ಗದಗ: ಇವತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ. ಅಭಿವೃದ್ಧಿ ಹೆಸರಲ್ಲಿ ಜನರ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ಸಾಹಿತ್ಯ ಮತ್ತು ಕಲೆ ಇವೆರಡೂ ಇವತ್ತು ಫ್ಯಾಸಿಸ್ಟರ ದಬ್ಟಾಳಿಕೆ ಎದುರಿಸಬೇಕಾಗಿದೆ ಎಂದು ಚಿತ್ರ ಕಲಾವಿದ ರಾ. ಸೂರಿ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಮೇ 4ರಿಂದ ನಡೆಯಲಿರುವ 6ನೇ ಮೇ ಸಾಹಿತ್ಯ ಮೇಳದ ಭಾಗವಾಗಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಆಯೋಜಿಸಿರುವ ಎರಡು ದಿನಗಳ ಚಿತ್ರಕಲಾ ಶಿಬಿರದಲ್ಲಿ ‘ಹೋರಾಟದ ಅಸ್ತ್ರವಾಗಿ ಸಂವಿಧಾನ’ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಹೋರಾಟಕ್ಕೆ ಕತ್ತಿ, ಚೂರಿ, ಬಂದೂಕು ಬೇಕಿಲ್ಲ. ನಮ್ಮ ಕೈಯಲ್ಲಿ, ಮೆದುಳಲ್ಲಿ, ಹೃದಯದಲ್ಲಿ ಸಂವಿಧಾನವಿರಲಿ. ಅದೇ ನಮ್ಮ ಹೋರಾಟದ ಅಸ್ತ್ರ. ಈ ಹೋರಾಟಕ್ಕೆ ಮೇ ಸಾಹಿತ್ಯ ಮೇಳ ಸ್ಫೂರ್ತಿಯಾಗಲಿ ಎಂದರು.
ಪ್ರೇಮಾ ಹಂದಿಗೋಳ ಮಾತನಾಡಿ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಮೂಲ ಸೌಕರ್ಯವಿಲ್ಲದೇ, ಅಪ್ಪಟ ಮಾನವೀಯತೆಯ ಕಲೆ ಅರಳಲು ಅಸಾಧ್ಯ. ಶಿಲಾಯುಗದಿಂದ ಈವರೆಗೆ ಚಿತ್ರಕಲೆ ಬೆಳೆದು, ಬಂದ ಘಟ್ಟಗಳನ್ನು ವಿವರಿಸಿದ ಅವರು, ‘ಅಕ್ಬರ್ ಕಾಲದಲ್ಲಿ ಈ ದೇಶದ ಮತ್ತು ಪರ್ಷಿಯಾದ ಕಲಾವಿದರು ಸೇರಿ, ಸಮಾಲೋಚಿಸಿ ರಚಿಸಿದ ಅಂತಃಕರಣದ ಚಿತ್ರಗಳು ಇಂದಿಗೂ ನಮಗೆ ಮಾದರಿಯಾಗಿವೆ ಎಂದರು.
ಶಿಬಿರದ ನಿರ್ದೇಶಕ ಭರಮಗೌಡ್ರ ಮಾತನಾಡಿ, ಯುದ್ಧದ ಭೀಕರತೆಯನ್ನು ಪಿಕಾಸೋ ತನ್ನ ಚಿತ್ರಗಳಲ್ಲಿ ಕಟ್ಟಿಕೊಟ್ಟ ಬಗೆಯನ್ನು ವಿವರಿಸಿ, ಜನಸಾಮಾನ್ಯರಿಗೆ ವಾಸ್ತವದ ಅರಿವು ಮೂಡಿಸಲು ಚಿತ್ರಕಲೆ ಸಹಕಾರಿ ಎಂದರು.
ಶಿಬಿರದ ಮತ್ತೂಬ್ಬ ನಿರ್ದೇಶಕ ವಿಜಯ ಕಿರೇಸೂರ, ಪ್ರೊ| ಕೆ.ಎಚ್. ಬೇಲೂರು, ಬಿ. ಮಾರುತಿ ಮತ್ತು ಡಾ| ಎಸ್.ವಿ. ಪೂಜಾರ ಇದ್ದರು.