ಮಂಚಿಕೆರೆಯ ನಾಗಬ್ರಹ್ಮಸ್ಥಾನದ ಎದುರಿನ ಎರಡನೇ ಅಡ್ಡರಸ್ತೆಯ ಭೂಮಿಯಲ್ಲಿ 5 ವರ್ಷಗಳ ಹಿಂದೆ ಕಂಡು ಬಂದಿರುವ ಬಿರುಕು ಇದೀಗ ಇನ್ನಷ್ಟು ಹಿರಿದಾಗಿದ್ದು, ಸ್ಥಳೀಯ ನಿವಾಸಿಗಳ ಮನೆ ಕುಸಿಯುವ ಭೀತಿಯಲ್ಲಿದೆ.

Advertisement

ಬಿರುಕಿನ ಗಾತ್ರ ಹಿಗ್ಗಿದೆ:

ಪರಿಸರದಲ್ಲಿ ಸುಮಾರು 200- 250 ಮನೆಗಳಿವೆ. 2014ರ ಈ ಪ್ರದೇಶದಲ್ಲಿ ಭೂಮಿ ಬಿರುಕು ಬಿಟ್ಟಿರುವ ವಿಚಾರ ಸ್ಥಳೀಯರ ಗಮನಕ್ಕೆ ಬಂದಿದ್ದು, ಆಗ ಸುಮಾರು 100 ಮೀ. ಉದ್ದದವರೆಗೆ ಭೂಮಿ ಬಾಯ್ದೆರೆದಿತ್ತು. ಇದೀಗ ಮಂಗಳವಾರ ಬಿರುಕಿನ ಅಗಲ ಮಾತ್ರವಲ್ಲದೆ ಉದ್ದ ಕೂಡ ಹೆಚ್ಚಾಗಿದೆ. ಕಾಲೋನಿಯ ಡಾಮರು ರಸ್ತೆಯಲ್ಲಿರುವ ಬಿರುಕು ದೊಡ್ಡಾಗಿದ್ದು, ಮಳೆಯ ನೀರು ಹರಿದು ಬಂದು ಈ ಬಿರುಕಿನೊಳಗೆ ಸೇರುತ್ತಿದೆ.

15 ಲ.ರೂ., ಮನೆ ಸಾಲ!:

1991ರಲ್ಲಿ ಬ್ಯಾಂಕ್‌ನಿಂದ ಸುಮಾರು 15 ಲ.ರೂ., ಸಾಲ ಮಾಡಿ ರಮೇಶ್‌ ನಾಯಕ್‌ ಅವರು ಮನೆ ನಿರ್ಮಾಣ ಮಾಡಿದರು. ಇನ್ನೂ 8 ಲ.ರೂ. ಸಾಲ ತೀರಿಸಲು ಬಾಕಿಯಿದ್ದು ಪ್ರತಿ ತಿಂಗಳು ಕಂತು ಕಟ್ಟುತ್ತಿದ್ದಾರೆ. ಕಳೆದ ಬಾರಿ ಭೂ ಕುಸಿತದಿಂದ ಭಯಗೊಳ್ಳದ ರಮೇಶ್‌ ಈ ಬಾರಿ ಬಿರುಕು ಇನ್ನಷ್ಟು ಹಿರಿದಾಗಿರುವುದು ಅವರನ್ನು ಚಿಂತೆಗೆ ನೂಕಿದೆ. ಅಧಿಕಾರಿಗಳು ಅವರ ಕುಟುಂಬವನ್ನು ಸದ್ಯಕ್ಕೆ ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ರಮೇಶ್‌ ಅವರು ಅಧಿಕಾರಿಗಳ ಮನವಿ ಒಪ್ಪುತ್ತಿಲ್ಲ.

Advertisement

ಬಿರುಕು ಹೆಚ್ಚಾಗುವ ಸಾಧ್ಯತೆ !:

ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ 4 ದಿನದಲ್ಲಿ ಮಳೆ ಹೆಚ್ಚಾಗಲಿದ್ದು ಇದರಿಂದ ಭೂಮಿಯ ಬಿರುಕು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಅಧಿಕಾರಿಗಳು ಹೇಳುವ ಪ್ರಕಾರ ಮಳೆಯ ನೀರು ಭೂಮಿ ಒಳಗೆ ಇಂಗಿದಾಗ ಮುರಕಲ್ಲಿನ ಅಡಿಭಾಗದಲ್ಲಿರುವ ಮೃದುವಾದ ಜೇಡಿ ಮಣ್ಣು ಮಳೆಯ ನೀರಿನಲ್ಲಿ ನಿಧಾನವಾಗಿ ಕೊಚ್ಚಿಕೊಂಡು ಹೋಗುವುದರಿಂದ ಮೇಲ್ಭಾಗದಲ್ಲಿರುವ ಸಡಿಲವಾದ ರಚನೆಯಲ್ಲಿ ಬಿರುಕು ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ವಿಚಿತ್ರವೆನಿಸುವ ಘಟನೆಗಳು !:

