Advertisement

ಕಾಲುವೆ ಹೂಳೆತ್ತಲು ವಲಯಕ್ಕೊಂದು ಯಂತ್ರ

11:09 AM Sep 17, 2017 | |

ಬೆಂಗಳೂರು: ಬಿಬಿಎಂಪಿಯ ಎಂಟು ವಲಯಗಳಲ್ಲಿ ರೊಬೋಟಿಕ್‌ ಯಂತ್ರಗಳ ಮೂಲಕ ರಾಜಕಾಲುವೆಗಳಲ್ಲಿನ ಹೂಳು ತೆಗೆಯಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ. ವರ್ತುಲ ರಸ್ತೆಯ ಹೊಸಕೆರೆಹಳ್ಳಿ ಕೆಇಬಿ ಜಂಕ್ಷನ್‌ನಲ್ಲಿ ಬಿಬಿಎಂಪಿ ನಿರ್ಮಿಸಿರುವ ಮೇಲ್ಸೇತುವೆ ಉದ್ಘಾಟಿಸಿ ಮಾತನಾಡಿದರು.

Advertisement

ರಾಜಕಾಲುವೆಗಳಲ್ಲಿ ಹೂಳು ತುಂಬಿರುವುದರಿಂದಾಗಿ ಮಳೆನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಹಲವಾರು ಕಡೆಗಳಲ್ಲಿ ನೀರು ಕಾಲುವೆ ಉಕ್ಕಿ ಹರಿದು ತೊಂದರೆಯಾಗುತ್ತಿದೆ. ಈ  ಹಿನ್ನೆಲೆಯಲ್ಲಿ ಕಾಲುವೆಗಳಲ್ಲಿನ ಹೂಳೆತ್ತಲು ಪ್ರತಿ ವಲಯಕ್ಕೆ ಒಂದರಂತೆ ಎಂಟು ರೊಬೋಟಿಕ್‌ ಯಂತ್ರಗಳನ್ನು ಬಳಸಲಾಗುವುದು ಎಂದು ಹೇಳಿದರು. 

ಈಗಾಗಲೇ ಎಚ್‌ಎಸ್‌ಆರ್‌ ಬಡಾವಣೆ ಹಾಗೂ ಹೆಣ್ಣೂರಿನಲ್ಲಿ ರೊಬೋಟಿಕ್‌ ಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಿಸಿ ಕಾಲುವೆಗಳಲ್ಲಿನ ಹೂಳೆತ್ತಲಾಗಿದೆ. ಅದೇ ಮಾದರಿಯಲ್ಲಿ ಎಲ್ಲ ವಲಯಗಳಲ್ಲಿಯೂ ಅವುಗಳನ್ನು ಬಳಸಿ ಕಾಲುವೆಗಳನ್ನು ಸ್ವತ್ಛಗೊಳಿಸಲು ಯೋಜನೆ ರೂಪಿಸಲಾಗಿದೆ. ಇಂತಹ ಯಂತ್ರಗಳನ್ನು ಖರೀದಿಸುವುದರಿಂದ ಪಾಲಿಕೆಗೆ ಹೆಚ್ಚು ಹೊರೆಯಾಗುವುದರಿಂದ ಗುತ್ತಿಗೆ ಆಧಾರದಲ್ಲಿ ಯಂತ್ರಗಳನ್ನು ಪಡೆಯಲು ಚಿಂತನೆ ನಡೆಸಲಾಗಿದೆ ಎಂದರು. 

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 400 ಕಿ.ಮೀ. ರಾಜಕಾಲುವೆಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದ್ದು, ನೂರಾರು ಕಡೆಗಳಲ್ಲಿ ಕಾಲುವೆ ತಡೆಗೋಡೆ, ಹೂಳೆತ್ತುವಂತಹ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಕೆಲವರು ಮಾತ್ರ ಕೆಲಸವೇ ಆಗಿಲ್ಲ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು. 

ಈ ಹಿಂದೆ ಪ್ರತಿಬಾರಿ ಮಳೆ ಬಂದಾಗಲೂ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗುತ್ತಿತ್ತು. ಇದರೊಂದಿಗೆ ಕಿನೋ ಥಿಯೇಟರ್‌ ಬಳಿ ನೀರು ನಿಂತು ಬಸ್‌ಗಳು ಮುಳುಗಿರುವ ಪರಿಸ್ಥಿತಿ ಇತ್ತು. ಆದರೆ, ನಮ್ಮ ಸರ್ಕಾರ ಅಂತಹ ಸಮಸ್ಯೆಗಳ ನಿವಾರಣೆಗಾಗಿ ಆದ್ಯತೆ ನೀಡಿ ಸಮಸ್ಯೆಗಳನ್ನು ಪರಿಹಾರಿಸಿದೆ. ಇದೀಗ ಎಚ್‌ಎಸ್‌ಆರ್‌ ಬಡಾವಣೆಯಲ್ಲಿನ ಪ್ರವಾಹ ತಡೆಯಲು ಸಹ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. 

Advertisement

ಕೊನೆಗೂ ಉದ್ಘಾಟನೆಗೊಂಡ ಫ್ಲೈಓವರ್‌: ಹೊಸಕೆರೆಹಳ್ಳಿ ಬಳಿಯ ಕೆಇಬಿ ಜಂಕ್ಷನ್‌ ಬಳಿಯ ಮೇಲ್ಸೇತುವೆಯನ್ನು ಶನಿವಾರ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಯಿತು. ಯೋಜನೆಯ ಕುರಿತು ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ , “ಮೈಸೂರು ರಸ್ತೆಯಿಂದ ಸಿಲ್ಕ್ಬೋರ್ಡ್‌ ಜಂಕ್ಷನ್‌ವರೆಗಿನ ಹೊರ ವರ್ತುಲ ರಸ್ತೆಯವರೆಗೆ ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆಯ ಭಾಗವಾಗಿ ಮೇಲ್ಸೇತುವೆ ನಿರ್ಮಿಸಲಾಗಿದೆ.

