Advertisement
ಬಿಜೆಪಿ ಸರಕಾರದ ಪಾಲಿಗೆ ಮೊದಲ ಅಧಿವೇಶನ ಒಂದು ರೀತಿಯಲ್ಲಿ ಅಗ್ನಿಪರೀಕ್ಷೆಯಾಗಿತ್ತು. ಮುಖ್ಯಮಂತ್ರಿ, ಮೂವರು ಉಪ ಮುಖ್ಯಮಂತ್ರಿಗಳು ಸೇರಿದಂತೆ ಇಡೀ ಸಚಿವ ಸಂಪುಟ ತಂಡವಾಗಿ ರಕ್ಷಣಾತ್ಮಕವಾಗಿ ಅಧಿವೇಶನ ನಿಭಾಯಿಸಿತು. ಬಜೆಟ್‌ಗೂ ಅನುಮೋದನೆ ಪಡೆದು ನೆರೆ ಪರಿಹಾರಕ್ಕಾಗಿ ಪೂರಕ ಅಂದಾಜಿನಲ್ಲೂ ಹಣ ಹೊಂದಾಣಿಕೆ ಮಾಡಿಕೊಂಡಿದೆ.
Related Articles
Advertisement
ರಾಜ್ಯದಲ್ಲಿ ಪ್ರಸ್ತುತ ಇರುವ ಆರ್ಥಿಕ ಪರಿಸ್ಥಿತಿ ಆಶಾದಾಯಕವೇನೂ ಅಲ್ಲ. ಇದರ ನಡುವೆಯೇ ಸಂತ್ರಸ್ತರ ಪರಿಹಾರ, ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಂತೂ ಮುಂದಿನ ಆರು ತಿಂಗಳು ಕಠಿನವೇ ಆಗುವ ಮುನ್ಸೂಚನೆ ಇದೆ. ಇದನ್ನು ಸರಕಾರ ಹೇಗೆ ನಿಭಾಯಿಸಲಿದೆ ಎಂಬುದು ಕಾದು ನೋಡಬೇಕಾಗಿದೆ. ಈ ಮಧ್ಯೆ, ಅನರ್ಹತೆಗೊಂಡಿರುವ ಶಾಸಕರ ಕ್ಷೇತ್ರಗಳಲ್ಲಿ ಉಪ ಚುನಾವಣೆಯೂ ಘೋಷಣೆಯಾಗಿರುವುದರಿಂದ ಜನರ ಒಲವು ಗಳಿಸಬೇಕಿದೆ.
ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಹೊಸ ಬಜೆಟ್ ಮಂಡಿಸುವ ಉತ್ಸಾಹ ತೋರಿದ್ದ ಯಡಿಯೂರಪ್ಪ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿ ಯಥಾಸ್ಥಿತಿ ಕಾಪಾಡಿಕೊಂಡರೆ ಸಾಕು ಎಂಬ ಜಾಣ್ಮೆ ಮೆರೆದು ಪೂರಕ ಅಂದಾಜು ಮಂಡಿಸಿ ಒಪ್ಪಿಗೆ ಪಡೆದುಕೊಂಡಿದ್ದಾರೆ.ಹೇಗೂ ಪ್ರಸಕ್ತ ಆರ್ಥಿಕ ವರ್ಷದ ಆರು ತಿಂಗಳು ಮುಗಿದಿರುವುದರಿಂದ ಮತ್ತೆ ಹೊಸ ಬಜೆಟ್ ಮಂಡಿಸಲು ಹೋಗಿಲ್ಲ. ಮುಂದಿನ ಮೂರು ತಿಂಗಳು ರಾಜ್ಯದ ಆಡಳಿತ ಯಂತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವ ರೀತಿ ಕೆಲಸ ಮಾಡಲಿದ್ದಾರೆ ಎಂಬುದು ಬಿಜೆಪಿ ಸರಕಾರದ ಸಾಧನೆಗೆ ಸಾಕ್ಷಿಯಾಗಲಿದೆ.
ಪ್ರತಿಪಕ್ಷಗಳು ಸಹ ಪ್ರವಾಹ ಪರಿಹಾರ ಹಾಗೂ ಪುನರ್ವಸತಿ ವಿಚಾರದಲ್ಲಿ ರಾಜಕೀಯಕ್ಕೆ ಅವಕಾಶ ಕೊಡದೆ ತೊಂದರೆಗೊಳಗಾದವರಿಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರವಾಹಪೀಡಿತ ಪ್ರದೇಶಗಳನ್ನು ಪ್ರತಿನಿಧಿಸುವ ಶಾಸಕರು, ಸಂಸದರು, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ ಸದಸ್ಯರು ನಿಜಕ್ಕೂ ಸಮಸ್ಯೆಗೆ ಸಿಲುಕಿರುವವರಿಗೆ ಸರಕಾರದ ನೆರವು ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತಾಗಬೇಕು.