Advertisement

ಅದು ಕೋಟ್ಯಂತರ ಕನಸುಗಳು ನನಸಾದ ದಿನ.. ವಿಶ್ವಕಪ್ ಗೆದ್ದ ಸಂಭ್ರಮಕ್ಕೆ ಹತ್ತರ ಸಂಭ್ರಮ

08:45 AM Apr 02, 2021 | ಕೀರ್ತನ್ ಶೆಟ್ಟಿ ಬೋಳ |

ಅಂದು ಕೋಟ್ಯಂತರ ಭಾರತೀಯರ ಆಸೆ, ಕನಸು, ನಿರೀಕ್ಷೆಗಳು ಒಂದೇ ಆಗಿತ್ತು. ಆ ಒಂದು ಕ್ಷಣವನ್ನು ತುಂಬಿಕೊಳ್ಳುಲು ದೇಶವಿಡಿ ಕಾದು ಕುಳಿತಿತ್ತು. 28 ವರ್ಷಗಳ ಹಿಂದೆ ಸಾಧಿಸಿದ್ದ, ಎಂಟು ವರ್ಷಗಳ ಹಿಂದೆ ಕೊನೆಯ ಕ್ಷಣದಲ್ಲಿ ಕೈ ಜಾರಿದ್ದ ಆ ಘಳಿಗೆಗಾಗಿ ಎಲ್ಲಾ ಪ್ರಯತ್ನಗಳು ನಡೆದಿತ್ತು. ಹೌದು, ಅಂದು 2011ರ ಎಪ್ರಿಲ್‌ 2. ಐಸಿಸಿ ಏಕದಿನ ವಿಶ್ವ ಕಪ್ ನ ಫೈನಲ್‌ ಪಂದ್ಯ!

Advertisement

1983ರಲ್ಲಿ ಯಾವುದೇ ನಿರೀಕ್ಷೆ ಇಲ್ಲದೆ ವಿಶ್ವಕಪ್ ಆಡಲು ತೆರಳಿದ್ದ ಕಪಿಲ್ ದೇವ್ ಬಳಗ ಬಹುದೊಡ್ಡ ಸಾಧನೆಯನ್ನೇ ಮಾಡಿತ್ತು. ಫೈನಲ್‌ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತ್ತು. ಅದು ಭಾರತದಲ್ಲಿ ಕ್ರಿಕೆಟ್ ಕುರಿತಾಗಿ ದೊಡ್ಡ ಸಂಚಲವನ್ನೇ ಸೃಷ್ಟಿಸಿತ್ತು. ನಂತರದ ದಿನಗಳಲ್ಲಿ ಭಾರತದಲ್ಲೇ ವಿಶ್ವಕಪ್ ನಡೆದರೂ ಕಪ್ ಮಾತ್ರ ಮನವರಿಕೆಯಾಗಿತ್ತು.

2003ರ ಫೈನಲ್‌ ಸೋಲು

2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಕೂಟಕ್ಕೆ ಭಾರತ ಬಲಿಷ್ಠ ತಂಡದೊಂದಿಗೆ ತೆರಳಿತ್ತು. ನಾಯಕ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್‌ ದ್ರಾವಿಡ್‌ ಮುಂತಾದವರು ತಂಡದಲ್ಲಿದ್ದರು. ಲೀಗ್ ಹಂತಗಳನ್ನು ದಾಟಿ ತಂಡ ಫೈನಲ್ ತಲುಪಿತ್ತು. ಆದರೆ ಅಂತಿಮ ಮುಖಾಮುಖಿಯಲ್ಲಿ ಎದುರಾಗಿದ್ದು ಚಾಂಪಿಯನ್‌ ಆಸ್ಟ್ರೇಲಿಯಾ ತಂಡ. ಮೊದಲು ಬ್ಯಾಟಿಂಗ್‌ ನಡೆಸಿದ ಪಾಂಟಿಂಗ್‌ ಬಳಗ ಮನಸೋ ಇಚ್ಛೆ ಬ್ಯಾಟ್ ಬೀಸಿತ್ತು. ಆರಂಭಿಕ ಆ್ಯಡಮ್ ಗಿಲ್ ಕ್ರಿಸ್ಟ್ ಅರ್ಧ ಶತಕ ಬಾರಿಸಿದರೆ ನಂತರ ಬಂದ ನಾಯಕ ರಿಕಿ ಪಾಂಟಿಂಗ್ ಭರ್ಜರಿ ಶತಕ ಬಾರಿಸಿದರು. ಪಾಂಟಿಂಗ್‌ ಅಜೇಯ 140 ರನ್ ಗಳಿಸಿದರೆ ಡೇಮಿಯನ್ ಮಾರ್ಟಿನ್‌ ಅಜೇಯ 88 ರನ್ ಗಳಿಸಿದರು.

