ಕಿಕ್ಕೇರಿ: ವರಣನ ಆರ್ಭಟಕ್ಕೆ ತತ್ತರಿಸಿರುವ ಜನತೆ ಮತ್ತಷ್ಟು ತತ್ತರಿಸಿದ್ದು ಬದುಕನ್ನು ಕಳೆದು ಕೊಳ್ಳುವಂತಾಗಿದೆ.
ವಾರದ ಹಿಂದೆ ಜೋರು ಮಳೆ, ಹಲವು ಕೆರೆಗಳ ನೀರು ಹೋಬಳಿಯ ಮಾದಿಹಳ್ಳಿ ಹಳ್ಳದಲ್ಲಿ ಹರಿದು ಸಾಕಷ್ಟು ತೆಂಗು, ಅಡಕೆ ಮರಗಳು ಬುಡ ಮೇಲಾಗಿದ್ದವು. ಈಗ, ಹಳ್ಳದ ನೀರಿನಿಂದ ಸುಮಾರು 100ಅಡಿ ಉದ್ದದ ಸೇತುವೆ ಕೊಚ್ಚಿ ಹೋಗಿದೆ. ಮೊದಲೇ ಈ ಪ್ರದೇಶದಲ್ಲಿ ಮರಳು ಮಾಫಿಯಾ ನಡೆದು ಸೇತುವೆ ರಕ್ಷಣೆಗೆ ಆಪತ್ತು ಬಂದಿತ್ತು. ಜೋರಾಗಿ ಹಳ್ಳಕ್ಕೆ ನೀರು ನುಗ್ಗಿದ ರಭಸಕ್ಕೆ 25ಅಡಿ ಎಷ್ಟು ಎತ್ತರಕ್ಕೆ ನಿರ್ಮಿಸಲಾಗಿದ್ದ ಸೇತುವೆ ಸಂಪೂರ್ಣ ಹಾಳಾಗಿದೆ.
ಸಂಪರ್ಕ ಸೇತುವೆ ಕಡಿತ: ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದ್ದು ತದ ನಂತರದ ಪ್ರೌಢಶಾಲೆ, ಕಾಲೇಜಿಗೆ ಈ ಮಾರ್ಗದಲ್ಲಿ ಹಲವು ಮಕ್ಕಳು ಕಾಲ್ನಡಿಗೆ ಯಲ್ಲಿ ನಡೆದುಕೊಂಡು ಹೋಬಳಿ ಕೇಂದ್ರ ಸೇರುತ್ತಿದ್ದರು. ಸಂಪರ್ಕ ಸೇತುವೆ ಕಡಿತದಿಂದ ಮಕ್ಕಳು ಶಾಲೆಗೆ ಬಾರದಂತಾಗಿದೆ. ಕಷ್ಟಪಟ್ಟು ಶಾಲಾ ಕಾಲೇಜಿಗೆ ತೆರಳ ಬೇಕೆಂದರೆ ದೂರದ ಸಾಸಲು ಮಾರ್ಗ ಅಥವಾ ಕಳ್ಳನಕೆರೆ, ಸೊಳ್ಳೇಪುರ ಮಾರ್ಗ ವಾಗಿ ಹೋಬಳಿ ಕೇಂದ್ರಕ್ಕೆ ಬರಬೇಕಿದೆ.
ಶೋಚನೀಯ: ಈ ಮಾರ್ಗದ ರಸ್ತೆಗಳು ಕೆಸರುಗುಂಡಿಯಾಗಿದ್ದು ಗುಂಡಿ ಇಲ್ಲದ ರಸ್ತೆ ಹುಡುಕಾಡಬೇಕಿದೆ. ಖಾಸಗಿ ವಾಹನ ಈ ಮಾರ್ಗವಾಗಿ ಬರಲು ಹಿಂಜರಿಯು ವುದರ ಜತೆಗೆ ದುಪ್ಪಟ್ಟು ಹಣ ಕೇಳುವುದ ರಿಂದ ಹಳ್ಳಿಗರ ಬದುಕು ಶೋಚನೀಯ ವಾಗಿದೆ. ವಯೋವೃದ್ಧರು, ಮಳೆಯರು, ಬಾಣಂತಿಯರ ಸ್ಥಿತಿ ಕೇಳುವವರಿಲ್ಲವಾಗಿದೆ. ಬೂನಹಳ್ಳಿ, ಮಾದಿಹಳ್ಳಿ ರೈತರ ಜಮೀನು ಹಾಳಾಗಿದೆ. ದೇವರಹಳ್ಳಿ, ವಡಕಹಳ್ಳಿ, ಅಂಕನಹಳ್ಳಿ ರೈತರ ಜಮೀನು ಈ ಪ್ರದೇಶ ದಲ್ಲಿದ್ದು ಜಮೀನಿಗೆ ತೆರಳಲು ಸಾಧ್ಯವಾಗದೆ, ಜಮೀನಿನಲ್ಲಿರುವ ನೀರು ಹೊರ ಹಾಕಲು ಈ ಸ್ಥಳಕ್ಕೆ ರೈತರು ತೆರಳಲಾರದೆ ಜೋಳ, ಭತ್ತ, ರಾಗಿ ಪೈರು ಕೊಳೆಯುತ್ತಿವೆ.
ಈ ಸೇತುವೆ ಮಾರ್ಗದಿಂದ ಬೈಕ್‌ನಲ್ಲಿ ಹೋಬಳಿ ಕೇಂದ್ರಕ್ಕೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದೆ. ಈಗ, ಸೇತುವೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಈಗ, ಹತ್ತಾರು ಕಿ.ಮೀ. ಬಳಸಿಕೊಂಡು ಹೋಗಬೇಕಿದೆ. –
ಬಾಲರಾಜು, ಮಾದಿಹಳ್ಳಿ ರೈತ
ನಮ್ಮ ಜಮೀನು ಮಾದಿಹಳ್ಳಿಯಲ್ಲಿದ್ದು, ಬಾಳೆ, ತೆಂಗು, ಅಡಕೆ ಬೆಳೆಯಲಾಗಿದೆ. ಆದರೆ, ಮಳೆ ಹಿನ್ನೆಲೆ ಜಮೀನಿನಲ್ಲಿ ನೀರು ತುಂಬಿದೆ. ನೀರು ಹೊರತೆಗೆಯಲು ಬೂನಹಳ್ಳಿಯಿಂದ ಮಾದಿಹಳ್ಳಿಗೆ ಹೋಗಲು ಸೇತುವೆ ಇಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕಿದೆ.
– ಕಾಳೇಗೌಡ, ರೈತ
ಸೇತುವೆ ಕೊಚ್ಚಿ ಹೋಗಿದ್ದು, ಹತ್ತಾರು ಗ್ರಾಮಸ್ಥರ ಓಡಾಡಕ್ಕೆ ತೊಂದರೆಯಾಗಿದೆ. ಮೇಲಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಲಾಗಿದ್ದು. ತ್ವರಿತವಾಗಿ ಸೇತುವೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು.
– ಗುರುಪ್ರಸಾದ್, ಎಇಇ. ಕಾಡಾ ಕಿಕ್ಕೇರಿ
– ತ್ರಿವೇಣಿ