Advertisement

Fraud: ವಾಟ್ಸ್‌ಆ್ಯಪ್‌ ಹೂಡಿಕೆ ಸಂದೇಶ ನಂಬಿ 1.5 ಕೋಟಿ ಕಳೆದುಕೊಂಡ ಉದ್ಯಮಿ!

11:02 AM Oct 16, 2024 | Team Udayavani |

ಬೆಂಗಳೂರು: ಉದ್ಯಮಿಯೊಬ್ಬರಿಂದ 1.5 ಕೋಟಿ ರೂ. ಸುಲಿಗೆ ಮಾಡಿದ್ದ ಖಾಸಗಿ ಬ್ಯಾಂಕ್‌ನ ಮ್ಯಾನೇಜರ್‌ ಮತ್ತು ಖಾತೆದಾರರು ಸೇರಿ 8 ಮಂದಿಯನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

Advertisement

ನಾಗರಬಾವಿಯ ಆಕ್ಸಿಸ್‌ ಬ್ಯಾಂಕ್‌ನ ಮ್ಯಾನೇಜರ್‌ ಕಿಶೋರ್‌ ಸಾಹು (32), ಸೇಲ್ಸ್‌ ಮ್ಯಾನೇಜರ್‌ ಮನೋಹರ್‌(32), ಸೇಲ್ಸ್‌ ಎಕ್ಸಿಕ್ಯೂಟಿವ್‌ಗಳಾದ ಕಾರ್ತಿಕ್‌(30) ಮತ್ತು ರಾಕೇಶ್‌ (30) ಮತ್ತು ಚಿಕ್ಕಮಗಳೂರು ಮೂಲದ ಲಕ್ಷ್ಮೀಕಾಂತ್‌ (40), ರಾಘುರಾಜು (32), ಕೆಂಗೆಗೌಡ (33) ಹಾಗೂ ಮಾಲಾ(32) ಬಂಧಿತರು. ಆರೋಪಿಗಳಿಂದ 28 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಪ್ರಕರಣ ಮಾಸ್ಟರ್‌ ಮೈಂಡ್‌ ಸೇರಿ 9 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆರೋಪಿಗಳ ಪೈಕಿ ಮನೋಹರ್‌ ಚಿಕ್ಕಮಗಳೂರು ಮೂಲದವನಾಗಿದ್ದು, ಈತನ ಬಾಲ್ಯ ಸ್ನೇಹಿತ ದುಬೈನಲ್ಲಿ ವಾಸವಾಗಿದ್ದಾನೆ. ಆತನ ಸೂಚನೆ ಮೇರೆಗೆ ಮನೋಹರ್‌, ತನ್ನ ಊರಿನ ಮಾಲಾ ಸೇರಿ ನಾಲ್ವರಿಂದ ಆಧಾರ್‌ ಕಾರ್ಡ್‌ ಹಾಗೂ ಇತರೆ ಗುರುತಿನ ಚೀಟಿ ಪಡೆದುಕೊಂಡು, ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಲ್ಲಿ ಖಾತೆಗಳ ತೆರೆದಿದ್ದ. ಬೆಂಗಳೂರು ಸೇರಿ ದೇಶಾದ್ಯಂತ ಸೈಬರ್‌ ವಂಚನೆ ಮಾಡುತ್ತಿದ್ದ ಹಣವನ್ನು ಈ ಖಾತೆಗಳಿಗೆ ಹಾಕಿಸಿಕೊಳ್ಳುತ್ತಿದ್ದರು. ಖಾತೆದಾರರಿಗೆ ಇಂತಿಷ್ಟು ಕಮಿಷನ್‌ ನೀಡುತ್ತಿದ್ದರು. ಇನ್ನು ಒಂದು ವಹಿವಾಟಿಗೆ ಮ್ಯಾನೇಜರ್‌, ಸೇಲ್ಸ್‌ ಎಕ್ಸಿಕ್ಯೂಟಿವ್‌ಗಳಿಗೆ ಇಂತಿಷ್ಟು  ಕಮಿಷನ್‌ ನೀಡಲಾಗುತ್ತಿತ್ತು ಎಂಬುದು ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದರು.

