ಇಪ್ಪತ್ತು ವರ್ಷಗಳ ಹಿಂದೆ ಹಿರಿಯಡ್ಕ ಬಳಿಯ ಪೆರ್ಣಂಕಿಲದ ಸುತ್ತಮುತ್ತ ಹೀಗೆ ಆಟೋರಿಕ್ಷಾ ಓಡಿಸುವ ಕಾಯಕ ಕೈಗೆತ್ತಿಕೊಳ್ಳುವಾಗ ನನಗೆ ಬೆಂಬಲವಾಗಿ ನಿಂತವರು ನನ್ನ ಪತಿ ರಘುಚಂದ್ರ ನಾಯಕ್ ಅವರು. ಮನೆಗೊಂದು ಬೈಕ್‌ತೆಗೆದುಕೊಳ್ಳೋಣ ಎಂದು ಅವರು ಹೇಳಿದಾಗ, ನಾನು, “ಆಟೋ ತೆಗೆದುಕೊಂಡರೆ, ನಮ್ಮ ಮನೆ ಬಳಕೆಗೂ ದುಡಿಮೆಗೂ ಆಗುತ್ತದಲ್ಲ’ ಎಂದು ಹೇಳಿದೆ. ಅವರಿಗೂ ಸರಿ ತೋರಿತೇನೋ. ಹಾಗೆ ನಮ್ಮ ಮನೆಗೆ ಬಂದ ಆಟೋ ಈಗಲೂ ದುಡಿಮೆಯ ಸಂಗಾತಿ ಆಗಿದೆ.
ನಾನು ಆಟೋ ಓಡಿಸಲು ಶುರುಮಾಡಿದಾಗ ಈ ಭಾಗದಲ್ಲಿ ಬಸ್ಸಿನ ಸೌಕರ್ಯ ಇರಲಿಲ್ಲ. ಹಾಗಾಗಿ, ಇತರರಿಗೆ ಸಹಾಯವಾದಂತಾಯಿತು, ನನ್ನ ಬದುಕಿಗೂ ಆಧಾರವಾದಂತಾಯಿತು ಎಂಬ ಧೋರಣೆಯಲ್ಲಿ ಈ ಕಾಯಕಕ್ಕೆ ಕಾಲಿರಿಸಿದೆ. ಈಗ ನಾನು ಆಟೋ ಚಾಲಕಿ ಮಾತ್ರವಲ್ಲ, ಆಶಾ ಕಾರ್ಯಕರ್ತೆಯಾಗಿಯೂ ದುಡಿಯುತ್ತಿದ್ದೇನೆ. ಈ ಭಾಗದ ಮಹಿಳೆಯರಿಗೆ ಹೆರಿಗೆನೋವು ಕಂಡುಬಂದರೆ, ರಾತ್ರಿಯಾಗಲಿ ಹಗಲಾಗಲಿ ನಾನು ಆಟೋ ಹತ್ತಿಬಿಡುತ್ತೇನೆ. ಒಮ್ಮೆ ಮಹಿಳೆಯೊಬ್ಬರಿಗೆ ಹೆರಿಗೆನೋವು ಬಂದಾಗ 108 ಆ್ಯಂಬುಲೆನ್ಸ್ ಗೆ ಫೋನ್ ಮಾಡಿದ್ದರು. ಆ್ಯಂಬುಲೆನ್ಸ್ ಬರುವುದು ತಡವಾದಾಗ, ನಾನೇ ಆಟೋದಲ್ಲಿ ಅವರನ್ನು ಕರೆದೊಯ್ದೆ. ತುಸು ದೂರ ಚಲಿಸುವಾಗ ಎದುರಿನಿಂದ ಆ್ಯಂಬುಲೆನ್ಸ್‌ಬಂತು. ಗರ್ಭಿಣಿಯನ್ನು ಆ್ಯಂಬುಲೆನ್ಸ್ ಹತ್ತಿಸಿ ಮತ್ತೈದು ನಿಮಿಷದಲ್ಲಿಯೇ ಹೆರಿಗೆ ಆಯಿತು. ಈ ಘಟನೆ ಪತ್ರಿಕೆಗಳಲ್ಲಿಯೂ ವರದಿಯಾಗಿತ್ತು. ಆ ಮಗು ಈಗ ನಾನು ಕೆಲಸ ಮಾಡುವ ಅಂಗನವಾಡಿಗೆ ಬರುತ್ತಿದೆ. ಮಗುವಿನ ಮುಖ ನೋಡುವಾಗ ಬಹಳ ಖುಷಿ ಆಗುತ್ತದೆ.
ಆಟೋದ ಮೂಲಕ ಮಾಡಿದ ಸಂಪಾದನೆಯಲ್ಲಿಯೇ ಮಕ್ಕಳಿಬ್ಬರೂ ಶಿಕ್ಷಣ ಪೂರೈಸಿದ್ದಾರೆ. ಮಗಳು ರಶ್ಮಿಯ ಮದುವೆಯಾಗಿದೆ. ಈಗ ಮಗ ರವಿಕಿರಣ್ ಕೂಡ ದುಡಿಮೆ ಆರಂಭಿಸಿರುವುದರಿಂದ ಬದುಕು ಕೊಂಚ ಹಸನಾಗಿದೆ. ಆದರೆ ಈ ಕಾಯಕಕ್ಕೆ ಪ್ರೋತ್ಸಾಹ ನೀಡಿದ ಅವರು ಅಗಲಿದ್ದಾರೆ ಎನ್ನುವುದೊಂದು ಬೇಸರ.
ಆಟೋರಿಕ್ಷಾದಲ್ಲಿ ದೂರದೂರಿಗೆ ಪ್ರಯಾಣ ಮಾಡಿದ್ದೇನೆ. ನನ್ನ ತವರುಮನೆ ಸುಳ್ಯದಲ್ಲಿದೆ. ನಾವೆಲ್ಲ ರಿಕ್ಷಾದಲ್ಲಿಯೇ ಸುಳ್ಯಕ್ಕೆ ಹೋಗುತ್ತೇವೆ. ಧರ್ಮಸ್ಥಳ, ಬೆಳ್ತಂಗಡಿ ಮುಂತಾದ ಕಡೆಗೂ ಸುಳ್ಯದಲ್ಲಿಯೇ ಪ್ರಯಾಣಿಸಿದ್ದೇನೆ. ದೂರದ ಪ್ರಯಾಣ ಎಂದರೆ ನನಗೆ ಇಷ್ಟವೇ.
ಆಟೋದ ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ನಾನು ಕಲಿತಿದ್ದೇನೆ. ಮನೆಯಲ್ಲಿಯೇ ಟಯರು ಬದಲಿಸುವುದು, ಸುಸ್ಥಿತಿಯಲ್ಲಿದೆಯೇ ಎಂದು ನೋಡುವುದು ಗೊತ್ತಿದೆ. ಇದನ್ನೆಲ್ಲ ಕಲಿತದ್ದರಿಂದ ಆತ್ಮವಿಶ್ವಾಸ ಮೂಡುತ್ತದೆ. ಆದರೆ, ಆಟೋ ಚಾಲನೆ ಆರಂಭಿಸಿದಾಗ, ತೊಂದರೆ ಮಾಡಿದವರೂ ಇದ್ದಾರೆ. ಕೆಲವೊಮ್ಮೆ ರಾತ್ರಿ ಹೊತ್ತು ಆಟೋ ಅಡ್ಡಹಾಕಿದ ಘಟನೆಗಳೂ ನಡೆದಿವೆ. ಆದರೆ ನಾನು ರಾತ್ರಿ ಎಲ್ಲಿಯೂ ಆಟೋ ನಿಲ್ಲಿಸುವುದೇ ಇಲ್ಲ. ಎಲ್ಲವನ್ನೂ ಎದುರಿಸಿ ಮುನ್ನುಗ್ಗಿದ ಮೇಲೆ ತೊಂದರೆ ಕೊಡುವವರೆಲ್ಲ ಹಿಮ್ಮೆಟ್ಟಿದ್ದಾರೆ. ಈಗ ಸಮಾಜಮುಖೀಯಾಗಿಯೂ ನಾನು ಕೆಲಸ ನಿರ್ವಹಿಸುತ್ತಿದ್ದೇನೆ. ಪ್ರಧಾನಮಂತ್ರಿಗಳ ಸ್ವತ್ಛತಾ ಅಭಿಯಾನದ ಮಾಸ್ಟರ್ ಟ್ರೈನರ್ ಆಗಿದ್ದೇನೆ. ಕೊಡಿಬೆಟ್ಟು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಂಗ್ರಹ ಮಾಡುವ ವಿಂಗಡಿಸುವ ಕೆಲಸ ಮಾಡುತ್ತೇನೆ. ಸ್ತ್ರೀಶಕ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಲಸಗಳಲ್ಲಿ ಸಕ್ರಿಯಳಾಗಿದ್ದೇನೆ. ಹೀಗೆ ಬಹುಮುಖೀಯಾಗಿ ಕೆಲಸಮಾಡಲು ಧೈರ್ಯ ಕೊಟ್ಟಿದ್ದು ಇದೇ ಆಟೋ. ಇನ್ನೊಂದು ಆಟೋ ಖರೀದಿಸಿ, ಅದನ್ನು ಇನ್ನೊಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದೇನೆ.
ರಾಜೀವಿ, ಪೆರ್ಣಂಕಿಲ