ಮನುಷ್ಯ ಎಷ್ಟೇ ಬುದ್ದಿವಂತ ಅನ್ನಿಸಿಕೊಂಡರೂ ಪ್ರಕೃತಿಯಿಂದಾಚೆ ಆತ ಬದುಕಲಾರ. ನೀರು, ಮಳೆ, ಗಾಳಿ, ಭೂಮಿ, ಆಕಾಶ, ಚಂದಿರ, ಸೂರ್ಯ, ಬೆಳಕು, ರಾತ್ರಿ ಎಲ್ಲವೂ ಯಥಾಸ್ಥಿತಿಯಲ್ಲಿ ನಡೆಯಲೇಬೇಕು ಇಲ್ಲವಾದರೆ ಮನುಷ್ಯ ಅರೆ ಘಳಿಗೆ ಬದುಕಲಾರ.
ನಾವು ಬದುಕಬೇಕೆಂದರೆ ಪರಿಸರ ರಕ್ಷಣೆಯಾಗಬೇಕು. ಹೆಚ್ಚೆಚ್ಚು ಗಿಡಗಳ ನೆಡುವ ಕಾರ್ಯ ನಡೆಯಬೇಕು. ಈಗ ಮಳೆ ಶುರುವಾಗಿದೆ. ನಾವೆಲ್ಲರೂ ಸಸಿ ನೆಡುವ; ಪ್ರಕೃತಿಯನ್ನು ಗೌರವಿಸುವ ಕೆಲಸ ಮಾಡಬೇಕು. ನನ್ನ ಆಲೋಚನೆ ಹೀಗಿದೆ.
ಹಿಂದಿನ ಕೆಲವು ವರ್ಷಗಳಲ್ಲಿ ನನ್ನ ಮನೆಯ ಸುತ್ತಲೂ ನೆಟ್ಟ, ತೆಂಗು, ಮಾವಿನಮರ, ಸೀತಾಫಲ, ಚಿಕ್ಕು, ಹುಣಸೆ ಮರ, ಬೇವಿನ ಗಿಡ ಹೀಗೆ ನೂರಕ್ಕೂ ಹೆಚ್ಚು ಮರಗಳು ಆಕಾಶದೆತ್ತರಕ್ಕೆ ಬೆಳೆದು ನಿಂತಿವೆ. ಇದು ಖುಷಿಯೇ ವಿಚಾರವೇ. ಆದರೆ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. ಸಾಮಾನ್ಯವಾಗಿ ನಮ್ಮ ಸ್ನೇಹಿತರು, ಆತ್ಮೀಯರು, ಸಂಬಂಧಿ, ಬೇಕಾದವರ; ಹುಟ್ಟುಹಬ್ಬಗಳು ಬರುತ್ತಲೇ ಇರುತ್ತವೇ. ಆಗ ನಾವು ಅವರಿಗೆ ವಾಚ್, ಪೆನ್ನು, ಬಟ್ಟೆ, ಶೂ, ದುಬಾರಿ ವಸ್ತುಗಳನ್ನು ಕೊಡುವುದನ್ನು ಬಿಟ್ಟು ಉಡುಗೊರೆಯಾಗಿ ಒಂದು ಗಿಡ (ಸಸಿ) ಕೊಡೋಣ ಅಂತ. ನಾವು ಕೊಟ್ಟ ಉಡುಗೊರೆ ಸದಾ ಅವರೊಟ್ಟಿಗೆ ಇರಬೇಕೆಂಬ ಭಾವ ಎಲ್ಲರಲ್ಲೂ ಇರುತ್ತದೆ. ಮರದ ಸಸಿ ಕೊಟ್ಟರೆ! ಅವರ ಅಂಗಳದಲ್ಲಿ ಸದಾಕಾಲವೂ ಇರುತ್ತದೆ.
ಬೆಳೆಯುತ್ತಾ ಹಣ್ಣು ಹಂಪಲು ನೀಡುತ್ತ ನೀವು ಅವರ ಮನದಲ್ಲಿ ಸದಾ ಉಳಿಯುವಂತೆ ಮಾಡುತ್ತದೆ. ಮತ್ತು ಪುಕ್ಕಟೆಯಾಗಿ ಆಮ್ಲಜನಕ ಸಿಗುವ ಹಾಗೇ ಮಾಡುತ್ತದೆ. ಒಂದು ಗಿಡ ನೀವು ನಿಮ್ಮ ಗೆಳೆಯರಿಗೆ ಕೊಟ್ಟಿದ್ದೀರೆಂದರೆ ಅವರಿಗೆ ನೀವು ಬದುಕುವ ಭರವಸೆ ಕೊಟ್ಟಿದ್ದೀರಿ ಎಂದೇ ಅರ್ಥ. ಬನ್ನಿ ಬದಲಾಗೋಣ. ಪ್ರತೀ ಬದಲಾವಣೆಯೂ ನಮ್ಮಿಂದಲೇ ಪ್ರಾರಂಭಿಸಿ ಜಗಕ್ಕೆಲ್ಲ ಹರಡಬೇಕು. ಪ್ರಕೃತಿ ಇದ್ದರೆ ಮಾತ್ರ ನಾವು – ನಮ್ಮಿಂದ ಪ್ರಕೃತಿ ಅಲ್ಲ. ಹಾಗಾಗಿ ಹೆಚ್ಚಚ್ಚು ಮರಗಳನ್ನು ನೆಟ್ಟು ಈ ಮಳೆಗಾಲದಲ್ಲಿ ನೆಟ್ಟ ಮರ ಮುಂದಿನ ಮಳೆಗಾಲಕ್ಕೆ ಮತ್ತಷ್ಟು ಜನರಿಗೆ ಸ್ಪೂರ್ತಿ ಕೊಡಬೇಕು.
ನಡೀರಿ ಒಂದು ಬದಲಾವಣೆಯ ಹಾದಿಯತ್ತ!
ರವಿ ಶಿವರಾಯಗೊಳ
ಬಿವರ್ಗಿ, ಬೋರ್ಗಿ