Advertisement

ಕಣಿವೆ ರಾಜ್ಯದತ್ತ ಕೇಂದ್ರ ದೃಷ್ಟಿ ಬದಲಾವಣೆಯ ಗಾಳಿ

12:23 AM Jul 03, 2019 | mahesh |

ಮೋದಿ ಸರ್ಕಾರ ತನ್ನ ಎರಡನೇ ಅವಧಿಯಲ್ಲಿ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದತ್ತ ಹೆಚ್ಚು ಚಿತ್ತ ಹರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದರಲ್ಲೂ ನೂತನ ಗೃಹ ಸಚಿವ ಅಮಿತ್‌ ಶಾ ಮಂಡಿಸಿದ ಮೊದಲ ಬಿಲ್‌ ಕೂಡ ಕಾಶ್ಮೀರಕ್ಕೆ ಸಂಬಂಧಿಸಿದ್ದು ಎನ್ನುವುದು ವಿಶೇಷ.

Advertisement

ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಜು. 3ರಿಂದ ಅನ್ವಯವಾಗುವಂತೆ ಆರು ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ವಿಸ್ತರಿಸುವ ಕೇಂದ್ರದ‌ ಪ್ರಸ್ತಾಪಕ್ಕೂ ರಾಜ್ಯಸಭೆಯಲ್ಲಿ ಅನುಮತಿ ಸಿಕ್ಕಿದೆ. ಜತೆಗೆ ಕಾಶ್ಮೀರ ಮೀಸಲು(ತಿದ್ದುಪಡಿ) ವಿಧೇಯಕ 2019ಕ್ಕೂ ಅನುಮೋದನೆ ಪಡೆದುಕೊಳ್ಳಲಾಗಿದೆ.

ಈ ಮಧ್ಯೆಯೇ ಅಮಿತ್‌ ಶಾ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ, ಸವಲತ್ತು ಸಿಗುವುದಕ್ಕೆ ಕಾರಣವಾದ ಆರ್ಟಿಕಲ್‌ 370 ನ್ನು “ತಾತ್ಕಾಲಿಕ’ ಎಂದು ಸಂಬೋಧಿಸುವ ಮೂಲಕ, ಅದನ್ನು ತೆಗೆದುಹಾಕುವ ಪರೋಕ್ಷ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಸಂಗತಿ ಕಾಶ್ಮೀರಿ ನಾಯಕರ ಕಣ್ಣು ಕೆಂಪಾಗಿಸಿರುವುದು ಸುಳ್ಳಲ್ಲ. ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫ‌ರೂಕ್‌ ಅಬ್ದುಲ್ಲಾ ಅಂತೂ, ಆರ್ಟಿಕಲ್‌ 370 ತಾತ್ಕಾಲಿಕ ಎನ್ನುವುದಾದರೆ, ಭಾರತದೊಂದಿಗಿನ ಕಾಶ್ಮೀರದ ವಿಲೀನವೂ ತಾತ್ಕಾಲಿಕವಾದದ್ದು ಎಂದು ಹರಿಹಾಯ್ದಿದ್ದಾರೆ. ಕಾಶ್ಮೀರಿ ನಾಯಕರಲ್ಲಿ ಕೇಂದ್ರ ಸರ್ಕಾರದ ಕಾಶ್ಮೀರದ ಕುರಿತ ದಿಟ್ಟ ನಿಲುವುಗಳು ಯಾವ ಪರಿ ತಾಪತ್ರಯ ಸೃಷ್ಟಿಸುತ್ತಿವೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ.

ಮತ್ತೂಂದು ವಿಶೇಷತೆಯೆಂದರೆ, ಪ್ರತಿಬಾರಿಯೂ ಕೇಂದ್ರ ಗೃಹ ಸಚಿವರು ಕಾಶ್ಮೀರಕ್ಕೆ ಕಾಲಿಡುತ್ತಾರೆ ಎಂದಾಕ್ಷಣ ಪ್ರತ್ಯೇಕತಾವಾದಿಗಳು ಗದ್ದಲ ನಡೆಸುತ್ತಿದ್ದರು, ಬಂದ್‌ಗೆ ಕರೆಕೊಡುತ್ತಿದ್ದರು. ಈ ಬಾರಿ ಅಂಥ ಸ್ಥಿತಿ ನಿರ್ಮಾಣವಾಗಲೇ ಇಲ್ಲ. ಅಂದರೆ ಕೇಂದ್ರವು ಪ್ರತ್ಯೇಕತಾವಾದಿಗಳ ಸದ್ದಡಗಿಸುವಲ್ಲಿ ಸಫ‌ಲವಾಗಿದೆ ಎನ್ನುವ ಆಶಾದಾಯಕ ಸಂಗತಿಯೂ ಇದರ ಹಿಂದಿದೆ.