Advertisement

ಭಾರತೀಯ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ಕಾಂಗರೂಗಳು ಕೇವಲ ಎರಡು ವಿಕೆಟ್ ಕಳೆದುಕೊಂಡು 359 ರನ್ ಗಳಿಸಿದರು. ಪ್ರಮುಖ ಬೌಲರ್ ಗಳಾದ ಜಾವಗಲ್ ಶ್ರೀನಾಥ್, ಜಹೀರ್ ಖಾನ್ ದುಬಾರಿಯಾಗಿದ್ದರು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ತಂಡ ಯಾವ ಹಂತದಲ್ಲೂ ಪ್ರತಿರೋಧ ತೋರಿಸಲಿಲ್ಲ. ಸೆಹವಾಗ್, ದ್ರಾವಿಡ್ ಬಿಟ್ಟರೆ ಬೇರಾವ ಆಟಗಾರರು ಉತ್ಸಾಹ ತೋರಲಿಲ್ಲ.

2007ರ ಕರಾಳ ಕೂಟ

ಸೌರವ್ ಗಂಗೂಲಿ ಮತ್ತು ಗ್ರೇಗ್ ಚಾಪೆಲ್ ವಿವಾದಗಳಿಂದ ಕಂಗೆಟ್ಟಿದ್ದ ಟೀಂ ಇಂಡಿಯಾ 2007ರ ವಿಶ್ವಕಪ್ ಗೆ ಹೊರಟ್ಟಿತ್ತು. ವೆಸ್ಟ್ ಇಂಡೀಸ್ ನಲ್ಲಿ ನಡೆದಿದ್ದ ಕೂಟದಲ್ಲಿ ತಂಡದ ನಾಯಕನಾಗಿದ್ದು ರಾಹುಲ್ ದ್ರಾವಿಡ್. ಆದರೆ ಮೊದಲ ಪಂದ್ಯದಲ್ಲೇ ಬಾಂಗ್ಲಾ ವಿರುದ್ಧ ತಂಡ ಹೀನಾಯ ಸೋಲನುಭಸಿತ್ತು. ಎರಡನೇ ಪಂದ್ಯದಲ್ಲಿ ದುರ್ಬಲ ಬರ್ಮುಡ ವಿರುದ್ಧ ಜಯ ಗಳಿಸಿದರೂ ಮೂರನೇ ಪಂದ್ಯದಲ್ಲಿ ಲಂಕಾ ವಿರುದ್ಧ 69 ರನ್ ಅಂತರದ ಸೋಲನುಭವಿಸಿ ಲೀಗ್ ಹಂತದಲ್ಲೇ ಗಂಟು ಮೂಟೆ ಕಟ್ಟಿತ್ತು. ವಿಶ್ವಕಪ್ ಗೆಲ್ಲಬೇಕೆಂದು ಸಚಿನ್ ಕನಸು ಮತ್ತೆ ಕನಸಾಗಿಯೇ ಉಳಿದಿತ್ತು.

ಲೀಗ್ ಹಂತದಲ್ಲೇ ತಂಡ ನಿರ್ಗಮಿಸಿದ್ದು ಭಾರೀ ಆಘಾತ ನೀಡಿತ್ತು. ಇದಾಗಿ ಕೆಲವೇ ತಿಂಗಳಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಧೋನಿ ನಾಯಕತ್ವದ ಯುವ ಪಡೆ ವಿಜಯಿಯಾಗಿತ್ತು. ಇದರ ಬೆನ್ನಲ್ಲೇ ಏಕದಿನ ನಾಯಕತ್ವಕ್ಕೆ ದ್ರಾವಿಡ್ ರಾಜೀನಾಮೆ ನೀಡಿದ್ದರು. ಈ ಜವಾಬ್ದಾರಿ ಮಹೇಂದ್ರ ಸಿಂಗ್ ಧೋನಿ ಪಾಲಿಗೆ ಲಭಿಸಿತ್ತು.

2011ರ ವಿಶ್ವಕಪ್ ಗೆ ತಯಾರಿ

2011ರ ವಿಶ್ವಕಪ್ ಭಾರತ ಸೇರಿದಂತೆ ಉಪಖಂಡದಲ್ಲಿ ನಡೆಯುವುದೆಂದು ನಿರ್ಧಾರವಾಗಿತ್ತು. ಟೀಂ ಇಂಡಿಯಾದ ಸಾರಥ್ಯ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ತಯಾರಿಯನ್ನು ಮೂರು ವರ್ಷಗಳ ಮೊದಲೇ ಆರಂಭಿಸಿದ್ದರು. ತಂಡದ ಫೀಲ್ಡಿಂಗ್ ಮಟ್ಟ ಸುಧಾರಣೆಗಾಗಿ ಹಿರಿಯ ಆಟಗಾರರನ್ನು ಕೈಬಿಟ್ಟು ಯುವ ಆಟಗಾರರಿಗೆ ಮಣೆ ಹಾಕಿದರು. ಹೀಗಾಗಿ ದ್ರಾವಿಡ್, ಗಂಗೂಲಿಯಂತಹ ಹಿರಿಯರು ತಂಡದಿಂದ ಹೊರ ಬೀಳಬೇಕಾಯಿತು. ಉತ್ತಪ್ಪ, ಸುರೇಶ್ ರೈನಾ, ವಿರಾಟ್ ಕೊಹ್ಲಿ ತಂಡಕ್ಕೆ ಕಾಲಿರಿಸಿದರು.

ತಂಡವನ್ನು ಬಲಪಡಿಸಿದ ಧೋನಿ ಹಲವು ಪ್ರಮುಖ ಕೂಟಗಳನ್ನು ಗೆದ್ದರು. ಆಸೀಸ್ ನೆಲದಲ್ಲಿ ನಡೆದ ಕಾಮನ್ ವೆಲ್ತ್ ಬ್ಯಾಂಕ್ ತ್ರಿಕೋನ ಸರಣಿಯಲ್ಲಿ ತಂಡ ಜಯ ಸಾಧಿಸಿತು. ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹವಾಗ್, ಜಹೀರ್ ಖಾನ್ ಜೊತೆ ಯುವ ಆಟಗಾರರನ್ನೊಳಗೊಂಡ ತಂಡ ಕಟ್ಟಿದ್ದರು ಧೋನಿ.

2011 ವಿಶ್ವಕಪ್ ವಿಜಯ ಯಾತ್ರೆ

2011ರ ವಿಶ್ವಕಪ್ ನಲ್ಲಿ ಭಾರತವೇ ಫೇವರೆಟ್ ಆಗಿತ್ತು. ಸಚಿನ್ ತೆಂಡೂಲ್ಕರ್ ಅವರ ಕೊನೆಯ ವಿಶ್ವಕಪ್ ಮತ್ತು ಭಾರತದಲ್ಲೇ ನಡೆಯುತ್ತಿದ್ದರಿಂದ ಅಭಿಮಾನಿಗಳ ನಿರೀಕ್ಷೆ ಸಹಜವಾಗಿಯೇ ಮುಗಿಲು ಮುಟ್ಟಿತ್ತು. ಅದಾಗಲೇ ಟಿ20 ವಿಶ್ವಕಪ್ ಗೆದ್ದ ಧೋನಿ ಈ ಬಾರಿಯೂ ಕಪ್ ಎತ್ತಿ ಹಿಡಿಯಬೇಕೆಂದು ಕೋಟಿ ಕೋಟಿ ಭಾರತೀಯ ಬಯಕೆಯಾಗಿತ್ತು. ಅಂತೂ ವಿಶ್ವಕಪ್ ದಿನ ಬಂದೇ ಬಿಡ್ತು.