18 ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ ಮೂರು ತಿಂಗಳು ತಡವಾಗಿ ಪೂರ್ಣಗೊಂಡಿದ್ದು, ಕಾಮಗಾರಿಯ ನಂತರವೂ ಉದ್ಘಾಟನೆಯಾಗುವುದು ಒಂದು ತಿಂಗಳು ತಡವಾಗಿದೆ ಎಂದು ತಿಳಿಸಿದರು. ಯೋಜನೆಯ ಭಾಗವಾಗಿ ಡಾಲರ್ ಕಾಲೋನಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಕೆಇಬಿ ಜಂಕ್ಷನ್‌ನಲ್ಲಿ ಏಕಮುಖ ಸಂಚಾರದ ಎರಡು ಪಥ ಮೇಲ್ಸೇತುವೆಯನ್ನು ಪೂರ್ಣಗೊಳಿಸಿರುವುದರಿಂದ ಮೈಸೂರು ರಸ್ತೆಯಿಂದ ಜನಶಂಕರಿ, ಕನಕಪುರ ರಸ್ತೆ, ಜೆಪಿನಗರ, ಜಯನಗರ, ಬನ್ನೇರುಘಟ್ಟ ರಸ್ತೆ, ಬಿಟಿಎಂ ಬಡಾವಣೆ ಮತ್ತು ಸೆಂಟ್ರಲ್‌ ಸಿಲ್ಕ್ಬೋರ್ಡ್‌ ಕಡೆ ಹೋಗುವವರಿಗೆ ಅನುಕೂಲವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ವಸತಿ ಎಂ.ಕೃಷ್ಣಪ್ಪ, ಶಾಸಕ ರವಿಸುಬ್ರಮಣ್ಯ, ಮೇಯರ್‌ ಜಿ.ಪದ್ಮಾವತಿ, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. 

ಮೇಲ್ಸೇತುವೆಗೆ ಈಗ ಹೆಸರಿನ ವಿವಾದ: ಕಾಮಗಾರಿ ಪೂರ್ಣಗೊಂಡರೂ ತಿಂಗಳುಗಳ ಕಾಲ ಉದ್ಘಾಟನೆಯಾಗದೆ ವಿವಾದಕ್ಕೆ ಗುರಿಯಾಗಿದ್ದ ಕೆಇಬಿ ಜಂಕ್ಷನ್‌ ಮೇಲ್ಸೇತುವೆ ಕೊನೆಗೂ ಉದ್ಘಾಟನೆಗೊಂಡಿದೆಯಾದರೂ, ಈಗ ಹೊಸ ವಿವಾದಕ್ಕೆ ಗುರಿಯಾಗಿದೆ. ಜಂಕ್ಷನ್‌ನ ಮೂಲ ಮಾಲೀಕ ಪಟೇಲ್‌ ಚಿನ್ನಪ್ಪ ಅವರ ಹೆಸರಿಡಬೇಕು ಎಂದು ಒಂದು ಬಣ ಒತ್ತಾಯಿಸಿದರೆ, ಸ್ಥಳ ಖರೀದಿಸಿ ಬಿಡಿಎಗೆ ನೀಡಿದ ರಂಗಸ್ವಾಮಿ ಅವರ ಹೆಸರಿಡಬೇಕು ಎಂದು ಮತ್ತೂಂದು ಬಣ ಪಟ್ಟು ಹಿಡಿದಿವೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಂಗಸ್ವಾಮಿ ಅವರ ಪತ್ನಿ ಚಂಪಕಾವತಿ, ಕೆಇಬಿ ಜಂಕ್ಷನ್‌ ಸ್ಥಳವು ಸರ್ವೆ ಸಂಖ್ಯೆ 86/1ರಲ್ಲಿದೆ. ಜಾಗವನ್ನು ನನ್ನ ಪತಿ ರಂಗಸ್ವಾಮಿ ಅವರು ಖರೀದಿಸಿ ನಂತರದಲ್ಲಿ ಬಿಡಿಎಗೆ ನೀಡಿದ್ದರು. ಆದರೀಗ ಈ ಸ್ಥಳಕ್ಕೆ ಪಟೇಲ್‌ ಚಿನ್ನಪ್ಪ ಎಂದು ನಾಮಕರಣಗೊಳಿಸುವಂತೆ ಒತ್ತಾಯಿಸುವುದಕ್ಕೆ ನಮ್ಮ ವಿರೋಧವಿದ್ದು, ಜಂಕ್ಷನ್‌ಗೆ ತಮ್ಮ ಪತಿಯ ಹೆಸರಿಡಬೇಕು ಎಂದು ಒತ್ತಾಯಿಸಿದರು. 

ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿವುದಕ್ಕಾಗಿಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ನಾಲ್ಕು ಸಾವಿರ ಜನರನ್ನು ನೇಮಿಸಿಕೊಂಡಿದ್ದಾರೆ. ಸರ್ಕಾರ ನಗರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ನಗರದ ಜನತೆಗೆ ಅರಿವಿದೆ. ಹೀಗಾಗಿ ಅವರ ಸುಳ್ಳು ಆರೋಪಗಳನ್ನು ಜನರು ನಂಬುವುದಿಲ್ಲ. 
-ಕೆ.ಜೆ.ಜಾರ್ಜ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next