Advertisement

ಕಿತ್ತೂರು ನೆಲದಲ್ಲಿ ಉತ್ಸವಕ್ಕೆ ವರ್ಣರಂಜಿತ ತೆರೆ

03:19 PM Oct 25, 2021 | Team Udayavani |

ಚನ್ನಮ್ಮನ ಕಿತ್ತೂರು: ಪ್ರವಾಹ ಮತ್ತು ಕೋವಿಡ್‌ ಮಹಾಮಾರಿ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಇಲ್ಲವಾಗಿದ್ದ ಕಿತ್ತೂರು ಉತ್ಸವ ಈ ಬಾರಿ ಎರಡು ದಿನಗಳ ಅತ್ಯಂತ ಸಡಗರ ಸಂಭ್ರಮದಿಂದ ಬೆಳ್ಳಿ ಹಬ್ಬ ಆಚರಣೆ ಆಗುವ ಮೂಲಕ ವರ್ಣರಂಜಿತವಾಗಿ ಉತ್ಸವಕ್ಕೆ ತೆರೆ ಬಿದ್ದಿತು.

Advertisement

ಕೋವಿಡ್‌ ಆತಂಕದ ಮಧ್ಯೆಯೂ ಈ ಭಾಗದ ಜನತೆ ಕೋವಿಡ್‌ ಲೆಕ್ಕಕ್ಕೇ ಇಲ್ಲ ಎಂಬಂತೆ ಉತ್ಸಾಹದಿಂದ ಭಾಗವಹಿಸಿದ್ದರು. ಎರಡು ವರ್ಷಗಳ ಕಾಲ ಇಂಥ ಉತ್ಸವ, ಜಾತ್ರೆಗಳ ಸಂಭ್ರಮ ಇಲ್ಲದೇ ಮನೆಯಲ್ಲಿಯೇ ಇದ್ದ ಜನರಿಗೆ ಈ ಬಾರಿ ಉತ್ಸವ ಉತ್ಸಾಹ ಮೂಡಿಸಿತು. ಜನರು ಅತ್ಯಂತ ಸಂಭ್ರಮದಿಂದ ಉತ್ಸವದಲ್ಲಿ ಪಾಲ್ಗೊಂಡು ಚನ್ನಮ್ಮನ ಗತವೈಭವಕ್ಕೆ ಸಾಕ್ಷಿಯಾದರು.

ಎರಡು ವರ್ಷಗಳ ಕಾಲ ಸರಳ ಹಾಗೂ ಸಾಂಕೇತಿಕವಾಗಿ ಕಿತ್ತೂರು ಉತ್ಸವ ಆಚರಿಸಲಾಗಿತ್ತು. ವೀರ ಸೇನಾನಿಗಳ ನಾಡಿನಲ್ಲಿ ಯಾವುದೇ ಅಬ್ಬರ ಇರಲಿಲ್ಲ, ಕಿತ್ತೂರು ಚನ್ನಮ್ಮನ ಇತಿಹಾಸದ ಪುಟಗಳ ಕಲರವ ಕಂಡಿರಲಿಲ್ಲ, ಬ್ರಿಟಿಷರನ್ನು ಸದೆಬಡಿದ ನೆನಪುಗಳನ್ನು ಮೆಲುಕು ಹಾಕುವ ಗೋಜಿಗೂ ಹೋಗಿರಲಿಲ್ಲ. ಈ ಬಾರಿ ಕಾಕತಾಳೀಯ ಎಂಬಂತೆ ಕೋಟೆ ಆವರಣದಲ್ಲಿ ಉತ್ಸವದ 25ನೇ ವರ್ಷಾಚರಣೆ ಹೊಸ ಮೆರಗು ತಂದಿದೆ. ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ರಾಣಿ ಚನ್ನಮ್ಮನ ಉತ್ಸವದ ಬೆಳ್ಳಿ ಹಬ್ಬದ ಸಂಭ್ರಮ ಈ ಭಾಗದ ಜನರ ಉತ್ಸಾಹ ಇಮ್ಮಡಿಗೊಳಿಸಿದೆ.

ಪ್ರತಿವರ್ಷ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ನಡೆಯುತ್ತಿತ್ತು. ಈ ಸಲ ಒಂದು ದಿನಕ್ಕೆ ಕಡಿವಾಣ ಹಾಕಿ ಎರಡು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ಅವಧಿಯಲ್ಲಿ ಕಲಾವಾಹಿನಿ ಮೆರವಣಿಗೆ, ಜಾನಪದ ಸೊಗಡು, ವಿವಿಧ ಸಾಂಸ್ಕೃತಿಕ, ಸಂಗೀತ ರಸದೌತಣ, ಚನ್ನಮ್ಮನ ಇತಿಹಾಸ ಸಾರುವ ಗೋಷ್ಠಿಗಳು, ವಿವಿಧ ಕ್ರೀಡಾ ಸ್ಪರ್ಧೆಗಳು ಮತ್ತಷ್ಟು ಮೆರಗು ಹೆಚ್ಚಿಸಿವೆ. ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಗೋಷ್ಠಿಗಳಲ್ಲೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಅನ್ಯಭಾಷಿಕರಿಗೆ ಕನ್ನಡ ಕಲಿಸಿ: ಮಹಾದೇವ ಮುರಗಿ

Advertisement

ಮೌಡ್ಯದ ವಿರುದ್ದ ತೊಡೆ ತಟ್ಟಿದ ಸಿಎಂ

ಕಿತ್ತೂರು ಉತ್ಸವಕ್ಕೆ ಬರುವ ಮುಖ್ಯಮಂತ್ರಿಗಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ವಿರುದ್ಧ ಈ ಸಲದ ಉತ್ಸವದಲ್ಲಿ ಭಾಗಿಯಾಗುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಡ್ಡು ಹೊಡೆದಿದ್ದಾರೆ. ಈ ಮುಂಚೆ ಬಹುತೇಕ ಮುಖ್ಯಮಂತ್ರಿಗಳು ಕಿತ್ತೂರು ಉತ್ಸವದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದರು. ಇಂಥ ಕೆಟ್ಟ ಸಂಪ್ರದಾಯಕ್ಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಂದು ಉದ್ಘಾಟಿಸುವ ಮೂಲಕ ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿದರು.

ಕಿತ್ತೂರಿನ ಹೃದಯ ಗೆದ್ದ ಸಿಎಂ

ಅನೇಕ ವರ್ಷಗಳ ಕಿತ್ತೂರು ಭಾಗದ ಸಮಸ್ಯೆಗಳಿಗೆ ಕಿವಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಇಲ್ಲಿಯ ಜನರ ಹೃದಯ ಗೆದ್ದಿದ್ದಾರೆ. ಮುಂಬೆ„-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಮಾಡುವ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ನಿರ್ಧರಿಸುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದ್ದು ಮಹತ್ವದ ನಿರ್ಧಾರವಾಗಿದೆ. ಕಿತ್ತೂರು ಉತ್ಸವವನ್ನು ರಾಜ್ಯ ಉತ್ಸವವಾಗಿ ಮಾಡಲು ಘೋಷಿಸಿದರು. ಜತೆಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ಅನುದಾನ ಹಾಗೂ ಕಿತ್ತೂರು ಅಭಿವೃದ್ಧಿಗಾಗಿ ಮಾಸ್ಟರ್‌ ಪ್ಲ್ಯಾನ್‌, ಮುಂದಿನ ವರ್ಷದಿಂದ ಜ್ಯೋತಿ ಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಲು ಆದೇಶಿಸಿದ್ದು ಬಹುತೇಕ ಎಲ್ಲ ಬೇಡಿಕೆಗೂ ಬೊಮ್ಮಾಯಿ ಸ್ಪಂದಿಸಿದ್ದಾರೆ.

-ಬೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next