ಉದ್ಘಾಟನಾ ಪಂದ್ಯದಲ್ಲಿ ಭಾರತ- ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ವಿರೇಂದ್ರ ಸೆಹವಾಗ್ ರ ಭರ್ಜರಿ 175 ರನ್ ಮತ್ತು ವಿರಾಟ್ ಕೊಹ್ಲಿ ಚೊಚ್ಚಲ ವಿಶ್ವಕಪ್ ಶತಕದ ಸಹಾಯದಿಂದ ಭಾರತ ಸುಲಭ ಗೆಲುವನ್ನೇ ಕಂಡಿತ್ತು. ಎರಡನೇ ಪಂದ್ಯ ಇಂಗ್ಲೆಂಡ್ ವಿರುದ್ಧ. ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಸಚಿನ್ ತೆಂಡೂಲ್ಕರ್ ಶತಕ ಬಾರಿಸಿ ನೆರವಾದರು. ಭಾರತ 338 ರನ್ ಗಳಸಿತ್ತು. ಆದರೆ ಇಂಗ್ಲೆಂಡ್ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಭರ್ಜರಿ ಶತಕ ಬಾರಿಸಿ ಸಹಾಯ ಮಾಡಿದರು. ಆದರೆ ಪಂದ್ಯ ಟೈ ಯಲ್ಲಿ ಅಂತ್ಯವಾಯಿತು.

ಇಡೀ ಕೂಟದಲ್ಲಿ ಭಾರತ ಸೋಲನುಭವಿಸಿದ್ದು ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ. ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ದ.ಆಫ್ರಿಕಾ ಮೂರು ವಿಕೆಟ್ ಅಂತರದ ಸೋಲನುಭವಿಸಿತ್ತು. ಆ ಪಂದ್ಯದಲ್ಲೂ ಸಚಿನ್ ಶತಕ ಬಾರಿಸಿದ್ದರು.

ಯುವರಾಜನ ದರ್ಬಾರ್

ಟೀಂ ಇಂಡಿಯಾದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಸದೃಢವಾಗಿದ್ದರೂ, ಆಲ್ ರೌಂಡರ್ ವಿಭಾಗದಲ್ಲಿ ಕೊರತೆಯಿತ್ತು. ಕೂಟಕ್ಕೆ ಮೊದಲಿನ ಕೆಲವು ತಿಂಗಳಿಂದ ಕಳಪೆ ಪ್ರದರ್ಶನ ತೋರಿದ್ದರೂ ಯುವರಾಜ್ ಸಿಂಗ್ ರನ್ನು ನಾಯಕ ಧೋನಿ ಬೆಂಬಲಿಸಿದರು. ಯುವಿ ಅದಕ್ಕೆ ನ್ಯಾಯ ಒದಗಿಸಿದರು ಕೂಡಾ. ಪ್ರತಿ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದರು. ವಿಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಬಾರಿಸಿದ ಯುವಿ, ಬೌಲಿಂಗ್ ನಲ್ಲಿ ಐದು ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದ್ದರು.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಭಾರತ, ಸೆಮಿ ಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಬಗ್ಗುಬಡಿಯಿತು. ಇದರೊಂದಿಗೆ ಎಂಟು ವರ್ಷಗಳ ಬಳಿಕ ಮತ್ತೆ ವಿಶ್ವಕಪ್ ಫೈನಲ್ ಗೆ ಕಾಲಿಟ್ಟಿತ್ತು. ಮತ್ತೊಂದು ಕಡೆ ಸೆಮಿ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿದ್ದ ಶ್ರೀಲಂಕಾ ಫೈನಲ್ ಟಿಕೆಟ್ ಪಡೆದಿತ್ತು.

ಎಪ್ರಿಲ್ 2, ವಾಂಖೆಡೆ ಸ್ಟೇಡಿಯಂ

ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಸಜ್ಜಾಗಿತ್ತು. ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. ಮಾಜಿ ಆಟಗಾರರು, ಬಾಲಿವುಡ್ ಸೆಲೆಬ್ರೆಟಿಗಳು ಪಂದ್ಯ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ವಿಶ್ವ ಏಕದಿನ ಕ್ರಿಕೆಟ್ ನ ರಾಜನಾಗಲು ಉಪ ಖಂಡದ ಎರಡು ದೇಶಗಳು ಕಾದಾಡುತ್ತಿದ್ದವು. ಒಂದೆಡೆ ವಿಶ್ವಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ್ದ ಮುತ್ತಯ್ಯ ಮುರಳೀಧರನ್, ಮತ್ತೊಂದೆಡೆ ವಿಶ್ವ ಕ್ರಿಕೆಟ್ ನ ರನ್ ಸರದಾರ ಸಚಿನ್ ತೆಂಡೂಲ್ಕರ್. ಇಬ್ಬರಿಗೂ ಕೊನೆಯ ವಿಶ್ವಕಪ್ ಪಂದ್ಯ!

