ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಕ್ರೈಸ್ತ ಬಾಂಧವರು ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದರು. ನಗರದ ಕೆಥೋಲಿಕ್ ಹಾಗೂ ಪ್ರಾಟೆಸ್ಟೆಂಟ್ ಪಂಥದವರು ಆಯಾ ಚರ್ಚ್‌ಗಳಿಗೆ ಭೇಟಿ ನೀಡಿ ಸ್ವಾಮಿ ಯೇಸುವಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಕೇಕ್ ವಿತರಿಸಿ ಸಂತಸ ಹಂಚಿಕೊಂಡರು. ಚರ್ಚ್‌ಗಳನ್ನು ಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.
ಕ್ರಿಸ್‌ಮಸ್ ಬಲಿಪೂಜೆ: ಕೆಥೋಲಿಕ್ ಚರ್ಚ್‌ಗಳಲ್ಲಿ ಮಂಗಳವಾರ ರಾತ್ರಿಯಿಂದಲೇ ಪೂಜೆ ಆರಂಭವಾಯಿತು. ಗೋದಲಿ ರಚಿಸಿ, ಬಾಲ ಏಸುವನ್ನಿರಿಸಲಾಯಿತು. ಕ್ರಿಸ್‌ಮಸ್ ಬಲಿಪೂಜೆ ನಡೆಯಿತು. ಸಂತ ಪಾಲ್ ಚರ್ಚ್‌ನ ಫಾದರ್ ಮರಿ ಜೋಸೆಫ್ ಕ್ರಿಸ್‌ಮಸ್ ಬಲಿಪೂಜೆ ಅರ್ಪಿಸಿದರು. ಮಧ್ಯರಾತ್ರಿ 1 ಗಂಟೆಯ ನಂತರ ಕ್ರೈಸ್ತ ಬಾಂಧವರಿಂದ ಶುಭಾಶಯ ವಿನಿಮಯ ನಡೆಯಿತು.
ಇನ್ನು ಪ್ರಾಟಸ್ಟೆಂಟ್ ಪಂಥದವರು ಕಳೆದ ಒಂದು ತಿಂಗಳಿಂದಲೂ ಮನೆ ಮನೆಗಳಲ್ಲೂ ಭಜನೆ ನಡೆಸಿದ್ದರು. ಕ್ರಿಸ್‌ಮಸ್ ದಿನವಾದ ಬುಧವಾರ ಪ್ರಾಟಸ್ಟೆಂಟ್ ಚರ್ಚ್‌ಗಳಲ್ಲಿ ಗಾಯನ ದಿವ್ಯ ಬಲಿಪೂಜೆ ನೆರವೇರಿಸಲಾಯಿತು. ಶುಭಾಶಯಗಳ ವಿನಿಮಯ ನಡೆಯಿತು. ಕ್ರಿಸ್‌ಮಸ್ ಕೇಕ್‌ಗಳನ್ನು ಹಂಚಲಾಯಿತು. ಹಬ್ಬದ ತಿನಿಸುಗಳನ್ನು ಪರಸ್ಪರ ಹಂಚಿಕೊಂಡು, ಆಪ್ತರನ್ನು ಕರೆದು ಹಬ್ಬದ ಭೋಜನ ಸವಿದರು.
ಚರ್ಚ್‌ಗಳಿಗೆ ಶಾಸಕರು ಭೇಟಿ: ಪಟ್ಟಣದ ಸಿಎಸ್‌ಐ, ಮಸಗಾಪುರದ ಬಿಷಪ್ ನಾರ್ಚೆಂಟ್ ಸ್ಮಾರಕ ದೇವಾಲಯ , ದೊಡ್ಡರಾಯಪೇಟೆಯ ಸಂತ ತೆರೆಸಾ ಚರ್ಚ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಚರ್ಚ್ ಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ತೆರಳಿ ಕ್ರಿಸ್‌ಮಸ್ ಹಬ್ಬದ ಶುಭಾಶಯ ತಿಳಿಸಿದರು. ವಿವಿಧ ಚರ್ಚ್ ಗಳಿಗೆ ತೆರಳಿದ ಶಾಸಕರು ಅಲ್ಲಿನ ಧರ್ಮಗುರುಗಳನ್ನು ಸನ್ಮಾನಿಸಿ ಕೇಕ್ ಕಟ್ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬದ ಶುಭಾಶಯ ಕೋರಿದರು.
ಉತ್ತಮ ಮಳೆ-ಬೆಳೆಯಾಗಲಿ: ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಂತಿ, ಅಹಿಂಸೆ, ಕರುಣೆಯಂತಹ ಮಾನವೀಯತೆ ಗುಣಗಳನ್ನು ಜಗತ್ತಿಗೆ ಸಾರಿದ ಮಹಾನ್ ಮಾನವತಾವಾದಿ ಏಸುಕ್ರಿಸ್ತನು ಹುಟ್ಟಿದ ದಿನವಾದ ಇಂದು ನಾಡಿನ ಎಲ್ಲಾ ಕ್ರೈಸ್ತ ಸಮುದಾಯದ ಬಂಧುಗಳಿಗೆ ಹಬ್ಬದ ಶುಭಾಶಯ ಕೋರಿದರು. ಡಿಸೆಂಬರ್ ತಿಂಗಳಲ್ಲಿ ಕ್ರಿಸ್‌ಮಸ್ ನಂತರ 2020ನೇ ನೂತನ ವರ್ಷವು ಬರಲಿದ್ದು ನಾಡಿನ ಜನತೆಗೆ ಬರುವ ಹೊಸ ವರ್ಷ ಒಳಿತನ್ನುಂಟು ಮಾಡಿ ಉತ್ತಮ ಮಳೆ-ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಚರ್ಚ್ ಗಳಿಗೆ ಭೇಟಿ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಅಲ್ಲಿನ ಧರ್ಮಗುರುಗಳು ಸನ್ಮಾನಿಸಿ ಆಶೀರ್ವಚನ ನೀಡಿದರು. ತಾಪಂ ಮಾಜಿ ಅಧ್ಯಕ್ಷರಾದ ಬಿ.ಕೆ ರವಿಕುಮಾರ್, ಚಿಕ್ಕಮಹದೇವ, ಕನಿಷ್ಠ ವೇತನ ನಿಗಮದ ಮಾಜಿ ಅಧ್ಯಕ್ಷ ಆರ್.ಉಮೇಶ್, ತಾಪಂ ಮಾಜಿ ಸದಸ್ಯ ರಾಜು, ಗ್ರಾಪಂ ಮಾಜಿ ಸದಸ್ಯ ಮೂರ್ತಿ, ಜೋಸಪ್, ರವಿಗೌಡ, ಪುಷ್ಪರಾಜು, ಸುರೇಶ್‌ಕುಮಾರ್, ಸಾದುಸುಂದರ್, ಮೈಕಲ್ ರಾಜು, ಬೆಂಜಮಿನ್ ಹಾಜರಿದ್ದರು.