ಕಾಸರಗೋಡು: ನಗರದ ಕರಂದ ಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಶೋಕ ನಗರಕ್ಕೆ ಹೋಗುವ ರಸ್ತೆ ಬಳಿ ಮೇಲ್ಸೇತುವೆ ಮುರಿದು ಬಿದ್ದು 23 ದಿನಗಳೇ ಕಳೆದರೂ ಇನ್ನೂ ದುರಸ್ತಿಯಾಗದಿರುವುದರಿಂದ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಜುಲೈ 28 ರಂದು ಮುಂಜಾನೆ ಮಂಗಳೂರಿನತ್ತ ಸರಕು ಹೇರಿಕೊಂಡು ಸಾಗುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಮೇಲ್ಸೇತುವೆಯ ಭದ್ರತಾ ಬೇಲಿಗೆ ಢಿಕ್ಕಿ ಹೊಡೆದು ಕೆಳಕ್ಕೆ ಉರುಳಿತ್ತು. ಈ ಸಂದರ್ಭದಲ್ಲಿ ಕೆಳಕ್ಕುರುಳಿದ ಲಾರಿ ಭದ್ರತಾ ಬೇಲಿಯನ್ನು ಕೆಡವಿತ್ತು. ಅದೃಷ್ಟ ವಶಾತ್ ಲಾರಿ ಸಿಬಂದಿ ಸಂಭಾವ್ಯ ದುರಂತದಿಂದ ಸಣ್ಣ ಪುಟ್ಟ ಗಾಯ ಗಳೊಂದಿಗೆ ಪಾರಾಗಿದ್ದರು. ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯಲ್ಲಿ ನಿರ್ಮಿ ಸಿದ್ದ ಕಬ್ಬಿಣದ ಸುರಕ್ಷಾ ಬೇಲಿಯನ್ನು ನುಚ್ಚುನೂರುಗೊಳಿಸಿ 23 ದಿನಗಳೇ ಕಳೆದು ಹೋದರೂ ಇನ್ನೂ ದುರಸ್ತಿಗೊಳಿಸಲು ಮುಹೂರ್ತ ಬಂದಿಲ್ಲ !
ಕಾಸರಗೋಡಿನಿಂದ ಮಂಗಳೂರಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಂದಕ್ಕಾಡ್ ಅಶ್ವಿನಿ ನಗರದಲ್ಲಿ ಅಶೋಕ ನಗರಕ್ಕೆ ಸಾಗುವ ರಸ್ತೆಯ ಮೇಲೆ ನಿರ್ಮಿಸಿದ ಮೇಲ್ಸೇತುವೆಯ ಭದ್ರತಾ ಬೇಲಿ ಮುರಿದು ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಮತ್ತು ಪಾದಚಾರಿ ಗಳಿಗೆ ಅಪಾಯ ತಪ್ಪಿದ್ದಲ್ಲ. ವಾಹನಗಳು ನಿಯಂತ್ರಣ ತಪ್ಪಿದರೆ ಅಶೋಕನಗರಕ್ಕೆ ಸಾಗುವ, ಸುಮಾರು 20 ಅಡಿ ಆಳದಲ್ಲಿ ರುವ ಕಂದಕಕ್ಕೆ ಬೀಳುವುದು ಖಚಿತವಾ ಗಿದ್ದು, ಅಪಾಯವನ್ನು ಕೈಬೀಸಿ ಕರೆಯು ವಂತಿದೆ. ರಸ್ತೆಯ ಬದಿಯಲ್ಲಿ ಸಾಗಲು ಪಾದಚಾರಿಗಳಿಗೆ ಸ್ಥಳಾವಕಾಶದ ಕೊರತೆ ಯಿದ್ದು, ಪಾದಚಾರಿಗಳು ಜೀವವನ್ನು ಕೈಯಲ್ಲೇ ಹಿಡಿದುಕೊಂಡು ಹೋಗ ಬೇಕಾದ ಪರಿಸ್ಥಿತಿ ಇದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನಾ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ವಾಹನಗಳ ಸುರಕ್ಷೆಗೆ ಅಗತ್ಯವಾಗಿರುವ ಭದ್ರತಾ ಬೇಲಿ ಮುರಿದು ಬಿದ್ದರೂ ಇನ್ನೂ ದುರಸ್ತಿಗೆ ಕ್ರಮ ತೆಗೆದುಕೊಳ್ಳದಿರುವುದು ಅವಗಣನೆಗೆ ಸ್ಪಷ್ಟ ಉದಾಹರಣೆಯಾ ಗಿದೆ. ಕಾಸರಗೋಡಿನಿಂದ ಮಂಗಳೂರಿಗೆ ಸಾಗುವಾಗ ಹಲವೆಡೆ ಸೇತುವೆಗಳಿದ್ದು. ಈ ಪೈಕಿ ಕೆಲವು ಸೇತುವೆಗಳಲ್ಲಿನ ಭದ್ರತಾ ಬೇಲಿ ಮುರಿದು ಬಿದ್ದು ಕೆಲವು ತಿಂಗಳುಗಳೇ ಕಳೆದಿದ್ದರೂ ಅವುಗಳನ್ನು ದುರಸ್ತಿ ಮಾಡಿಲ್ಲ.
ಕಾಸರಗೋಡು ನಗರದ ಈ ಮೇಲ್ಸೇತುವೆ ಕೆಳಭಾಗದಿಂದ ಅಶೋಕ ನಗರಕ್ಕೆ ನೂರಾರು ಮಂದಿ ಸಾಗುತ್ತಿದ್ದು, ವಾಹನಗಳು ಮತ್ತೆ ಈ ಪ್ರದೇಶದಲ್ಲಿ ಅಪಘಾತಕ್ಕೆ ಕಾರಣವಾದರೆ ದೊಡ್ಡ ದುರಂತವಾಗಬಹುದು. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಸಂಬಂಧಪಟ್ಟವರು ಎಚ್ಚೆತ್ತು ಮೇಲ್ಸೇತುಗೆ ಭದ್ರತಾ ಬೇಲಿ ನಿರ್ಮಿಸಿ ಸಂಭವನೀಯ ದುರಂತವನ್ನು ತಪ್ಪಿಸಬೇಕಾಗಿದೆ. ಇದಕ್ಕೆ ಅಧಿಕಾರಿಗಳು ಇಚ್ಛಾಶಕ್ತಿಯನ್ನು ತೋರಬೇಕಾಗಿದೆ.
ಕೆಲವು ವರ್ಷಗಳ ಹಿಂದೆ ಇದೇ ಮೇಲ್ಸೇತುವೆಯಿಂದ ಬಸ್ಸೊಂದು ಇನ್ನೊಂದು ಮಗ್ಗುಲಿಗೆ ತಿರುಗಿ 20 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿತ್ತು. ಈ ಸಂದರ್ಭದಲ್ಲಿ ಅಲ್ಲಿದ್ದ ಹಸುವೊಂದು ಬಸ್ಸಿನಡಿಗೆ ಸಿಲುಕಿ ಸಾವಿಗೀಡಾಗಿತ್ತು.