ಸಂಪೂರ್ಣ ಮುರಕಲ್ಲಿನಿಂದ ಕೂಡಿದ ಮಂಚಿಕೆರೆ ನಾಲ್ಕು ದಿಕ್ಕಿನಲ್ಲಿ ಗುಹೆಗಳಿವೆ. ಉತ್ತರದಲ್ಲಿ ಪಾಂಡವರ ಗುಹೆ, ಪಶ್ಚಿಮದಲ್ಲಿ ದುಗ್ಗಿ ಪದವು ಗುಹೆ, ಪೂರ್ವದಲ್ಲಿ ಮಣ್ಣಪಳ್ಳ ಗುಹೆ, ದಕ್ಷಿಣದಲ್ಲಿ ಪ್ರಗತಿನಗರ ಗುಹೆಗಳಿವೆ. ಮಂಚಿಕೆರೆ ಭೂ ಕುಸಿತ ವಕ್ರವಾಗಿ ಹೋಗಿರುವುದರಿಂದ ಇಲ್ಲಿನ ಗುಹೆಗೂ ಬಿರುಕಿಗೂ ಸಂಬಂಧವಿದೆ. ಅಲ್ಲದೆ ಬಿರುಕು ಕಾಣಿಸಿಕೊಂಡ ಮೂರು ತಿಂಗಳಲ್ಲಿ ಕೆಳಪರ್ಕಳದಲ್ಲಿ ಕಡು ಬೇಸಿಗೆಯಲ್ಲಿ ನೀರುಕ್ಕಿ ಹರಿದು ತೊರೆ, ಬಾವಿಗಳು ತುಂಬಿದ್ದವು. ಅಲ್ಲಿನ ಅಂತರ್ಜಲದ ಒರೆತಕ್ಕೂ ಮಂಚಿಕೆರೆಯ ಭೂಮಿ ಬಿರುಕಿಗೂ ನಂಟಿರಬಹುದು ಮತ್ತು ಭೂಮಿಯೊಳಗೆ ಸಣ್ಣಪ್ರಮಾಣದ ಭೂಕಂಪನದಿಂದ ಆಗಿರುವ ಪ್ರಕ್ರಿಯೆ ಎಂಬುದಾಗಿ 2014ರಲ್ಲಿ ಸ್ಥಳಕ್ಕೆ ಆಗಮಿಸಿ ಅಧ್ಯಯನ ನಡೆಸಿದ್ದ ಖಾಸಗಿ ಭೂಗರ್ಭ ತಜ್ಞರ ತಂಡ ಅಭಿಪ್ರಾಯಪಟ್ಟಿತ್ತು.

ದೊಡ್ಡಮಟ್ಟದ ಸಂಶೋಧನೆ ಅಗತ್ಯ:

ನಾಲ್ಕು ದಿಕ್ಕಿನಲ್ಲಿರುವ ಗುಹೆಯಿಂದ ಈ ಬಿರುಕು ಬಿಟ್ಟಿರಬಹುದು ಎಂಬುದನ್ನು ನಾವು ತತ್‌ಕ್ಷಣ ಹೇಳಲು ಆಗಲ್ಲ. ಅದಕ್ಕೆ ಸಂಬಂಧಿಸಿದ ಸೂಚನೆ ಬೇಕಾಗುತ್ತದೆ. ದೊಡ್ಡ ಮಟ್ಟದಲ್ಲಿ ಸಂಶೋಧನೆ ಮಾಡಿದ ಅನಂತರ ಹೇಳಬಹುದು. ಮೇಲ್ನೋಟಕ್ಕೆ ಭೂ ಕುಸಿತ ಸಾಮಾನ್ಯ ಪ್ರಕ್ರಿಯೆ. ದೊಡ್ಡ ಮಟ್ಟದ ಸಂಶೋಧನೆ ಮಾಡುವಷ್ಟು ಗಂಭೀರ ಸಮಸ್ಯೆ ಇಲ್ಲ ಎನ್ನುವುದಾಗಿ ಬುಧವಾರ ಅಧ್ಯಯನ ನಡೆಸಿದ ತಂಡ ಅಭಿಪ್ರಾಯಪಟ್ಟಿದೆ.

ಹಾನಿಯಾದ ಪ್ರದೇಶ:

ರಮೇಶ್‌ ನಾಯಕ್‌ ಅವರ ಮನೆಯ ಗೋಡೆ, ಬಾವಿ, ಆವರಣ ಗೋಡೆಗಳಲ್ಲಿ ನ ಬಿರುಕಿನ ಗಾತ್ರ ಹೆಚ್ಚಾಗಿದೆ. ಇನ್ನೂ ಲೋಕೇಶ್‌ ದೇವಾಡಿಗ ಮನೆಯ ಆವರಣ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಳೆದ ಬಾರಿ ಬಿರುಕು ಕಾಣಿಸಿಕೊಂಡ ಶಂಭು ಅವರ ಬಾವಿಯನ್ನು ಕಲ್ಲು ಹಾಕಿ ಮುಚ್ಚಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next