‘ಅಪ್ಪ’ ಎಂಬ ಪದವೇ ಒಂದು ಅದ್ಬುತ ಶಕ್ತಿ. ತಂದೆ ಮಗಳ ಸಂಬಂಧ ಅನ್ನೋದೇ ಒಂಥರಾ ಚಂದ. ಅಪ್ಪ ಮಗಳ ಮೊದಲ ಹೀರೊ, ಮೊದಲ ಪ್ರೀತಿ, ಮೊದಲ ಕನಸಿನ ನನಸಿಗೆ ರೂವಾರಿ. ಈ ಜನುಮಕ್ಕೆ ಸಾಕಾಗುವಷ್ಟು ಪ್ರೀತಿ ಎಂಬ ಆಸ್ತಿ ಕೊಡುವ ತಂದೆ.
‘ಅಪ್ಪ’ ಎಂದರೆ ಬೆಳೆಯುವ ಬಳ್ಳಿಗೆ ಆಸರೆ, ಮಗಳನ್ನು ಗುರಿ ಮುಟ್ಟಿಸುವ ಹೊಣೆ, ಬದುಕಿನಲ್ಲಿ ಎಲ್ಲವೂ ಅಪ್ಪನೇ….. ಹೆಣ್ಣು ಮಕ್ಕಳಿಗೆ ತಾಯಿಗಿಂತ ತಂದೆಯನ್ನ ಹಚ್ಕೋಳ್ಳೋದೇ ಜಾಸ್ತಿ. ಮಗಳಿಗೆ ತಂದೆ ಭಾವನಾತ್ಮಕ ಶಕ್ತಿ ಇದ್ದಂತೆ. ಮಗಳ ನಿಸ್ವಾರ್ಥಿ ಜೀವಿಯೇ ಅಪ್ಪ, ಮಗಳು ಅಪ್ಪನ ಕೈ ಬೆರಳನ್ನು ಹಿಡಿದರೆ ಯಾರೊಬ್ಬರ ಕಾಲನ್ನು ಹಿಡಿಯುವ ಸಂದರ್ಭವೇ ಬರುವುದಿಲ್ಲ. ಅಪ್ಪ ಎನ್ನುವ ಹೆಸರು ಎರಡಕ್ಷರದಲ್ಲಿದೆ, ಆದರೆ ಆ ಎರಡಕ್ಷರದಲ್ಲಿ ಮಗಳ ಇಡೀ ಪ್ರಪಂಚವೇ ಇದೆ. ಅಪ್ಪನ ರಾಜಕುಮಾರಿ, ದೇವತೆ, ಗೆಳತಿ, ಮಗ ಎಲ್ಲವೂ ಮಗಳೇ.
ಅಪ್ಪನ ಮನಸ್ಸು ಆಕಾಶದಂತೆಯೇ ಅವನ ಪ್ರೀತಿಯು ಅಷ್ಟೇ ವಿಶಾಲವಾಗಿರುತ್ತದೆ. ಆತನಿಂದ ಮಗಳು ಅನೇಕ ವಿಷಯವನ್ನು ನಿರೀಕ್ಷಿಸುತ್ತಾಳೆ. ಅದನ್ನು ಅರಿತು ನೀಡಿದರೆ ಅವಳ ಬಾಳು ಹುಣ್ಣಿಮೆಯ ಬೆಳದಿಂಗಳ ಚಂದಿರನಂತೆ. ಅತ್ತೆ ಮನೆಗೆ ಹೊರಟು ನಿಂತ ಆ ಕ್ಷಣ ಅಪ್ಪ ಮಗುವಾಗುತ್ತಾನೆ. ಮಗಳ ಜನನವನ್ನು ಮೊದಲು ಸಂಭ್ರಮಿಸುವುದೇ ತಂದೆ. ಹಾಗೆಯೇ ಅತ್ತೆ ಮನೆಗೆ ಹೊರಟ ಮಗಳ ಆ ಕ್ಷಣದಲ್ಲಿ ಮೊದಲು ದುಃಖಿಸುವುದೇ ಅವಳ ಅಪ್ಪನಾಗಿರುತ್ತಾನೆ. ಅಪ್ಪನ ಪಾಲಿಗೆ ಮಗಳು ರಾಜಕುಮಾರಿ. ಅವರಿಬ್ಬರ ಸಂಬಂಧ ಕೇವಲ ಮಾತಿನಲ್ಲಿ ವರ್ಣಿಸಲಾಗದು.
ಹೆಣ್ಣು ಮಗುವನ್ನು ಪಡೆಯುವ ಅದೃಷ್ಟ ಎಲ್ಲಾ ಅಪ್ಪಂದಿರಿಗೆ ದೊರೆಯುವುದಿಲ್ಲ. ಜೀವನದಲ್ಲಿ ಒಂದಾದರು ಹೆಣ್ಣು ಮಗು ಬೇಕು ಎಂಬ ಹಂಬಲ ಪಡುವ ಅಪ್ಪಂದಿರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಗಂಡು ಮಕ್ಕಳು ತಮ್ಮ ಅಪ್ಪ-ಅಮ್ಮನನ್ನು ತುಂಬಾ ಪ್ರೀತಿ ಮಾಡಬಹುದು. ಆದರೆ ಹೆಣ್ಣು ಮಗು ಪ್ರೀತಿಸುವ ಪರಿಯೇ ಅದ್ಬುತ! ತಂದೆಗೆ ಕಷ್ಟ ಅಂತ ಬಂದ್ರೆ ಮಗ ಸಹಾಯಕ್ಕೆ ಬರುತ್ತಾನೋ ಇಲ್ಲವೋ ಆದರೆ ಮಗಳ ಸಾಂತ್ವನದ ಮಾತುಗಳೇ ತಂದೆಗೆ ಸಹಾಯ.
ಮಗಳ ಮದುವೆಯವರೆಗೆ ಅವಳ ಎಲ್ಲಾ ಜವಾಬ್ದಾರಿಯನ್ನು ತಂದೆ ಹೊತ್ತಿರುತ್ತಾನೆ. ಮಗಳು ವಯಸ್ಸಿನ ಗಡಿಯಲ್ಲಿ ನಿಂತಾಗ ಅವಳಿಗೆ ತಕ್ಕ ಹುಡುಗನನ್ನು ಹುಡುಕಿ ಅವಳ ಜೀವನವನ್ನೇ ಅವನ ಕೈಯೊಳಗೆ ಇರಿಸಿ ಮನದೊಳಗೆ ದುಃಖಿಸುತ್ತಾ ಮೌನ ಲೋಕವನ್ನೇ ಸೃಷ್ಟಿಸುತ್ತಾನೆ. ಮಗಳು ಗಂಡನ ಮನೆಗೆ ಹೊರಟು ಹೋದ ಗಳಿಗೆಯಿಂದ ಅವಳ ತವರು ಮನೆ ಸೂತಕದ ವಾತಾವರಣದಿಂದ ಕೂಡಿರುತ್ತದೆ. ಇದು ಅಪ್ಪನ ಪಾಲಿಗೆ ದೇವರಿಲ್ಲದ ಗುಡಿ ಇದ್ದಂತೆ.
ಅಪ್ಪ ಮಗಳ ಮನೆಗೆ ಹೋದ ಕ್ಷಣದಲ್ಲಿ ಅವಳ ಸಂತೋಷವನ್ನು ವರ್ಣಿಸಲು ಆಗುವುದೇ ಇಲ್ಲ. ಅವಳು ಎಷ್ಟೇ ದೊಡ್ಡವಳಾದರೂ ತಂದೆಗೆ ಅವಳು ಪುಟ್ಟ ಮುದ್ದಿನ ಮಗಳೇ. ಕೂಸುಮರಿ ಮಾಡಿ ಹೊತ್ತಾಡಿ ಕೈತುತ್ತು ತಿನ್ನಿಸಿ ತೊಟ್ಟಿಲ ತೂಗಿ ಜೋಗುಳ ಹಾಡುವ ಅಪ್ಪ, ಅವನ ಪ್ರೀತಿ, ಮಮತೆ, ಮಾತು, ಕಾಳಜಿ, ಅವನ ಕಾವಲು ಇವೆಲ್ಲವೂ ಸಿಗದ ಹೆಣ್ಣು ಮಕ್ಕಳು ಈ ಪ್ರಪಂಚದಲ್ಲಿ ತುಂಬಾ ಜನ ಇದ್ದರೆ. ಅವರಿಗೆ ಅಪ್ಪನಿಲ್ಲದ ಜೀವನ ಶೂನ್ಯವಾದಂತೆ.
ನನ್ನ ಜೀವನದ ಪಾಲಕದಾತನಿಗೆ ನಾನು ಎಂದಿಗೂ ಚಿರಋಣಿ… Love you paaa..
– ನಾಗಮಣಿ. ಈ
ಪ್ರಥಮ ಪತ್ರಿಕೋದ್ಯಮ
ಎಂಜಿಎಂ ಕಾಲೇಜು ಉಡುಪಿ