Advertisement
ಯಕ್ಷಗಾನಕ್ಕೊಂದು ಹೊಸ ಭಾಷ್ಯ ಬರೆದಂತೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಮುನ್ನಡೆಸಿ ಜನಮನದಲ್ಲಿ ವಿಶೇಷ ಛಾಪನ್ನು ಒತ್ತಿದ ಕೆರೆಮನೆ ಶಂಭು ಹೆಗಡೆಯವರ ಹೆಸರಲ್ಲಿ ಆಯೋಜನೆಗೊಳ್ಳುತ್ತಿರುವ ರಾಷ್ಟ್ರೀಯ ನಾಟ್ಯೋತ್ಸವ ಕರ್ನಾಟಕದಾದ್ಯಂತ ಜನಮನ್ನಣೆ ಪಡೆದಿದೆ. ದೇಶದ ವಿವಿಧೆಡೆಯ ಕಲಾತಂಡಗಳು ಇಲ್ಲಿ ಬಂದು ಪ್ರದರ್ಶನ ನೀಡುತ್ತವೆ.
Related Articles
Advertisement
ತಮ್ಮ ತಂಡವನ್ನು ಆಹ್ವಾನಿಸಿದಲ್ಲಿಗೆ ಹೋಗಿ, ಅಲ್ಲಿಗೆ ಬಂದ ಇನ್ನಿತರ ಕಡೆಯ ಕಲಾತಂಡಗಳ ಪ್ರದರ್ಶನವನ್ನು ಕಂಡು ಗಮನಿಸಿ, ಅದರ ವೈವಿಧ್ಯಕ್ಕೆ ಮಾರುಹೋಗಿ, ಅದರ ಅನನ್ಯತೆಯನ್ನು ಮನಗಂಡು ಇಡಗುಂಜಿಗೆ ಆಹ್ವಾನಿಸುತ್ತಾರೆ. ಹಾಗಾಗಿ, ಕನ್ಯಾಕುಮಾರಿಯಿಂದ, ಪಂಜಾಬ್, ಕಾಶ್ಮೀರದವರೆಗೆ, ಗುಜರಾತಿನಿಂದ ಪೂರ್ವದ ಅಸ್ಸಾಂವರೆಗೆ ಅವರ ಗೃಧೃದೃಷ್ಟಿ ಹರಿದದ್ದೇ ಈ ನಾಟ್ಯೋತ್ಸವ ಪ್ರಸಿದ್ಧಿ ಪಡೆಯಲು ಕಾರಣವಾಯಿತು.
ಎಲ್ಲೆಲ್ಲಿಂದಲೋ ಕಲಾ ತಂಡವನ್ನು ಕರೆತಂದರೆ ಸಾಕೆ? ಅವರಿಗೆ ಅವರ ಕಲಾಪ್ರದರ್ಶನಕ್ಕೆ ತಕ್ಕುದಾದ ರಂಗಮಂಚ ಬೇಡವೆ? ಅರ್ಧ ಚಂದ್ರಾಕೃತಿಯ ರಂಗಮಂಚ ಪ್ರತಿವರ್ಷ ಉನ್ನತಿಗೇರುತ್ತ ಈಗ ಅತ್ಯುತ್ತಮ ಮಟ್ಟದ, ಸರ್ವಸಜ್ಜಿತ “ಯಕ್ಷಾಂಗಣ’ ಮೈತಳೆದಿದೆ.
ಈ ರಾಷ್ಟ್ರೀಯ ನಾಟ್ಯೋತ್ಸವ ಐದು-ಆರು ದಿನಗಳ ಉದ್ದಕ್ಕೂ ನಡೆಯುತ್ತದೆ. ಜೊತೆಗೆ ಯಕ್ಷಗಾನದ ನಾನಾ ಪ್ರಕಾರಗಳಲ್ಲಿ ಮರೆಗೆ ಸರಿದ ಹೆಸರಾಂತ ಕಲಾವಿದರನ್ನು ಹಿಮ್ಮೇಳದ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದೂ ನಡೆಯುತ್ತ ಬಂದಿದೆ. ಎಲ್ಲೂ ರಂಗವನ್ನೇರದೆ, ಸನ್ಮಾನ, ಪ್ರಶಸ್ತಿ ಎಂಬುದರೇನೆಂದು ಅರಿಯದ ಅಬೋಧ ಕಲಾವಿದರು ಪ್ರಾಯದ ದೆಸೆಯಿಂದ, ಅನಾರೋಗ್ಯ ಪೀಡಿತರಾಗಿ ಯಕ್ಷರಂಗದಿಂದ ದೂರವುಳಿದವರನ್ನು ರಂಗಕ್ಕೆ ಕರೆತಂದು ಸನ್ಮಾನಿಸುತ್ತಿರುವುದು ಗಮನಾರ್ಹ.