ಟಾಸ್ ಗೆದ್ದ ಲಂಕಾ ನಾಯಕ ಕುಮಾರ ಸಂಗಕ್ಕಾರ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಲಂಕಾಗೆ ಜಯವರ್ಧನೆ, ಸಂಗಕ್ಕಾರ, ಕುಲಶೇಖರ ಬ್ಯಾಟಿಂಗ್ ನಿಂದ ನೆರವಾದರು. ಅನುಭವಿ ಆಟಗಾರ ಮಹೇಲಾ ಜಯವರ್ಧನೆ ಶತಕ ಸಿಡಿಸಿದ್ದರು. ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಆಟಗಾರನ ತಂಡ ಸೋತ ಇತಿಹಾಸವೇ ಇರಲಿಲ್ಲ. ಹೀಗಾಗಿ ಲಂಕನ್ನರ ಆತ್ಮವಿಶ್ವಾಸ ಹೆಚ್ಚೇ ಇತ್ತು. ಅಂದಹಾಗೆ 50 ಓವರ್ ಗಳಲ್ಲಿ ಲಂಕಾ ಆರು ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿ, ಭಾರತಕ್ಕೆ 275 ರನ್ ಗುರಿ ನೀಡಿತ್ತು.

ಸೂರ್ಯ ಮರೆಯಾಗಿದ್ದ. ಚಂದ್ರ ಆಗಲೇ ದರ್ಶನ ನೀಡಿದ್ದ. ಭಾರತದ ಆರಂಭಿಕ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹವಾಗ್ ಮೈದಾನಕ್ಕೆ ಕಾಲಿಡುತ್ತಿದ್ದಂತೆ ವಾಂಖೆಡೆ ಅಂಗಳದಲ್ಲಿ ಕರಡಾತನ ಮುಗಿಲು ಮುಟ್ಟಿತ್ತು. ಆದರೆ ಕೇವಲ ಎರಡು ಎಸೆತಗಳಲ್ಲಿ ನೀರವ ಮೌನ. ಲಸಿತ್ ಮಾಲಿಂಗ ಎಸೆತಕ್ಕೆ ಸೆಹವಾಗ್ ಔಟ್. ತಂಡದ ಮೊತ್ತ 31 ರನ್ ಆಗುವಷ್ಟರಲ್ಲಿ ಸಚಿನ್ ತಂಡೂಲ್ಕರ್ ಕೂಡಾ ಔಟ್. ಶ್ರೀಲಂಕಾ ಆಟಗಾರರು ಸಂತಸದಲ್ಲಿ ತೇಲಾಡಿದ್ದರು. ಕ್ರೀಡಾಂಗಣ ಸಂಪೂರ್ಣ ನಿಶ್ಯಬ್ಧ.

ಆದರೆ ಗೌತಮ್ ಗಂಭೀರ್ ಇನ್ನೂ ಕ್ರೀಸ್ ನಲ್ಲಿದ್ದ. ಆತನಿಗೆ ಜೊತೆಯಾಗಿದ್ದು ಯುವ ವಿರಾಟ್ ಕೊಹ್ಲಿ. ದೃಢಚಿತ್ತದಿಂದ ಇನ್ನಿಂಗ್ಸ್ ಕಟ್ಟಿದ ಈ ಡೆಲ್ಲಿ ಜೋಡಿ ಸಿಂಗಲ್ಸ್ ಡಬಲ್ಸ್ ಗಳಿಂದ ನಿಧಾನಕ್ಕೆ ರನ್ ಪೇರಿಸತೊಡಗಿದರು. ತಂಡದ ಮೊತ್ತ 114 ರನ್ ಆಗಿತ್ತು. ಭಾರತ ಉತ್ತಮ ಸ್ಥಿತಿಯಲ್ಲಿದೆ ಎನ್ನುವಷ್ಟರಲ್ಲಿ ದಿಲ್ಶಾನ್ ಹಿಡಿದ ಅದ್ಭುತ ಕ್ಯಾಚ್ ಗೆ ವಿರಾಟ್ ಕೊಹ್ಲಿ ಔಟ್!

ಕೂಟದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಯುವರಾಜ್ ಸಿಂಗ್ ಇನ್ನೇನು ಬ್ಯಾಟಿಂಗ್ ಗೆ ಆಗಮಿಸಲು ಬರುತ್ತಿದ್ದವರಿಗೆ ಅಚ್ಚರಿ ನೀಡಿದ್ದು ಮಹೇಂದ್ರ ಸಿಂಗ್ ಧೋನಿ. ಭಡ್ತಿ ಪಡೆದು ಬಂದ ಧೋನಿ ಆಗಲೇ ಸೆಟ್ ಆಗಿದ್ದ ಗಂಭೀರ್ ಜೊತೆಗೆ ಇನ್ನಿಂಗ್ಸ್ ಕಟ್ಟಿದರು. ಲಂಕಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಶತಕದ ಜೊತೆಯಾಟವಾಡಿದರು.

ಲಂಕನ್ನರ ಬೌಲಿಂಗ್ ಗೆ ಸೆಡ್ಡು ಹೊಡೆದು ನಿಂತು ಬ್ಯಾಟಿಂಗ್ ಮಾಡಿದ ಗೌತಮ್ ಗಂಭೀರ್ ವೃತ್ತಿ ಜೀವನ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ತಂಡಕ್ಕೆ ಇನ್ನು ಗೆಲುವಿಗೆ ಕೇವಲ 52 ರನ್ ಅಗತ್ಯವಿತ್ತು. ಗಂಭೀರ್ ಶತಕಕ್ಕೆ ಕೇವಲ ಒಂದು ಬೌಂಡರಿ ಅಗತ್ಯವಿತ್ತು. ತಿಸ್ಸರ ಪೆರೆರಾ ಎಸೆದ ಚೆಂಡನ್ನು ಬೌಂಡರಿ ಬಾರಿಸುವ ಯತ್ನದಲ್ಲಿ ಗಂಭಿರ್ ಬೌಲ್ಡ್ ಆಗಿದ್ದರು! ಮೈದಾನದಲ್ಲಿ ಮತ್ತೆ ನೀರವ ಮೌನ.

ಕ್ರೀಸ್ ಗೆ ಆಗಮಿಸಿದ ಯುವರಾಜ್ ಜೊತೆ ಸೇರಿದ ಮಹೇಂದ್ರ ಸಿಂಗ್ ಧೋನಿ ಜಯದತ್ತ ಸಾಗಿದ್ದರು. ನುವಾನ್ ಕುಲಶೇಕರ ಎಸೆದ 49ನೇ ಓವರ್ ನ ಎರಡನೇ ಎಸೆತವನ್ನು ಧೋನಿ ಸಿಕ್ಸರ್ ಬಾರಿಸುವುದರೊಂದಿಗೆ ಭಾರತ 28 ವರ್ಷಗಳ ಬಳಿಕ ವಿಶ್ವಕಪ್ ಜಯಿಸಿತ್ತು. ಧೋನಿ ಅಜೇಯ 91 ರನ್ ಬಾರಿಸಿ ಹೀರೋ ಆಗಿದ್ದರು.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರ ಕನಸು ಕೊನೆಗೂ ನನಸಾಗಿತ್ತು. ಕೋಟ್ಯಂತರ ಭಾರತೀಯರ ಕಣ್ಣುಗಳು ಸಂತೋಷದಿಂದ ತುಂಬಿದ್ದವು. ದೇಶದೆಲ್ಲೆಡೆ ಹಬ್ಬದ ವಾತಾವರಣ. ತಂಡದ ಯುವ ಆಟಗಾರರು ಸಚಿನ್ ತೆಂಡೂಲ್ಕರ್ ರನ್ನು ಭುಜದ ಮೇಲೆ ಹೊತ್ತು ಮೈದಾನಕ್ಕೆ ಸುತ್ತ ಬಂದಿದ್ದರು. ಹರ್ಭಜನ್, ಯುವರಾಜ್ ಸಿಂಗ್ ಕಣ್ಣುಗಳಲ್ಲಿ ಕಣ್ಣೀರು…!

ಅಂತೂ ಭಾರತ ಏಕದಿನ ವಿಶ್ವಕಪ್ ಗೆದ್ದು ವಿಶ್ವ ಚಾಂಪಿಯನ್ ಆಗಿತ್ತು.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next