Advertisement
ಹಾಗಾದ್ರೆ ಇಲ್ಲಿ ಕಸ ಹಾಕುವವರು ಯಾರು? ಅದು ತನ್ನಿಂತಾನೇ ಉತ್ಪತ್ತಿಯಾಗುತ್ತದೆಯೆ? ವಿದೇಶದಲ್ಲಿದ್ದಾಗ ಅಲ್ಲಿ ಒಂದು ಕಸ ಕೂಡ ಹಾಕದವರು ವಿಮಾನ ನಿಲ್ದಾಣ ಬಿಟ್ಟು ಭಾರತಕ್ಕೆ ಕಾಲಿಟ್ಟ ಕೂಡಲೇ ತಿಂದುಂಡ ಖಾಲಿ ಪ್ಲಾಸ್ಟಿಕ್ ಶೀಷೆಗಳನ್ನು ಎಲ್ಲೆಂದರಲ್ಲಿ ಬಿಸಾಕ್ತೇವೆ. ವಿದ್ಯಾವಂತರೆಂದು ಹಣೆಪಟ್ಟಿ ಹೊತ್ತ ನಾವು ಮಾಡುವುದು ಅನಾಗರಿಕತೆಯ ಪರಮಾವಧಿಯಲ್ಲವೆ? ನಮ್ಮ ಮನೆಯನ್ನು ನಾವು ಅದೆಷ್ಟು ಸ್ವತ್ಛವಾಗಿಡುತ್ತೇವೆ. ಯಾಕೆಂದರೆ, ಅದು ನನ್ನದು ಅನ್ನೋ ಭಾವನೆ ಇರುತ್ತದಲ್ಲವೆ?
Related Articles
Advertisement
ಪ್ರತಿಯೊಂದು ಕಾರ್ಯವನ್ನು ನಾವು ಇನ್ನೊಬ್ಬರು ಮಾಡಲಿ ಅಂತ ಕಾಯುವ ಮೊದಲು ನಾವೇ ಅದನ್ನು ಮಾಡಿ ತೋರಿಸಿ ಇತರರಿಗೆ ಮಾದರಿಯಾಗಬೇಕು. ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವ ಇಂತಹ ಕಾರ್ಯಗಳು ಸದಾ ನಮಗೆ ಆತ್ಮತೃಪ್ತಿಯನ್ನೂ ನೀಡುತ್ತದೆ. ಇಡೀ ದೇಶವನ್ನೇ ಬದಲಾಯಿಸಲು ನಮ್ಮಿಂದ ಸಾಧ್ಯವಿಲ್ಲದಿದ್ದರೂ ನಮ್ಮ ಸುತ್ತಮುತ್ತಲಿನ ಜನರ ಮನಸ್ಥಿತಿಯನ್ನು ಬದಲಾಯಿಸುವ ಮೂಲಕ ಹೊಸ ಭಾಷ್ಯವನ್ನೇ ಬರೆಯಬಹುದು. Think globally act locally ಅನ್ನೋ ಮಾತಿದೆ. ನಾವು ಪಿಯುಸಿಯಲ್ಲಿರುವಾಗ ಕಾಲೇಜಿನಲ್ಲಿ ಮಾಡಿದ ಅರಿವಿನ ಹೆಜ್ಜೆ ಎಂಬ ಕಾರ್ಯಕ್ರಮ ಈ ನಿಟ್ಟಿನಲ್ಲಿ ಬಹಳ ಯಶಸ್ವಿಯಾಯಿತು. ಧರ್ಮಸ್ಥಳದ ಧರ್ಮಾಧಿಕಾರಿಗಳ ಆಶಯವೂ ನಮ್ಮೆಲ್ಲ ಕಾಲೇಜು ಕ್ಯಾಂಪಸ್‌ಗಳನ್ನೂ ಶೂನ್ಯ ಕಸ ವಲಯಗಳನ್ನಾಗಿ ಮಾಡುವುದಾಗಿತ್ತು. ನಮ್ಮ ಕಾಲೇಜಿನಲ್ಲೂ ಪ್ರಾಂಶುಪಾಲರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆಯೂ ಹಾಗೂ ಪ್ರತಿಯೊಂದು ವಿಭಾಗದಿಂದಲೂ ಒಂದೊಂದು ಕಾರ್ಯಕ್ರಮವನ್ನು ಮಾಡುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ನಮ್ಮ ಮೆಚ್ಚಿನ ಶಿಕ್ಷಕರೊಬ್ಬರು ಬಂದು ಅರಿವು ಮೂಡಿಸಿದ್ದರು. ಅವರ ಪ್ರೇರಣೆಯಿಂದ ಹಾಗೂ ನಮ್ಮ ತರಗತಿಯವರ ಉತ್ಸಾಹದಿಂದ ಮೂಡಿ ಬಂದದ್ದೇ ಅರಿವಿನ ಹೆಜ್ಜೆ ಸ್ವಚ್ಚತೆಯ ಕಡೆಗೆ ಎಂಬ ಸಣ್ಣ ಅಭಿಯಾನ. ಇದರಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ್ದ ಸುಮಾರು 40 ಕ್ಕೂ ಹೆಚ್ಚು ಸ್ವತ್ಛತೆಯ ಬಗೆಗಿನ ಭಿತ್ತಿಪತ್ರಗಳು ಅನಾವರಣಗೊಂಡವು. ಮೊದಲ ಹೆಜ್ಜೆ ನಮ್ಮಿಂದಲೇ ಪ್ರಾರಂಭವಾಗಬೇಕು ಎಂಬ ನಿಟ್ಟಿನಲ್ಲಿ ನಮ್ಮ ತರಗತಿ ಕೋಣೆಯನ್ನು ನಾವೇ ಸ್ವತ್ಛಗೊಳಿಸುವ ಮೂಲಕ ಪ್ರತಿಜ್ಞೆ ಯನ್ನೂ ಕೈಗೊಂಡೆವು. ಕಾಲೇಜಿನ ಸ್ವಚ್ಛತಾ ಸಿಬ್ಬಂದಿಗಳಿಗೆ ಗೌರವಾರ್ಪಣೆಯನ್ನೂ ಮಾಡಿದೆವು. ನಮ್ಮ ಕಾಲೇಜಿನಲ್ಲೇ ವಿದ್ಯಾರ್ಥಿಗಳು ಮಾಡಿದ ಗೋಡೆ, ಡೆಸ್ಕ್ ಬರಹಗಳು, ಹಾಕಿದ್ದ ಕಸಗಳ ರಾಶಿಯ ಪೋಟೋ ತೆಗೆದು ಅದನ್ನು ಪ್ರದರ್ಶಿಸಿದೆವು. ಕೆಲವೊಂದು ಲೆಕ್ಕಾಚಾರಗಳ ಮೂಲಕ ನಮ್ಮ ಅರಿವಿಲ್ಲದೇ ಉತ್ಪತ್ತಿಯಾಗುವ ಸಣ್ಣ ಸಣ್ಣ ಕಸಗಳು ಎಷ್ಟು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆಯೆಂಬ ಕಟು ಸತ್ಯವನ್ನು ಬಿಚ್ಚಿಟ್ಟೆವು.
1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು. ನಂತರ ನಡೆದ ಆರೋಗ್ಯಕರ ಬೆಳವಣಿಗೆಗಳು ಆಶ್ಚರ್ಯಕರ. ಪ್ರತಿಯೊಂದು ತರಗತಿಯಲ್ಲೂ ವಿದ್ಯಾರ್ಥಿಗಳು ಹಾಕುತ್ತಿದ್ದ ಕಸದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂಬ ಮಾಹಿತಿ ದೊರೆಯಿತು. ನಮ್ಮೆಲ್ಲರ ಖುಷಿಗೆ ಎಣೆಯೇ ಇರಲಿಲ್ಲ. ಏನೋ ಒಂದು ಬದಲಾವಣೆ ತಂದ ಹುರುಪು,ಸಾರ್ಥಕತೆ ಪ್ರತಿಯೊಬ್ಬರ ಮುಖದಲ್ಲೂ ಎದ್ದು ಕಾಣುತ್ತಿತ್ತು. “ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ‘ ಎನ್ನುವಂತೆ ಪ್ರತಿಯೊಂದು ಕೆಲಸವನ್ನು ಮಾಡುವಾಗ ಅಡ್ಡಿ ಆತಂಕಗಳು ಇದ್ದದ್ದೇ. ಆದರೆ, ಪರಿಶ್ರಮ ಮತ್ತು ಛಲವಿದ್ದರೆ ಎಲ್ಲಾ ಕಾರ್ಯಗಳು ಎಗ್ಗಿಲ್ಲದಂತೆ ನಡೆಯುತ್ತದೆ.
ರಶ್ಮಿ ಯಾದವ್ ಕೆ.ದ್ವಿತೀಯ ಪತ್ರಿಕೋದ್ಯಮ ವಿಭಾಗ
ಎಸ್‌ಡಿಎಂ ಪದವಿ ಕಾಲೇಜು, ಉಜಿರೆ