ಬೀದರ: ಜಿಲ್ಲೆಯ ಕೃಷಿ, ಶೈಕ್ಷಣಿಕ, ವಾಣಿಜ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳು ಸಮಗ್ರ ಅಭಿವೃದ್ಧಿ ಆಗಬೇಕು ಎಂಬುದು ತಮ್ಮ ಸಂಕಲ್ಪವಾಗಿದೆ. ತಾವು ಸಚಿವರಾಗಿ, ಶಾಸಕರಾಗಿ ಅಷ್ಟೆ ಅಲ್ಲ, ಒಬ್ಬ ಸಾಮಾನ್ಯ ಸೇವಕನಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.
ಕಮಲನಗರ ತಾಲೂಕಿನ ತೋರಣಾ ಗ್ರಾಮದಲ್ಲಿ 79 ಲಕ್ಷ ರೂ. ವೆಚ್ಚದಲ್ಲಿ 2017-18ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಯಡಿ ನಿರ್ಮಾಣಗೊಂಡ ನೂತನ ಸರ್ಕಾರಿ ಪ್ರೌಢಶಾಲಾ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ಕುಟುಂಬವೂ ನೆಮ್ಮದಿಯಿಂದ ಜೀವನ ಸಾಗಿಸಬೇಕು. ಪಡಿತರ, ಮಾಶಾಸನ ಸೇರಿದಂತೆ ಎಲ್ಲವೂ ಪ್ರತಿಯೊಂದು ಕುಟುಂಬಕ್ಕೆ ಸಮರ್ಪಕವಾಗಿ ಸಿಗುವಂತೆ, ಪ್ರತಿಯೊಂದು ಗ್ರಾಮದಲ್ಲಿ ರಸ್ತೆ, ನೀರು ಮತ್ತು ವಿದ್ಯುತ್ ಸಮರ್ಪಕ ಪೂರೈಕೆಗೆ ವ್ಯವಸ್ಥೆ ಮಾಡುತ್ತಿರುವುದಾಗಿ ಸಚಿವರು ತಿಳಿಸಿದರು.
ಪರೀಕ್ಷೆ ಅಚ್ಚುಕಟ್ಟಾಗಿ ನಡೆಸಿ: ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪರೀಕ್ಷೆಗಳನ್ನು ನಡೆಸಿರಲಿಲ್ಲ. ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುತ್ತವೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗಿದೆ. ಈ ಬಾರಿ ತೋರಣಾ ಕೂಡ ಪರೀಕ್ಷಾ ಕೇಂದ್ರವಾಗಿದೆ. ಯಾವುದೇ ಅಕ್ರಮಗಳು ನಡೆಯದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಇದೇ ವೇಳೆ ಸಚಿವರು ಶಿಕ್ಷಣ ಇಲಾಖೆ ಅ ಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೇಡಿಕೆ ಸಲ್ಲಿಕೆ: ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಮಹಾನಂದ ಮಾತನಾಡಿ, ಸಚಿವ ಚವ್ಹಾಣ್ ಅವರು ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ ಪ್ರಯತ್ನದಿಂದಾಗಿ ತೋರಣಾ ಗ್ರಾಮಕ್ಕೆ ನೂತನ ಶಾಲಾ ಕಟ್ಟಡ ಲಭ್ಯವಾಗಿದೆ. ಎರಡೂ ಮಾಧ್ಯಮದಲ್ಲಿ ಶಾಲೆ ನಡೆಯುತ್ತಿದೆ ಎಂದು ತಿಳಿಸಿದರು. ತಮ್ಮ ಶಾಲೆಗೆ ವಿಜ್ಞಾನ ಪ್ರಯೋಗಾಲಯ, ವಾಟರ್ ಫಿಲ್ಟರ್, ವಾಚನಾಲಯಕ್ಕೆ ಪೀಠೊಪಕರಣ ಮತ್ತು ಶಾಲೆಗೆ ಆಟದ ಮೈದಾನದ ಅಗತ್ಯತೆ ಇದೆ ಎಂದು ಇದೆ ವೇಳೆ ಅವರು ಸಚಿವರಿಗೆ ಬೇಡಿಕೆಗಳ ಬಗ್ಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತೋರಣಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವನ್ನು ಸಚಿವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಮುಖಂಡರಾದ ರಾಜಕುಮಾರ ಪಾಟೀಲ, ರಾಮಶೆಟ್ಟಿ ಪನ್ನಾಳೆ, ಬಂಡೆಪ್ಪ ಕಂಠೆ, ಸುರೇಶ ಬೋಸ್ಲೆ, ಅರಹಂತ ಸಾವಳೆ, ಗಿರೀಶ ವಡೆಯರ್, ತೋರಣಾ ಗ್ರಾಪಂ ಅಧ್ಯಕ್ಷ ಶಾವುಬಾಯಿ ದೇವಿದಾಸ ಹೊನ್ನಾಳೆ, ಉಪಾಧ್ಯಕ್ಷ ಸುನೀಲ್ ಸಿಗ್ರೆ, ಶಾಲಾ ಮುಖ್ಯಗುರು ಬಾಪುರಾವ್ ಬಿರಾದಾರ, ಎಸ್‌ಡಿಎಂಸಿ ಅಧ್ಯಕ್ಷ ರಾಜೇಂದ್ರ ಸಂಗಮೆ, ಗುತ್ತಿಗೆದಾರ ಬಾಬುರಾವ್ ವಾಘಮೋರೆ ಹಾಗೂ ಇನ್ನಿತರರು ಇದ್ದರು.