Advertisement

ವಿದೇಶಿಗರಿಂದ ಅಕ್ರಮ ವಾಸಕ್ಕಾಗಿಯೇ ಅಪರಾಧ ಕೃತ್ಯ! ವೀಸಾ ಅವಧಿ ಮುಗಿಯುವ ಮೊದಲು ಪಾತಕ ಕೃತ್ಯ

12:10 PM Aug 02, 2022 | Team Udayavani |

ಬೆಂಗಳೂರು: ವೀಸಾ ಮುಗಿದ ಮೇಲೂ ನಗರದಲ್ಲಿ ಉಳಿಯಲು ವಿದೇಶೀಯರು ಮಾರ್ಗ ಹುಡುಕಿಕೊಂಡಿದ್ದಾರೆ. ಅದೆಂದರೆ, ಯಾವುದಾದರೂ ಅಪರಾಧ ಮಾಡಿ ಪೊಲೀಸರಿಗೆ ಸಿಕ್ಕಿ ಬೀಳುವುದು. ಅದರಲ್ಲಿ ಜಾಮೀನು ಪಡೆದರೆ ವಿಚಾರಣೆ ಮುಗಿಯುವ ವರೆಗೆ ಇಲ್ಲೇ ಇರಬಹುದು!

Advertisement

ಇತ್ತೀಚೆಗೆ ಬಂಧನಕ್ಕೆ ಒಳಗಾಗುತ್ತಿರುವ ವಿದೇಶಿ ಪ್ರಜೆಗಳ ವಿಚಾರಣೆ ವೇಳೆ ಇಂತಹ ಸ್ಫೋಟಕ ಮಾಹಿತಿ ಹೊರಬಂದಿದೆ.

ದಕ್ಷಿಣ ಆಫ್ರಿಕಾದ ನೈಜೀರಿಯಾ, ಕಾಂಗೋ, ಉಗಾಂಡ ಹಾಗೂ ಇತರ ಹತ್ತಾರು ದೇಶಗಳ ಪ್ರಜೆಗಳು ವ್ಯವಹಾರ, ಶಿಕ್ಷಣ, ವೈದ್ಯಕೀಯ, ಪ್ರವಾಸ ಹೀಗೆ ವಿವಿಧ ಮಾದರಿಯ ವೀಸಾ ಪಡೆದು ಬೆಂಗಳೂರಿಗೆ ಬರುತ್ತಾರೆ. ವೈದ್ಯಕೀಯ ವೀಸಾದಲ್ಲಿ ಬಂದವರು ಸ್ವದೇಶಕ್ಕೆ ಮರಳಿದರೆ, ಇತರ ವೀಸಾದಲ್ಲಿ ಬಂದವರಲ್ಲಿ ಕೆಲವರು ಅಕ್ರಮವಾಗಿ  ನೆಲೆಸುತ್ತಿದ್ದಾರೆ.

ಹೀಗಾಗಿ ಪ್ರಾದೇಶಿಕ ವಿದೇಶಿ ನೋಂದಣಾಧಿಕಾರಿ (ಎಫ್ಆರ್‌ಆರ್‌ಒ) ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ವಿದೇಶೀಯರ ಬಗ್ಗೆ ಆಗಾಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ವಿದೇಶಿಯರಿದ್ದಾರೆ. ಈ ಪೈಕಿ ಕೆಲವರು ವೀಸಾ ಅವಧಿ ಮುಗಿಯಲು 15 ದಿನ ಅಥವಾ ಒಂದು ತಿಂಗಳು ಇರುವಾಗ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ.  ಜಾಮೀನು ಪಡೆದ ಬಳಿಕ “ಅಕ್ರಮವಾಸ’ದ ಅವಧಿಯನ್ನು ಒಂದು ತಿಂಗಳಿನಿಂದ ಒಂದು ವರ್ಷದವರೆಗೂ ವಿಸ್ತರಿಸಿಕೊಳ್ಳುತ್ತಾರೆ.

Advertisement

2017ರಿಂದ 2022ರ ಎಪ್ರಿಲ್‌ ಅಂತ್ಯದ ವರೆಗೆ ಅಕ್ರಮ ವಾಸದ ಆರೋಪದ ಮೇಲೆ 853 ಮಂದಿಯನ್ನು ಬಂಧಿಸಲಾಗಿದೆ. 2020ರಲ್ಲಿ 197, 2021ರಲ್ಲಿ 215 ಮತ್ತು 2022ರಲ್ಲಿ 48 ವಿದೇಶೀಯರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಕ್ರಮವಾಸಿಗಳಿಗಷ್ಟೇ ಬಂಧನ ಕೇಂದ್ರ
ವಿದೇಶಿ ಪ್ರಜೆಗಳನ್ನು ಮಾತ್ರ ಬಂಧನದಲ್ಲಿ ಇರಿಸಲು ನೆಲಮಂಗಲದ ಸೊಂಡೇಕೊಪ್ಪದಲ್ಲಿ ವಿದೇಶಿಯರ ಬಂಧನ ಕೇಂದ್ರ ಸ್ಥಾಪಿಸಲಾಗಿದೆ.  ಅಕ್ರಮವಾಗಿ ನೆಲೆಸಿರುವ ಆರೋಪಿಗಳನ್ನು ಮಾತ್ರ ಇಲ್ಲಿ  ಇರಿಸಲಾಗುತ್ತದೆ. ಬೇರೆ ಯಾವುದೇ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಅವಕಾಶವಿಲ್ಲ. ಸದ್ಯ ಈ ಕೇಂದ್ರದಲ್ಲಿ 55ಕ್ಕೂ ಅಧಿಕ ಮಂದಿ ವಿದೇಶಿಗರಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಕ್ರಮ ವಾಸ್ತವ್ಯ ಮುಂದುವರಿಸಲೆಂದು ಕೆಲವು ವಿದೇಶಿಗರು ಉದ್ದೇಶಪೂರ್ವಕವಾಗಿಯೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹೀಗಾಗಿ ಕೆಲವು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದೆ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
-ರಮಣ ಗುಪ್ತಾ, ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next