Advertisement

ತಾಯಿಗೇ ತಾಯಿಯಾದ ಹೆಣ್ಣು ಮಗು

09:19 AM May 27, 2019 | Team Udayavani |

ಕೊಪ್ಪಳ: ಮಾನಸಿಕವಾಗಿ ನೊಂದು ಆಸ್ಪತ್ರೆಗೆ ದಾಖಲಾಗಿದ್ದ ತಾಯಿಗೆ 6 ವರ್ಷದ ಹೆಣ್ಣು ಮಗುವೇ ತಾಯ್ತನ ಪ್ರೀತಿ ತೋರಿದ್ದಲ್ಲದೆ, ಅವರಿವರ ಬಳಿ ಭಿಕ್ಷೆ ಬೇಡಿ ತಾಯಿಗೆ ಊಟ ಮಾಡಿಸುತ್ತಿರುವ ಪ್ರಸಂಗ ನಾಲ್ಕು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿದೆ.

Advertisement

ಹೌದು. ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾಮದ ದುರ್ಗಮ್ಮ ಮಾನಸಿಕವಾಗಿ ನೊಂದು ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿ ಅರ್ಜುನ್‌ ಕಳೆದ ನಾಲ್ಕು ದಿನದಿಂದ ಪತ್ನಿ ಹಾಗೂ ಆರು ವರ್ಷದ ಹೆಣ್ಣು ಮಗು ಭಾಗ್ಯಾಳನ್ನು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ್ದಾನೆ. ಆಸ್ಪತ್ರೆಯಲ್ಲಿ ತಾಯಿ-ಮಗಳು ಇಬ್ಬರೇ ಇದ್ದಾರೆ. ನಿತ್ಯವೂ ಆಸ್ಪತ್ರೆಯಲ್ಲಿ ಊಟ, ಉಪಚಾರಕ್ಕೆ ಯಾರೂ ಇಲ್ಲದಂತಾಗಿದ್ದರಿಂದ ಆರು ವರ್ಷದ ಮಗು ಆಸ್ಪತ್ರೆಯ ಆವರಣದಲ್ಲಿಯೇ ಅವರಿವರ ಬಳಿ ಭಿಕ್ಷೆ ಬೇಡಿ ಕೊಟ್ಟಷ್ಟು ಊಟವನ್ನು ತಾಯಿ ದುರ್ಗಮ್ಮಳಿಗೆ ಉಣ ಬಡಿಸುತ್ತಿದ್ದಾಳೆ.

ಆಸ್ಪತ್ರೆಗೆ ಬರುವ ಜನರಿಂದ, ಸಿಕ್ಕಷ್ಟು ಆಹಾರವನ್ನು ಪಡೆದು ತಾಯಿಗೆ ನೀಡಿ, ತಾಯ್ತನದ ಪ್ರೀತಿ ತೋರುತ್ತಿದ್ದಾಳೆ. ಈ ಘಟನೆ ಮನ ಕಲಕುವಂತಿದ್ದರೂ ಪತಿ ಅರ್ಜುನ್‌ ಇತ್ತ ಇಣುಕಿ ನೋಡಿಲ್ಲ. ದುರ್ಗಮ್ಮಳಿಗೆ ಆರೋಗ್ಯದಲ್ಲಿ ಸ್ವಲ್ಪ ತೊಂದರೆಯಿದ್ದಿದ್ದರಿಂದ ಕೂಗಾಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ಪಡೆದು ಊರಿಗೆ ತೆರಳುವಂತೆ ಹೇಳಿದ್ದಾರೆ. ಆದರೆ ಆ ಮಹಿಳೆ ಆಸ್ಪತ್ರೆಯ ಆವರಣದಲ್ಲೇ ವಾಸ ಮಾಡಿದ್ದಾಳೆ. ನಾಲ್ಕು ದಿನದಿಂದಲೂ ಮಗುವೇ ತಾಯಿಯನ್ನು ನೋಡಿಕೊಳ್ಳುತ್ತಿದೆ.

ಮಾಹಿತಿ ತಿಳಿದ ಸಂಘಟಕನಾಕಾರ ಬಸವರಾಜ ಶೀಲವಂತರ್‌ ಆಸ್ಪತ್ರೆಗೆ ಭೇಟಿ ನೀಡಿ ಆ ಮಹಿಳೆಗೆ ಕೂಡಲೇ ಚಿಕಿತ್ಸೆ ನೀಡಬೇಕು. ಶಿಕ್ಷಣ ಪಡೆಯಬೇಕಾದ ಮಗು ಭಿಕ್ಷೆ ಬೇಡಿ ತಾಯಿಗೆ ಊಟ ಮಾಡಿಸುತ್ತಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಗುವಿಗೆ ಶಿಕ್ಷಣ ಕೊಡಿಸಬೇಕು. ತಾಯಿಗೆ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next