ಗಂಗಾವತಿ: ಡಿ.23 ಮತ್ತು 24 ರಂದು ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಜರುಗಿದ ಹನುಮ ಮಾಲಾ ವಿಸರ್ಜನೆ ಸಂದರ್ಭ ಹನುಮ ಮಾಲಾಧಾರಿಗಳು ತುಂಗಭದ್ರಾ ನದಿ, ವಿಜಯನಗರ ಕಾಲುವೆ ಹಾಗೂ ಅಂಜನಾದ್ರಿ ಸುತ್ತಲೂ ಸ್ನಾನ, ಮಡಿ ಮಾಡಿ ಕೇಸರಿ ವಸ್ತ್ರಗಳನ್ನು ಎಲ್ಲೆಂದರಲ್ಲಿ ಬೀಸಾಕಿದ್ದರು.
ಸ್ಥಳೀಯರು ಇದನ್ನು ಕಂಡು ಆಕ್ರೋಶಗೊಂಡಿದ್ದರು. ಈ ಕುರಿತು ಉದಯವಾಣಿ ವೆಬ್ ನ್ಯೂಸ್ ನಲ್ಲಿ ವಿಸ್ತೃತ ವರದಿ ಪ್ರಕಟವಾದ ಹಿನ್ನೆಲೆ ಯುವ ಬ್ರಿಗೇಡ್ ಹಾಗೂ ಭಜರಂಗದಳ ಕಾರ್ಯಕರ್ತರು ಹನುಮ ಮಾಲೆಯ ಕೇಸರಿ ವಸ್ತ್ರ ಬಿದ್ದ ಜಾಗದಲ್ಲಿ ಸ್ವಚ್ಚತಾ ಅಭಿಯಾನ ನಡೆಸಿ ಪರಿಸರ ಜಾಗೃತಿ ಮೂಡಿಸಲು ನಿರ್ಧರಿಸಿ ಗುರುವಾರ ಬೆಳ್ಳಿಗ್ಗೆ ವಿಜಯನಗರ ಜಿಲ್ಲೆಯ ಯುವ ಬ್ರಿಗೇಡ್ ಕಾರ್ಯಕರ್ತರು ಹನುಮನಹಳ್ಳಿ ಹತ್ತಿರ, ವಿಜಯನಗರ ಕಾಲುವೆ ಹಾಗೂ ಅಂಜನಾದ್ರಿ ಪಾರ್ಕಿಂಗ್ ಜಾಗದಲ್ಲಿ ಸ್ವಚ್ಚತಾ ಅಭಿಯಾನ ನಡೆಸಿ ಕೇಸರಿ ವಸ್ತ್ರಗಳನ್ನು ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಜಿಲ್ಲಾ ಸಹ ಸಂಚಾಲಕ ಬಸವರಾಜ ಹೊಸಮನಿ ಮಾತನಾಡಿ, ಯುವಾ ಬ್ರಿಗೇಡ್ ವಿಜಯನಗರ ಜಿಲ್ಲೆಯ ಕಾರ್ಯಕರ್ತರು ಅಂಜನಾದ್ರಿ ಬೆಟ್ಟದ ಹತ್ತಿರ ಇರುವ ಹನುಮನ ಹಳ್ಳಿಯಲ್ಲಿ ತುಂಗಭದ್ರಾ ನದಿಯಲ್ಲಿ ಬಿಟ್ಟಿರುವ ಕೇಸರಿ ವಸ್ತ್ರಗಳು,ಬಟ್ಟೆಗಳನ್ನು ಹೊರ ತೆಗೆದು ಸ್ವಚ್ಛತೆ ಮಾಡಿದರು ಎಂದರು.
ಹನುಮ ಮಾಲೆಯ ಬಟ್ಟೆ, ಮಾಲೆ ಸೇರಿದಂತೆ ಹಲವಾರು ವಸ್ತುಗಳನ್ನು, ವಸ್ತ್ರಗಳನ್ನು ನದಿಯಲ್ಲೇ ಬಿಟ್ಟಿದ್ದರು. ಅದನೆಲ್ಲ ಇಂದು 15 ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿ ಸ್ವಚ್ಛ ಮಾಡಿದ್ದಾರೆ. ಮುಂದಿನ ಹನುಮ ಮಾಲೆಗೆ ಮಾಲಾಧಾರಿಗಳಿಗೆ ಪ್ರತ್ಯೇಕವಾಗಿ ಬಟ್ಟೆ ಮತ್ತು ಮಾಲೆಗಳನ್ನು ಒಂದೇ ಜಾಗದಲ್ಲಿ ಬಿಡಲು ಸೂಕ್ತವಾಗಿ ವ್ಯವಸ್ಥೆ ಮಾಡಬೇಕಾಗಿದೆ ಮತ್ತು ನಾವು ಈ ರೀತಿ ಹಾಕುವುದರಿಂದ ಪರಿಸರ ಮತ್ತು ನದಿಗಳನ್ನು ಮಲಿನ ಮಾಡಿದಂತಾಗುತ್ತದೆ. ಕೇವಲ ಇಲ್ಲಷ್ಟೇ ಅಲ್ಲ ಯಾವುದೇ ಪವಿತ್ರ ನದಿಗಳಿಗೆ ಹೋದಾಗ ಭಕ್ತಾದಿಗಳು ದಯವಿಟ್ಟು ಬಟ್ಟೆಯನ್ನು ಬಿಡಬಾರದು ಎಂದು ಉದಯವಾಣಿಗೆ ತಿಳಿಸಿದರು.