Advertisement

ನನ್ನನೇ ನಾ ಅರಿಯುವೆ: ವಿಶ್ವೇಶತೀರ್ಥರ ವಿಶ್ವಾಸ

09:47 AM Apr 28, 2019 | Team Udayavani |

ಉಡುಪಿ: ಸಾರ್ವಜನಿಕರ ಹೊಗಳಿಕೆಗೆ ನಾನು ಅರ್ಹನೆ ಎಂಬುದನ್ನು ನಿಶ್ಚಯಿಸ ಬೇಕಾಗಿದೆ. ಮೊದಲು ನನ್ನನೇ ನಾನು ಮತ್ತೂಮ್ಮೆ ಅವಲೋಕಿಸಬೇಕಾಗಿದೆ. ಆತ್ಮಾವಲೋಕನ ಮಾಡಿಕೊಳ್ಳುವೆ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು.

Advertisement

ಶನಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್‌ ಅವರ ಪೇಜಾವರ ಶ್ರೀಗಳ ಚಿತ್ರಸಂಪುಟ “ಎ ಡೇ ವಿತ್‌ದ ಸೈಂಟ್‌ ದೆನ್‌ ಆ್ಯಂಡ್‌ ನೌ’ ಕಾಫಿಟೇಬಲ್‌ ಬುಕ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಪ್ರತಿಯೊಬ್ಬ ಮನುಷ್ಯನಿಗೂ ಜನರು ನೋಡು ವುದು, ತಾನು ತನ್ನನ್ನು ನೋಡುವುದು ಹಾಗೂ ವಾಸ್ತವ ವ್ಯಕ್ತಿತ್ವ ಹೀಗೆ ಮೂರು ವ್ಯಕ್ತಿತ್ವಗಳಿರುತ್ತವೆ. ಯಾರು ಎಷ್ಟೇ ಹೊಗಳಿದರೂ ನಮ್ಮ ದೌರ್ಬಲ್ಯ ನಮಗೆ ಗೊತ್ತಿರುತ್ತದೆ. ಆದರ ಬಗ್ಗೆ ಆತ್ಮವಿಮರ್ಶೆ ಮಾಡಬೇಕಾಗಿದೆ ಎಂದರು.

ನಕ್ಸಲ್‌ ಪ್ರದೇಶದಲ್ಲಿ ಪೂಜೆ ಮಾಡುವಾಗ ಸೆರೆಹಿಡಿದ ಚಿತ್ರ ಮನಸ್ಸಿಗೆ ಸಂತೋಷ ನೀಡಿದೆ ಇಂತಹ ಹಲವಾರು ಚಿತ್ರಗಳು ಪುಸ್ತಕದಲ್ಲಿವೆ ಎಂದರು.

ಸ್ತುತ್ಯರ್ಹ ಕಾರ್ಯ
ಚಿತ್ರ ಸಂಪುಟ ಲೋಕಾರ್ಪಣೆಗೊಳಿಸಿ ಮಾತನಾಡಿದ ಕರ್ನಾಟಕ ಸಂಸ್ಕೃತ ವಿ.ವಿ. ನಿವೃತ್ತ ಕುಲಪತಿ ಪೊ›| ಮಲ್ಲೇಪುರಂ ಜಿ. ವೆಂಕಟೇಶ್‌ ಅವರು, ಪೇಜಾವರ ಶ್ರೀಪಾದರಿಗೆ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಹಾಗೂ ವೈಯಕ್ತಿಕ ಮುಖಗಳಿವೆ. ಆ ಮುಖಗಳನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ ಎಂದರು.

Advertisement

ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಮೂಡುಬಿದಿರೆ ಆಳ್ವಾಸ್‌ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿದರು.

ಪೇಜಾವರ ಶ್ರೀಪಾದರಿಗೆ ಕಮಲದ ಹೂವಿನ ಆಕೃತಿ ಮೇಲೆ ಕೂರಿಸಿ ಪುಷ್ಪಾರ್ಚನೆ ಸಲ್ಲಿಸಲಾಯಿತು. ಆಸ್ಟ್ರೋ ಮೋಹನ್‌ ಸ್ವಾಗತಿಸಿ, ಉಪ್ಪಾ ಟ್ರಸ್ಟಿ ಜನಾರ್ದನ್‌ ಕೊಡವೂರು ವಂದಿಸಿದರು. ವಾಸುದೇವ್‌ ಭಟ್‌ ಕಾರ್ಯಕ್ರಮ ನಿರ್ವಹಿಸಿದರು. ಭೂತರಾಜ ಪ್ರಕಾಶನದ ಪ್ರವೀಣಾ ಮೋಹನ್‌ ಉಪಸ್ಥಿತರಿದ್ದರು.

“ನಾನು ಯಾರು’
ಅರಿಯುವ ಯತಿ ಜನ್ಮ
ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಮಾತನಾಡಿ, ಮನುಷ್ಯ ಜನ್ಮ ದೊಡ್ಡದು. ವ್ಯಕ್ತಿಯು ತಾನು ಮಾಡುವ ಪ್ರತಿಯೊಂದು ಕೆಲಸವನ್ನು ಇನ್ನೂ ಚೆನ್ನಾಗಿ ಮಾಡಬೇಕೆಂದು ಬಯಸುತ್ತಾನೆ. ಅಂತೆಯೇ ನಾನು ಯಾರು ಎನ್ನುವ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಉನ್ನತ ಜನ್ಮವೇ ಯತಿ ಜನ್ಮ ಎಂದು ಹೇಳಿದರು.

ಉದಯವಾಣಿಗೆ ಶ್ರೀಪಾದರ ನಂಟು
ಪೇಜಾವರ ಶ್ರೀಪಾದರು ತಮ್ಮ ಎರಡನೇ ಪರ್ಯಾಯ ಅವಧಿ 1969ರ ಡಿಸೆಂಬರ್‌ನಲ್ಲಿ ಆಯೋಜಿಸಿದ ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಮ್ಮೇಳನದಲ್ಲಿ ಉದಯವಾಣಿ ಪತ್ರಿಕೆಯ ಪ್ರಾಯೋಗಿಕ ಸಂಚಿಕೆಯನ್ನು ಹೊರತರಲಾಗಿತ್ತು. ಆಗಿನ ಆರೆಸ್ಸೆಸ್‌ ಸರಸಂಘಚಾಲಕ್‌ ಗುರೂಜಿ ಗೋಳ್ವಲ್ಕರ್‌, ಡಾ| ಡಿ. ವೀರೇಂದ್ರ ಹೆಗ್ಗಡೆ, ಫೀ| ಮಾ| ಜ| ಕಾರ್ಯಪ್ಪ, ಮೇವಾಡದ ಮಹಾರಾಜ ಮೊದಲಾದ ಮಹಾದಿಗ್ಗಜರು ಪಾಲ್ಗೊಂಡಿದ್ದರು. 1970ರ ಜನವರಿ 1ರಂದು ಪತ್ರಿಕೆ ಆರಂಭಗೊಂಡಿತು. ಕರಾವಳಿಯಿಂದ ಆರಂಭವಾದ ಪತ್ರಿಕೆ ಇಂದು ರಾಜ್ಯದ ವಿವಿಧ ಮೂಲೆಗಳಲ್ಲಿ ಪ್ರಸಾರವಾಗುತ್ತಿದೆ. ಇದೀಗ ಉದಯವಾಣಿ 50ರ ಸಂಭ್ರಮಾಚರಣೆಯಲ್ಲಿದೆ ಎಂದು ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ. ಸಿಇಒ ವಿನೋದ್‌ ಕುಮಾರ್‌ ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next