ಬ್ಯಾಂಕ್‌ ಅಧಿಕಾರಿಗಳೇ ಭಾಗಿ: ಯಲಹಂಕ ನಿವಾಸಿಯಾಗಿರುವ ದೂರುದಾರರಿಗೆ ವಿಐಪಿ ಷೇರು ಟ್ರೇಡಿಂಗ್‌ನಲ್ಲಿ ಹಣ ಹೂಡಿದರೆ ದ್ವಿಗುಣ ಮಾಡುವುದಾಗಿ ವಿದೇಶದಲ್ಲಿರುವ ಕೆಲವರು ವಾಟ್ಸ್‌ ಆ್ಯಪ್‌ ಸಂದೇಶ ಕಳುಹಿಸಿದ್ದಾರೆ. ಅದನ್ನು ನಂಬಿದ ದೂರುದಾರ ಮೊದಲಿಗೆ 50 ಸಾವಿರ ರೂ. ಹೂಡಿದ್ದು, ಹಣ ದ್ವಿಗುಣವಾಗಿದೆ ಎಂದು ವಾಟ್ಸ್‌ ಆ್ಯಪ್‌ ಸಂದೇಶ ಕಳುಹಿಸಿದ್ದಾರೆ. ನಂತರ ಹಂತ-ಹಂತವಾಗಿ ಕಳೆದ ಮಾರ್ಚ್‌ನಿಂದ ಜೂನ್‌ವರೆಗೆ 1.50 ಕೋಟಿ ರೂ. ಹೂಡಿಕೆ ಮಾಡಿಕೊಂಡಿದ್ದಾರೆ. ಬಳಿಕ ವಿಐಪಿ ಟ್ರೇಡಿಂಗ್‌ನಲ್ಲಿ ನಿಮ್ಮ ಷೇರು 28 ಕೋಟಿ ರೂ. ಆಗಿದ್ದು, ಅದನ್ನು ಪಡೆಯಲು 75 ಲಕ್ಷ ರೂ. ಪಾವತಿಸಬೇಕೆಂದು ಸಂದೇಶ ಕಳುಹಿಸಿದ್ದಾರೆ. ಅದರಿಂದ ಅನುಮಾನಗೊಂಡ ದೂರುದಾರರು ಕೂಡಲೇ ಸೈಬರ್‌ ಠಾಣೆಗೆ ದೂರು ನೀಡಿದ್ದು,  ಬಳಿಕ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಬ್ಯಾಂಕ್‌ ಅಧಿಕಾರಿಗಳೇ ವಂಚನೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಆಯುಕ್ತರು ಹೇಳಿದರು.

ವಂಚಕರ ವಿರುದ್ಧ 254 ಕೇಸ್‌, 97 ಕೋಟಿ ರೂ. ವಹಿವಾಟು:

Advertisement

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸೈಬರ್‌ ಪೊಲೀಸರು, ಹಣ ವರ್ಗಾವಣೆ ಯಾದ ಬ್ಯಾಂಕ್‌ ಖಾತೆಗಳ ಪರಿಶೀಲಿಸಿದಾಗ ಎನ್‌ಸಿಆರ್‌ ಪೋರ್ಟಲ್‌ನಲ್ಲಿ ವಂಚಕರ ವಿರುದ್ಧ 254 ಪ್ರಕರಣ ದಾಖಲಾಗಿದ್ದು, ಸುಮಾರು 97 ಕೋಟಿ ರೂ. ಈ ಖಾತೆಗಳಿಂದಲೇ ವಹಿವಾಟು ನಡೆದಿರುವುದು ಕಂಡುಬಂದಿತ್ತು. ನಾಗರಭಾವಿಯಲ್ಲಿರುವ ಆಕ್ಸಿಸ್‌ ಬ್ಯಾಂಕ್‌ಗೆ ಹೋಗಿ ಪರಿಶೀಲಿಸಿದಾಗ ಆರೋಪಿತ ಖಾತೆದಾರರಿಂದ, ಬೆಂಗಳೂರು ನಗರದಲ್ಲಿ ವಾಸ ಹಾಗೂ ಬಿಸೆನೆಸ್‌ ನಡೆಸುತ್ತಿರುವ ದಾಖಲಾತಿಯನ್ನು ಬ್ಯಾಂಕ್‌ ಸಿಬ್ಬಂದಿ ಪಡೆದುಕೊಂಡಿಲ್ಲ. ಅಲ್ಲದೆ ಇದೇ ಶಾಖೆಯಲ್ಲಿ ಇನ್ನೂ ನಾಲ್ಕು ಖಾತೆಗಳು ಸೇರಿ ಒಟ್ಟು ಆರು ಖಾತೆಗಳಿಂದ ಸುಮಾರು 97 ಕೋಟಿ ರೂ. ವಹಿವಾಟು ನಡೆದಿರುವುದು ಕಂಡುಬಂದಿದೆ. ಬಳಿಕ ತಾಂತ್ರಿಕ ತನಿಖೆ ನಡೆಸಿದಾಗ ಬ್ಯಾಂಕ್‌ ಅಧಿಕಾರಿ-ಸಿಬ್ಬಂದಿ ಭಾಗಿಯಾಗಿರುವುದು ಪತ್ತೆಯಾಗಿದೆ. ಕೂಡಲೇ ಮ್ಯಾನೆಜರ್‌ ಕಿಶೋರ್‌ ಸಾಹು,  ಸೇಲ್ಸ್‌ ಮ್ಯಾನೆಜರ್‌ ಮನೋಹರ್‌, ಸೇಲ್ಸ್‌ ಎಕ್ಸಿಕ್ಯೂಟಿವ್‌ಗಳಾದ ಕಾರ್ತಿಕ್‌ ಮತ್ತು ರಾಕೇಶ್‌ರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇಡೀ ವಂಚನೆಯ ಜಾಲ ಬಯಲಾಗಿದೆ. ತಲೆಮರೆಸಿಕೊಂಡಿರುವ ವಂಚಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್‌ ಆಯುಕ್ತ ಬಿ.ದಯಾನಂದ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next