“ಇದುವರೆಗಿನ ಎಲ್ಲಾ ಕೇಂದ್ರ ಸರ್ಕಾರಗಳು ಕಾಶ್ಮೀರಿಗರನ್ನು ಕಡೆಗಣಿಸುತ್ತಲೇ ಬಂದಿವೆ’ ಎನ್ನುತ್ತಾ ತಮ್ಮ ಅಸಾಮರ್ಥ್ಯದ ಹೊಣೆಯನ್ನು ದೆಹಲಿಯತ್ತ ಸಾಗಿಸುತ್ತಿದ್ದ ಮೆಹಬೂಬಾ ಮುಫ್ತಿ, ಫ‌ರೂಕ್‌/ಓಮರ್‌ ಅಬ್ದುಲ್ಲಾರಂಥ ರಾಜಕಾರಣಿಗಳು ಮತ್ತು ಗಿಲಾನಿಯಂಥ ಪ್ರತ್ಯೇಕತಾವಾದಿ ನಾಯಕರಿಗೀಗ, ಕೇಂದ್ರ ಸರ್ಕಾರ ತಮ್ಮ ರಾಜ್ಯದತ್ತ ಹೆಚ್ಚು ಗಮನ ಹರಿಸುತ್ತಿರುವುದು ಇರಿಸುಮುರಿಸಿಗೆ ಕಾರಣವಾಗುತ್ತಿದೆ. ಅಂದರೆ, ಕೇಂದ್ರ ಸರಿಯಾದ ದಿಕ್ಕಿನತ್ತ ಹೆಜ್ಜೆ ಇಡುತ್ತಿದೆ ಎಂದೇ ಅರ್ಥ. ಸತ್ಯವೇನೆಂದರೆ ಆರ್ಟಿಕಲ್‌ 370 ದಯಪಾಲಿಸುವ ವಿಶೇಷ ಸ್ಥಾನಮಾನಗಳಿಂದಾಗಿಯೇ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರು, ಅಲ್ಲಿನ ರಾಜಕೀಯ ಕುಟುಂಬಗಳು ಬಲಿಷ್ಠವಾಗಿ ಬೆಳೆದು ನಿಂತಿವೆ. ಈಗ ಸವಲತ್ತು ಹಿಂದೆ ಹೋದರೆ, ತಾವೂ ಭಾರತದ ಎಲ್ಲಾ ರಾಜ್ಯಗಳ ಜತೆ ಹೆಜ್ಜೆಹಾಕಬೇಕು ಎನ್ನುವುದು ಅವರ್ಯಾರಿಗೂ ಬೇಕಿಲ್ಲ.

Advertisement

ಗಮನಾರ್ಹ ಸಂಗತಿಯೆಂದರೆ, ಸ್ವಾತಂತ್ರಾ ನಂತರ ಜಮ್ಮು-ಕಾಶ್ಮೀರ ರಾಜ್ಯ ಇದುವರೆಗೆ ಎಂಟು ಬಾರಿ ಕೇಂದ್ರದ ಆಡಳಿತಕ್ಕೆ ಒಳಪಟ್ಟಿದೆ. ಕೆಲವೊಂದು ಸಂದರ್ಭ ಹೊರತುಪಡಿಸಿ ಬಹುತೇಕ ಬಾರಿ ರಾಷ್ಟ್ರಪತಿ ಅಥವಾ ಗವರ್ನರ್‌ಗಳ ಆಡಳಿತವಿದ್ದಾಗಲೆಲ್ಲ ಕಣಿವೆಯಲ್ಲಿ ಉತ್ತಮ ಆಡಳಿತ, ಶಾಂತಿ ಸುವ್ಯವಸ್ಥೆ ರಾರಾಜಿಸಿದೆ. ಕಾಶ್ಮೀರಿ ರಾಜಕೀಯ ನಾಯಕರು ಮತ್ತು ಕಾಶ್ಮೀರಿ ಜನರ ಆಕಾಂಕ್ಷೆಗಳ ನಡುವೆ ಎಷ್ಟು ಕಂದರ ಏರ್ಪಟ್ಟಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ವಿಚಾರಕ್ಕೆ ಬಂದರೆ, ಅವರು ಹೊರಗಿನವರಾದರೂ ಕಾಶ್ಮೀರದ ನಾಡಿಮಿಡಿತವನ್ನು ಉತ್ತಮವಾಗಿ ಅರಿತಿದ್ದಾರೆ. ಅಲಮೇರಾ ಸೇರಿದ್ದ ಎಷ್ಟೋ ಫೈಲುಗಳು ಅವರು ಬಂದ ನಂತರದಿಂದ ಮತ್ತೆ ಹೊರಬಂದು ಸಕ್ರಿಯವಾಗಿವೆ ಎನ್ನುತ್ತಾರೆ ಸ್ಥಳೀಯ ಅಧಿಕಾರಿಗಳು.

