ಕೋಟೇಶ್ವರ : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ರುದ್ರ ಭೂಮಿ ಸಮೀಪ ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದು ಓರ್ವ ಸ್ಥಳ ದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ರಾತ್ರಿ ಸಂಭಸಿದೆ.
ದ್ವಿಚಕ್ರ ವಾಹನ ಹಿಂಬದಿ ಸವಾರ, ಕುಂದಾಪುರ ಪೈ ಸೇಲ್ಸ್ ಸಂಸ್ಥೆಯ ಮ್ಯಾನೇಜರ್, ಸಾಲಿಗ್ರಾಮದ ಗಾವಳಿ ನಿವಾಸಿ ವಿವೇಕ್ (25) ಸ್ಥಳದಲ್ಲೇ ಸಾವಿಗೀಡಾಗಿದ್ದು, ಸವಾರ ಶರಣ್ ರಾಜ್ (26) ಅವರು ಗಂಭೀರ ಗಾಯಗಳೊಂದಿಗೆ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರಿಬ್ಬರು ಕೂಡ ಪೈ ಸೇಲ್ಸ್ ಉದ್ಯೋಗಿಗಳಾಗಿದ್ದು, ಇವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಕುಂದಾಪುರದಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಹಿಂದಿನ ಲಾರಿಯು ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಪೊಲೀಸರು ಸ್ಥಳಕ್ಕಗಮಿಸಿ ಸೂಕ್ತ ಕ್ರಮ ಕೈಗೊಂಡರು. ಅಪಘಾತದಿಂದಾಗಿ ಸ್ವಲ್ಪ ಹೊತ್ತು ಸಂಚಾರ ವ್ಯತ್ಯಯವಾಗಿತ್ತು. ಕುಂದಾಪುರ ಸಂಚಾರ ಠಾಣೆಯ ಪೊಲೀಸರು ಆಗಮಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ದೇಹದ ಮೇಲೆಯೇ ಚಲಿಸಿತ್ತು ಲಾರಿ!
ದ್ವಿಚಕ್ರ ಸವಾರರು ಪೆಟ್ರೋಲ್ ತುಂಬಿಸಿಕೊಂಡು ಸರ್ವಿಸ್ ರೋಡ್ ಮೂಲಕ ಬಂದು ಹೆದ್ದಾರಿಗೆ ಸೇರುತ್ತಿದ್ದಾಗ ಅಪ ಘಾತ ಸಂಭವಿಸಿದೆ. ಲಾರಿಯು ವಿವೇಕ್‌ನ ಮೇಲೆಯೇ ಚಲಿಸಿದ್ದು, ಸೊಂಟದಿಂದ ಕೆಳಗಿನ ಸಂಪೂರ್ಣ ಛಿದ್ರವಾಗಿದೆ.