ಬೆಂಗಳೂರು: ಮಹಿಳಾ ಉದ್ಯಮಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿದ ಮೂವರು ಮಹಿಳೆಯರು ಸೇರಿ ಐವರನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಾಲಹಳ್ಳಿಯ ಜಯರಾಮ್ (48), ಸಾದಿಕ್ (37), ಫರೀದಾ(36), ಅಸ್ಮಾ(34), ನಜ್ಮಾ(32) ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳು ಅ.1ರಂದು ನಿವೃತ್ತ ಸೇನಾಧಿಕಾರಿ ವಿಜಯ್ ಎಂಬವರ ಪತ್ನಿ ಪಂಕಜಾ ಎಂಬವರನ್ನು ಅಪಹರಿ ಸಿದ್ದರು. ಪಂಕಜಾ ಎಂಇಎಸ್ ರಿಂಗ್ ರಸ್ತೆಯಲ್ಲಿರುವ ಡಿಎಂ ರೆಸಿಡೆನ್ಸಿ ಹೋಟೆಲ್ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಅ.1ರಂದು ಮಧ್ಯಾಹ್ನ 12 ಗಂಟೆಗೆ 8 ರಿಂದ 10 ಮಂದಿ ಬುರ್ಖಾ ಧರಿಸಿದ್ದ ಮಹಿಳೆಯರು ಸೇರಿ 20ಕ್ಕೂ ಅಧಿಕ ಮಂದಿ ಹೋಟೆಲ್‌ಗೆ ಬಂದು, ಕೊಠಡಿ ಬೇಕೆಂದಿದ್ದಾರೆ. ಆಗ ಪಂಕಜಾ, ಗುರುತಿನ ಚೀಟಿ ಕೊಡುವಂತೆ ಕೇಳಿದ್ದಾರೆ. ಆರೋಪಿಗಳ ಗುರುತಿನ ಚೀಟಿ ನೋಡುತ್ತಿದ್ದಂತೆ ಪಂಕಜಾ, ಸ್ಥಳೀಯರಿಗೆ ಕೊಠಡಿ ಕೊಡುವುದಿಲ್ಲ ಎಂದಿದ್ದಾರೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಅದು ವಿಕೋಪಕ್ಕೆ ಹೋಗಿದ್ದು, ಹೋಟೆಲ್‌ನ ಗಾಜುಗಳನ್ನು ಆರೋಪಿಗಳು ಧ್ವಂಸ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ ಬುರ್ಖಾ ಧರಿಸಿದ್ದ ಕೆಲ ಮಹಿಳೆಯರು ಪಂಕಜಾರನ್ನು ಸುತ್ತುವರಿದು ಸಿನಿಮೀಯ ರೀತಿಯಲ್ಲಿ ಆಕೆಯನ್ನು ಆಟೋದಲ್ಲಿ ಅಪಹರಿಸಿದ್ದಾರೆ. ಆಟೋದಲ್ಲಿ ಹೋಗುತ್ತಿದ್ದಂತೆ ರಕ್ಷಣೆಗಾಗಿ ಪಂಕಜಾ ಜೋರಾಗಿ ಕೂಗಾಡಿದ್ದಾರೆ. ಅದೇ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೊಲೀಸರು ಆಟೋ ತಡೆದು ವಿಚಾರಿಸಿದ್ದು, ಬಳಿಕ ಪಂಕಜಾ ಹಾಗೂ ಆರೋಪಿಗಳನ್ನು ಆಟೋ ಸಮೇತ ಜಾಲಹಳ್ಳಿ ಠಾಣೆಗೆ ಕರೆದೊಯ್ದಿದ್ದಾರೆ.
ಘಟನೆ ಸಂಬಂಧ ಪಂಕಜಾ ಅಪಹರಣದ ದೂರು ನೀಡಿದ್ದರು. ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಅಪಹರಣಕ್ಕೊಳಗಾದ ಮಹಿಳೆಯಿಂದ ಡ್ರಾಮಾ?: ಮತ್ತೂಂದೆಡೆ ವಿಚಾರಣೆಯಲ್ಲಿ ಪಂಕಜಾ ಬಳಿ ಹೋಟೆಲ್ ಮಾಲೀಕರು ಎಂಬುದಕ್ಕೆ ಯಾವುದೇ ದಾಖಲೆಗಳು ಇಲ್ಲ. ಹೀಗಾಗಿ ಹೋಟೆಲ್ ದಾಖಲೆ ಸಲ್ಲಿಸಲು ಪಂಕಜಾಗೆ ಗಡುವು ನೀಡಲಾಗಿದೆ. ಈ ಮಧ್ಯೆ ಪಂಕಜಾರ ವರ್ತನೆಯಲ್ಲಿ ಗೊಂದಲಗಳಿವೆ. ಆಕೆ ಡ್ರಾಮಾ ಸೃಷ್ಟಿಸಿದ್ದಾರಾ? ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೂಂದೆಡೆ ಕೆಲ ತಿಂಗಳಿಂದ ಹೋಟೆಲ್‌ನಲ್ಲಿ ಪಂಕಜಾ ವಾಸವಾಗಿದ್ದರು. ಬಳಿಕ ಮಾಲೀಕರಂತೆ ಬಿಂಬಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಗಳು ಆರೋಪಿಸುತ್ತಿದ್ದಾರೆ. ತನಿಖೆ ಮುಂದು ವರಿದಿದೆ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.