ದ್ವಾರಕೀಶ್ ಇರೋದು ಇಷ್ಟು, ಆದರೆ ಮಾಡಿರೋ ಸಾಧನೆ ಅಷ್ಟು ದೊಡ್ಡದು. ಸತತವಾಗಿ ಹದಿನೆಂಟು ಸಿನಿಮಾ ಸೋತರೂ, ಜಗ್ಗದೇ, ಚಿತ್ರರಂಗದಿಂದ ದೂರ ಹೋಗದೇ, ದೇವರಿಗೆ ಚಾಲೆಂಜ್ ಹಾಕಿದವರು. ಎಷ್ಟು ಕಷ್ಟ ಕೊಡ್ತೀಯಾ ಕೊಡು ಎಂದು ಧೈರ್ಯದಿಂದ ಎಲ್ಲವನ್ನು ಎದುರಿಸಿದವರು…
ಕೆಲವು ಕಾರ್ಯಕ್ರಮಗಳೇ ಹಾಗೆ. ಅಲ್ಲಿ ಆತ್ಮೀಯ ವಾತಾವರಣವಿರುತ್ತದೆ, ಪರಸ್ಪರ ಪ್ರೀತಿಯ ಆಲಿಂಗನವಿರುತ್ತದೆ, ಕಷ್ಟದ ದಿನಗಳ ಮೆಲುಕು, ತಮಾಷೆ ಮಾತು, ಭವಿಷ್ಯದ ಕನಸು … ಹೀಗೆ ಸಾಕಷ್ಟು ಅಂಶಗಳು ಬಂದು ಹೋಗುತ್ತವೆ. ಆದರೆ, ಇತ್ತೀಚೆಗೆ ಚಿತ್ರರಂಗದಲ್ಲಿ ಇಂತಹ ವಾತಾವರಣ ಕಡಿಮೆಯಾಗುತ್ತಿರುವುದು ಸುಳ್ಳಲ್ಲ. ಆದರೆ, ಇತ್ತೀಚೆಗೆ ನಡೆದ “ಆಯುಷ್ಮಾನ್ ಭವ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಅಂತಹ ಒಂದು ಆತ್ಮೀಯತೆಗೆ ಸಾಕ್ಷಿಯಾಯಿತು. ದ್ವಾರಕೀಶ್ ನಿರ್ಮಾಣದ 52ನೇ ಸಿನಿಮಾವಾದ “ಆಯುಷ್ಮಾನ್ ಭವ’ ಚಿತ್ರದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳ ಬಿಡುಗಡೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಉಪೇಂದ್ರ, ವಿ. ಮನೋಹರ್ ಸೇರಿದಂತೆ ಚಿತ್ರರಂಗದ ಅನೇಕರು ಸಾಕ್ಷಿಯಾದರು.
ಮುಖ್ಯವಾಗಿ ದ್ವಾರಕೀಶ್ ಕುರಿತಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಆಡಿದ ಮಾತುಗಳು, ದ್ವಾರಕೀಶ್ ಅವರ ಛಲ, ಸಿನಿಮಾ ಪ್ರೀತಿಯನ್ನು ಕಟ್ಟಿಕೊಡುವಂತಿತ್ತು. “ಇವತ್ತು ನಾನೇನಾದರೂ ಸಾಧನೆ ಮಾಡಿದ್ದೇನೆ ಎಂದರೆ ಅದು ದ್ವಾರಕೀಶ್ ಅವರನ್ನು ನೋಡಿ ಕಲಿತಿದ್ದು. ದ್ವಾರಕೀಶ್ ಇರೋದು ಇಷ್ಟು, ಆದರೆ ಮಾಡಿರೋ ಸಾಧನೆ ಅಷ್ಟು ದೊಡ್ಡದು. ಸತತವಾಗಿ ಹದಿನೆಂಟು ಸಿನಿಮಾ ಸೋತರೂ, ಜಗ್ಗದೇ, ಚಿತ್ರರಂಗದಿಂದ ದೂರ ಹೋಗದೇ, ದೇವರಿಗೆ ಚಾಲೆಂಜ್ ಹಾಕಿದವರು. ಎಷ್ಟು ಕಷ್ಟ ಕೊಡ್ತೀಯಾ ಕೊಡು ಎಂದು ಧೈರ್ಯದಿಂದ ಎಲ್ಲವನ್ನು ಎದುರಿಸಿದ ಪರಿಣಾಮ ಇವತ್ತು ದೊಡ್ಡ ಯಶಸ್ಸು ಕಂಡಿದ್ದಾರೆ. “ಆಪ್ತಮಿತ್ರ’ ಚಿತ್ರದಿಂದ ಮತ್ತೆ ಮೇಲಕ್ಕೆ ಬಂದವರು ದ್ವಾರಕೀಶ್. ನಾನು ಆ ಸಿನಿಮಾ ಹಿಟ್ ಆಗುತ್ತದೆ ಎಂದು ಆವತ್ತೇ ಹೇಳಿದ್ದೆ. ಏಕೆಂದರೆ ಆ ಸಿನಿಮಾವನ್ನು ನಾನು ಮಾಡಬೇಕಿತ್ತು. ಈಗ “ಆಯುಷ್ಮಾನ್ ಭವ’. ಈ ಚಿತ್ರ ಕೂಡಾ ದೊಡ್ಡ ಹಿಟ್ ಆಗುತ್ತದೆ. ಸಾಮಾನ್ಯವಾಗಿ ಅನಂತ್‌ನಾಗ್ ಹೆಚ್ಚು ಮಾತನಾಡುವುದಿಲ್ಲ. ಆದರೆ, ಈ ಚಿತ್ರದ ಬಗ್ಗೆ ವಿಶ್ವಾಸದಿಂದ ಇಷ್ಟೊಂದು ಮಾತನಾಡಿದ್ದಾರೆಂದರೆ ಇದರಲ್ಲಿ ಏನೋ ಇದೆ ಎಂದೇ ಅರ್ಥ. ಮುಖ್ಯವಾಗಿ ಚಿತ್ರದ ಪೋಸ್ಟರ್‌ನಲ್ಲಿ ಎಲ್ಲಾ ಕಲಾವಿದರು ನಗುಮೊಗದಿಂದ ಫೋಸ್ ಕೊಟ್ಟಿದ್ದಾರೆ. ಅದೇ ಸಿನಿಮಾದ ಮೊದಲ ಗೆಲುವು’ ಎಂದ ರವಿಚಂದ್ರನ್, ಶಿವರಾಜಕುಮಾರ್ ಅವರ ಬಗ್ಗೆಯೂ ಮಾತನಾಡಿದರು. “ಶಿವರಾಜಕುಮಾರ್ ಅವರಿಗೆ ವಯಸ್ಸೇ ಆಗುವುದಿಲ್ಲ. ನಾವಿಬ್ಬರು ಆತ್ಮೀಯರು. ಅವರ ನೋವಲ್ಲಿ, ಸುಖದಲ್ಲಿ ಸ್ಪಂದಿಸುತ್ತೇನೆ’ ಎನ್ನುತ್ತಾ “ಆಯುಷ್ಮಾನ್ ಭವ’ ಸಿನಿಮಾಕ್ಕೆ ಶುಭ ಹಾರೈಸಿದರು. ಇದೇ ವೇಳೆ ನಿರ್ದೇಶಕ ಪಿ. ವಾಸು, ಹೇಗೆ ಒಳ್ಳೆಯ ನಿರ್ದೇಶಕರೋ ಅದರಂತೆ ಒಳ್ಳೆಯ ನಟರು.
ಅವರು ಮಾಡಿ ತೋರಿಸಿದ್ದನ್ನು ನಾವು ಮಾಡಿದರೆ ಅರ್ಧ ಗೆದ್ದಂತೆ’ ಎನ್ನಲು ಮರೆಯಲಿಲ್ಲ. ನಿರ್ದೇಶಕ ಪಿ.ವಾಸು ಕೂಡಾ ದ್ವಾರಕೀಶ್ ಬ್ಯಾನರ್‌ನಲ್ಲಿ ಮತ್ತೆ ಸಿನಿಮಾ ಮಾಡಿದ ಖುಷಿ ಹಂಚಿಕೊಂಡರು. ಇದು ತುಂಬಿದ ಕುಟುಂಬ ಹೇಗಿರುತ್ತದೆ ಹಾಗೆ ಇರುವ ಸಿನಿಮಾ. ಈ ಸಿನಿಮಾ ಮೂಲಕ ಶಿವರಾಜ ಕುಮಾರ್ ಅವರ ಅಭಿಮಾನಿ ವರ್ಗ ಹೆಚ್ಚಾಗುತ್ತದೆ ಎಂದ ವಾಸು, ಸೆಟ್‌ನಲ್ಲಿ ತುಂಬಾ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಶಿವರಾಜಕುಮಾರ್ ಅವರನ್ನು ಮನವಿ ಮಾಡಿದರು.
ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದ್ದು, ಇದು ಗುರುಕಿರಣ್ ಸಂಗೀತದ 100ನೇ ಸಿನಿಮಾ. ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ತಮ್ಮ ನಿರ್ಮಾಣದ 52ನೇ ಸಿನಿಮಾದ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡರು. ಜೊತೆಗೆ ತಮ್ಮ ಬೆಳವಣಿಗೆಗೆ ಕಾರಣರಾದವರನ್ನು ನೆನಪಿಸಿಕೊಂಡರು. ಈ ಚಿತ್ರ ನವೆಂಬರ್ 1 ರಂದು ತೆರೆಕಾಣುತ್ತಿದೆ.
ರವಿ ರೈ