ಬೆಂಗಳೂರು: ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಬಂದ ಕಾರು ಚಾಲಕ ಬುಲೆಟ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ವೈಟ್‌ಫೀಲ್ಡ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವರ್ತೂರು ನಿವಾಸಿ ಪ್ರಭು ತಮಿಳುಸೆಲ್ವನ್(30) ಮೃತ ಸವಾರ. ಘಟನೆಯಲ್ಲಿ ಹಿಂಬದಿ ಸವಾರ ಅಚಿತ್‌ಗೌಡ(23) ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಕೃತ್ಯ ಎಸಗಿದ ಕಾರು ಚಾಲಕ, ರಾಮನಗರ ಮೂಲದ ತಿಮ್ಮರಾಜು(25) ಎಂಬಾತನನ್ನು ಬಂಧಿಸಲಾಗಿದೆ.
ತಮಿಳುನಾಡು ಮೂಲದ ಪ್ರಭು ತಮಿಳುಸೆಲ್ವನ್ ಹತ್ತಾರು ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದು, 5 ವರ್ಷಗಳಿಂದ ಮುಂಬೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳಿಂದ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರು. ಶುಕ್ರವಾರ ತಡರಾತ್ರಿ ಸ್ನೇಹಿತ ಅಚಿತ್‌ಗೌಡ ಜತೆ ಇಂದಿರಾನಗರಕ್ಕೆ ಬಂದಿದ್ದ ಪ್ರಭು, ತಡರಾತ್ರಿ 1 ಗಂಟೆಗೆ ಇಬ್ಬರು ಕ್ಯಾಬ್‌ನಲ್ಲಿ ವರ್ತೂರಿನ ಮನೆಗೆ ಹೋಗಿದ್ದಾರೆ. ಬಳಿಕ ಇಬ್ಬರು ಬುಲೆಟ್‌ನಲ್ಲಿ ಜಾಲಿರೈಡ್‌ಗೆ ಹೋಗಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.
ಮತ್ತೂಂದೆಡೆ ವರ್ತೂರು ಕೊಡಿಯಿಂದ ಬರುತ್ತಿದ್ದ ಕಾರು ಚಾಲಕ ತಿಮ್ಮರಾಜು, ಯಾವುದೇ ಸೂಚನೆ ನೀಡದೆ ಏಕಾಏಕಿ ಬಲ ತಿರುವು ಪಡೆದುಕೊಂಡಿದ್ದು, ವರ್ತೂರು ಮಸೀದಿ ಬಳಿ ಎದುರು ಬಂದ ಬುಲೆಟ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕೆಳಗೆ ಬಿದ್ದ ಬೈಕ್ ಸವಾರ ಪ್ರಭು ತಲೆ ಮತ್ತು ದೇಹದ ಇತರೆ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದಿತ್ತು. ಹಿಂಬದಿ ಸವಾರ ಅಚಿತ್‌ಗೌಡನಿಗೂ ಗಾಯಗಳಾಗಿತ್ತು. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ನೀಡಿದ ವೈದ್ಯರು ಪ್ರಭು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದಾರೆ.
ಹಿಂಬದಿ ಸವಾರ ಅಚಿತ್‌ಗೌಡ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾರೆ. ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ಕಾರು ಚಾಲನೆ ಆರೋಪದಡಿ ಕಾರು ಚಾಲಕ ತಿಮ್ಮರಾಜುನನ್ನು ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ವೈಟ್‌ಫೀಲ್ಡ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.