ಈ ಮಂಡಳಿಯ ಸ್ಥಾಪನೆ 85 ವರ್ಷಗಳ ಹಿಂದೆ, ಶಂಭು ಹೆಗಡೆಯವರ ತಂದೆ ಕೆರೆಮನೆ ಶಿವರಾಮ ಹೆಗಡೆಯವರಿಂದ ಆಯಿತು. ಶಿವರಾಮ ಹೆಗಡೆಯವರ ನಂತರ ಮಗ ಶಂಭು ಹೆಗಡೆಯವರ ಹೆಗಲಿಗೆ ಜವಾಬ್ದಾರಿ ಬಿದ್ದಾಗ ತಮ್ಮ ಗಜಾನನ ಹೆಗಡೆಯವರೂ ಅಣ್ಣನ ಜೊತೆಗೂಡಿದರು. ಪ್ರಸ್ತುತ ಕೆರೆಮನೆ ಶಿವಾನಂದ ಹೆಗಡೆಯವರು ಅಜ್ಜ ಕೆರೆಮನೆ ಶಿವರಾಮ ಹೆಗಡೆ, ತಂದೆ ಕೆರೆಮನೆ ಶಂಭು ಹೆಗಡೆ, ಚಿಕ್ಕಪ್ಪ ಗಜಾನನ ಹೆಗಡೆಯವರ ಹೆಸರಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಿ ಕೆರೆಮನೆ ಶಂಭು ಹೆಗಡೆ ಅಖಿಲ ಭಾರತ ನಾಟ್ಯೋತ್ಸವವನ್ನು ಈಗ ಹನ್ನೊಂದು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಈ ಬಾರಿ ಸೈಯದ್ ಸಲಾವುದ್ದೀನ್ ಪಾಷಾ ನಿರ್ದೇಶನದಲ್ಲಿ ಗಾಲಿಕುರ್ಚಿಯಲ್ಲಿ ವಿಶೇಷಚೇತನರ ವೈವಿಧ್ಯಮಯ ನಾಟ್ಯ, ಕರ್ನಾಟಕ ಕಲಾದರ್ಶಿನಿಯವರು ಪ್ರಸ್ತುತಪಡಿಸಿದ ಯಕ್ಷಗಾನ ಬ್ಯಾಲೆ ಅಭಿಮನ್ಯು ವಧೆ ಆಕರ್ಷಕವಾಗಿತ್ತು. ಹಿರಿಯ ಕಲಾವಿದರ ಸ್ಮರಣೆಯೂ ಕಾರ್ಯಕ್ರಮದ ಭಾಗ. ಶಿವ ಮತ್ತು ಶಕ್ತಿ ಒಡಿಸ್ಸಿ ನೃತ್ಯ, ಬಸ್ತರ್ ಬ್ಯಾಂಡ್‌ನಿಂದ ಛತ್ತೀಸ್‌ಗಡದ ಆದಿವಾಸಿ ನೃತ್ಯ, ಅಸ್ಸಾಂನ ಜಾನಪದ ನೃತ್ಯ ಕ್ರಿಸ್ಟಿರ್ ಕೊಠಿಯ, ಕೊಳಲುವಾದನ ತೊಳ್ಪಾವಕುತ್ತು ಎಂಬ ಕೇರಳದ ತೊಗಲು ಗೊಂಬೆಯಾಟ, ಕೂಚಿಪುಡಿ, ಕೆರೆಮನೆ ಮಂಡಳಿ ವತಿಯಿಂದ ಯಕ್ಷಗಾನ ಪ್ರದರ್ಶನವೂ ನಡೆಯಿತು.
ತಿಲಕನಾಥ ಮಂಜೇಶ್ವರ