ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಶಿರಾಡಿ ಗ್ರಾಮದ ಕೊಡ್ಯಕಲ್ಲುವಿನಲ್ಲಿ, ಮಂಗಳವಾರ ಕಾರೊಂದು ಸುಮಾರು 20 ಅಡಿ ಆಳದ ಹೊಂಡಕ್ಕೆ ಉರುಳಿ ಬಿದ್ದು, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟು, ಕಾರಿನಲ್ಲಿದ್ದ 4 ಮಂದಿ ಗಂಭೀರ ಸ್ವರೂಪದ ಗಾಯಗಳೊಂದಿಗೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಚಾಲಕ ಕೋಲಾರದ ಮಾಲೂರು ನಿವಾಸಿ ಸುನಿಲ್ (30) ಮೃತಪಟ್ಟವರು. ಕಾರಿನಲ್ಲಿದ್ದ ಬೆಂಗಳೂರು ನೆಲಮಂಗಲ
ಪರಿಸರದ ನಿವಾಸಿಗಳಾದ ಪ್ರಶಾಂತ್ (25), ನವೀನ್ (30), ರಮೇಶ್ (25), ಮನೋಜ್ (26) ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ನೆಲ್ಯಾಡಿ ಹೊರ ಠಾಣಾ ಪೊಲೀಸ್ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.