ಉಪ್ಪಿನಂಗಡಿ: ಶಿಬಾಜೆ ಗ್ರಾಮದ ಪೆರ್ಲ ಸರಕಾರಿ ಶಾಲೆಯ ಬಾವಿಗೆ ಡಿ. 2ರಂದು ವಿಷ ಹಾಕಿದ ಪ್ರಕರಣ ನಡೆದು 10 ದಿನಗಳಾದರೂ ಆರೋಪಿಗಳ ಪತ್ತೆಯ ಕಾರ್ಯ ನಡೆಯದೇ ಇರುವ ಕಾರಣ ಬುಧವಾರ ಪೆರ್ಲ ಶಾಲೆಗೆ ಮತ್ತು ಅಂಗನವಾಡಿಗೆ ಹೆತ್ತವರು ತಮ್ಮ ಮಕ್ಕಳನ್ನು ಕಳುಹಿಸದೇ ಪ್ರತಿಭಟಿಸಿದ್ದಾರೆ.
ಪ್ರತಿಭಟನೆಯ ವಿಷಯ ತಿಳಿದ ಮಾಧ್ಯಮದವರು ಮಧ್ಯಾಹ್ನದ ವೇಳೆ ಶಾಲೆಗೆ ಭೇಟಿ ನೀಡುವ ವರೆಗೂ ಶಿಕ್ಷಣ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿರಲಿಲ್ಲ. ಇಲಾಖೆ ಪ್ರಕರಣವನ್ನು ಲಘುವಾಗಿ ಪರಿಗಣಿಸಿದಂತೆ ಕಾಣಿಸುತ್ತಿದೆ. ಮಕ್ಕಳ ಪ್ರಾಣಕ್ಕೆ ಸಂಚಕಾರ ತರುವಂತಹ ಕೃತ್ಯವನ್ನು ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸದೇ ಇರುವುದು ಗ್ರಾಮಸ್ಥರನ್ನು ಹಾಗೂ ಹೆತ್ತವರನ್ನು ಕೆರಳಿಸಿದೆ.
ಮಂಗಳವಾರ ಶಾಲೆಯ ವಿದ್ಯಾರ್ಥಿಗಳ ಹೆತ್ತವರು ಮತ್ತು ಶಾಲಾಭಿವೃದ್ಧಿ ಸಮಿತಿಯ ತುರ್ತು ಸಭೆ ಶಾಲೆಯಲ್ಲಿ ನಡೆದಿದೆ. ಪ್ರಕರಣ ನಡೆದ ಅನಂತರದ ಗ್ರಾಮಸ್ಥರ ಸಭೆಯಲ್ಲಿ ನಿಗದಿಯಾದಂತೆ ಆರೋಪಿಗಳ ಪತ್ತೆಯಾಗದೇ ಇದ್ದಲ್ಲಿ ಡಿ. 13ರಂದು ಶಾಲೆಗೆ ಬೀಗ ಜಡಿದು ರಸ್ತೆಯಲ್ಲಿ ಪ್ರತಿಭಟನೆ ನಡೆಸುವುದಾಗಿ ನಿರ್ಣಯಿಸಲಾಗಿತ್ತು. ಈ ನಡುವೆ ಬೆಳ್ತಂಗಡಿಗೆ ಆಗಮಿಸಿದ್ದ ಮುಖ್ಯಮಂತ್ರಿ ಅವರಿಗೆ ಘಟನೆಯ ಕುರಿತು ವಿವರಿಸಿ, ಕ್ಷಿಪ್ರವಾಗಿ ಆರೋಪಿಗಳನ್ನು ಪತ್ತೆ ಮಾಡಲು ಇಲಾಖೆಗೆ ಸಹಕರಿಸಲು ಶಿಬಾಜೆ ಗ್ರಾಮಸ್ಥರಿಂದ ಮನವಿ ನೀಡಲಾಗಿತ್ತು. ಆಮೇಲೂ ಪ್ರಕರಣದ ಕುರಿತು ಯಾವುದೇ ಬೆಳವಣಿಗೆ ಕಾಣದೇ ಇರುವುದರಿಂದ, ಕುಡಿಯುವ ನೀರಿಗೆ ವಿಷವಿಕ್ಕಲು ಅವಕಾಶವಿದೆ ಎಂದಾದರೆ ಶಾಲೆಗೆ ತಮ್ಮ ಮಕ್ಕಳನ್ನು ಸುರಕ್ಷತೆಯ ಯಾವ ಭರವಸೆಯಲ್ಲಿ ಶಾಲೆಗೆ ಕಳುಹಿಸಲು ಸಾಧ್ಯ ಎಂದು ಹೆತ್ತವರು ಪ್ರಶ್ನಿಸಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮಕ್ಕೆ ಒಳಪಡಿಸುವವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ತೀರ್ಮಾನಿಸಿದ್ದರು. ಅದರಂತೆ ಬುಧವಾರದಿಂದ ಶಾಲೆಯ 1ರಿಂದ 8ನೇ ತರಗತಿಯ ವರೆಗೆ ಕಲಿಯುತ್ತಿರುವ ಎಲ್ಲ 94 ವಿದ್ಯಾರ್ಥಿಗಳನ್ನು ಅವರ ಹೆತ್ತವರು ಶಾಲೆಗೆ ಕಳುಹಿಸದೆ ಪ್ರತಿಭಟನೆ ನಡೆಸಿದ್ದಾರೆ.
ಧೈರ್ಯ ತುಂಬಲು ಸಾಧ್ಯವಿಲ್ಲವೇ?
ತಮ್ಮ ಮಕ್ಕಳ ಜೀವಕ್ಕೆ ಅಪಾಯ ಸಂಭವಿಸುವ ಭೀತಿಯಿಂದಾಗಿ ಶಾಲೆಯ ಹೆತ್ತವರು ವ್ಯಕ್ತಪಡಿಸುವ ಕಳವಳವನ್ನು ನಿವಾರಿಸುವತ್ತ ಶಿಕ್ಷಣ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ವಿಸ್ಮಯ ಮೂಡಿಸಿದೆ. ಸಾಲದೆಂಬಂತೆ ಹೆತ್ತವರು ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೇ ಇರುವ ನಿರ್ಧಾರಕ್ಕೆ ಬಂದಾಗಲೂ ಹೆತ್ತವರೊಂದಿಗೆ ಮಾತನಾಡಲು ಶಿಕ್ಷಣ ಇಲಾಖೆಯ ತಳಮಟ್ಟದ ಅಧಿಕಾರಿಯೂ ಮುಂದಾಗದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಶಂಕಿತರೊಬ್ಬರ ವಿಚಾರಣೆ
ಈ ಮಧ್ಯೆ ಪೊಲೀಸ್ ಇಲಾಖೆ ಈ ಹಿಂದೆ ಶಾಲೆಯೊಂದಿಗೆ ನಂಟು ಹೊಂದಿದ್ದ ವ್ಯಕ್ತಿಯೋರ್ವನನ್ನು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಒಳಪಡಿಸಿರುವುದಾಗಿ ಮಾಹಿತಿ ಲಭಿಸಿದೆ.