ಸತ್ಯಪಾಲ್‌ ಅವರು ಕಾಶ್ಮೀರದ ರಾಜ್ಯಪಾಲರಾಗಿ ನೇಮಕಗೊಂಡಿದ್ದೇ, ಅನೇಕರ ವಿರೋಧದ ನಡುವೆಯೂ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಆದೇಶ ನೀಡಿದ್ದರು. ಪ್ರತ್ಯೇಕತಾವಾದಿಗಳು ಎಷ್ಟು ಗದ್ದಲವೆಬ್ಬಿಸಿದರೂ, ಸಾಮಾನ್ಯ ಜನರಿಂದ ಈ ಪ್ರಜಾಪ್ರಭುತ್ವಿàಯ ನಡೆ ಮೆಚ್ಚುಗೆ ಗಳಿಸಿತ್ತು. ಇನ್ನು 5 ಹೊಸ ಮೆಡಿಕಲ್‌ ಕಾಲೇಜುಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಏಮ್ಸ್‌ ಸಂಸ್ಥೆಗಳ ಸ್ಥಾಪನೆ ರಾಜ್ಯಪಾಲರ ಅವಧಿಯಲ್ಲೇ ಆಗಿವೆ. ಇದಷ್ಟೇ ಅಲ್ಲದೆ, ದಶಕದಿಂದ ನಿಂತುಹೋಗಿದ್ದ ಅನೇಕ ಮೂಲಸೌಕರ್ಯಾಭಿವೃದ್ಧಿ ಯೋಜನೆಗಳೂ ಮರು ಚಾಲನೆ ಪಡೆದಿವೆ. ಕಾಶ್ಮೀರಿ ಯುವಕರಿಗೆ ಈ ಯೋಜನೆಗಳು ಎದ್ದು ಕಾಣುತ್ತಿವೆ. “ಭಾರತ ಸರ್ಕಾರ ನಮ್ಮತ್ತ ನೋಡುವುದೇ ಇಲ್ಲ’ ಎನ್ನುವ ಕಾಶ್ಮೀರಿ ರಾಜಕಾರಣಿಗಳ ಸುಳ್ಳುಗಳಿಗೆ ಈ ಬೃಹತ್‌ ಯೋಜನೆಗಳ ಮೇಲೆ ಪರದೆ ಎಳೆದು ಮುಚ್ಚಿಡಲು ಸಾಧ್ಯವಾಗುತ್ತಿಲ್ಲ. ಕಾಶ್ಮೀರಕ್ಕೆ ನಿಜಕ್ಕೂ ಬೇಕಿರುವುದು ವಿಶೇಷ ಸ್ಥಾನಮಾನವಲ್ಲ, ಬದಲಾಗಿ, ಸರಿಯಾಗಿ ಆಡಳಿತ ಮಾಡುವ ಮನಸ್ಥಿತಿಯುಳ್ಳ ಪಕ್ಷಗಳು. ರಾಷ್ಟ್ರಪತಿ/ರಾಜ್ಯಪಾಲರ ಆಡಳಿತದಿಂದ ಕಾಶ್ಮೀರಿ ನಾಯಕರು ಪಾಠ ಕಲಿಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next