ಹುಬ್ಬಳ್ಳಿ: ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದರೆ ಉಜ್ವಲ ಭವಿಷ್ಯ ಹೊಂದಬಹುದಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ನಿರ್ದೇಶಕ ಬಿ.ಎಂ. ಪಾಟೀಲ ಹೇಳಿದರು.
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಗುರುವಾರ ಬ್ರಹ್ಮಕುಮಾರಿ ಈಶ್ವರೀಯ ವಿವಿ ಆಯೋಜಿಸಿದ್ದ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭಿಸುತ್ತಿವೆ. ಎಲ್ಲ ಕ್ರೀಡೆಗಳಿಗೆ ಪ್ರೋತ್ಸಾಹ ಸಿಗುತ್ತಿರುವುದರಿಂದ ವಿಶ್ವಮಟ್ಟದಲ್ಲಿ ನಮ್ಮ ದೇಶದ ಪಟುಗಳು ಮಿಂಚುತ್ತಿದ್ದಾರೆ ಎಂದರು.
ಮಕ್ಕಳಿಗೆ ಹಾಕಿಪಟು ಧ್ಯಾನಚಂದ್ ಆದರ್ಶವಾಗಬೇಕು. ದೇಶದ ಕೀರ್ತಿ ಪತಾಕೆ ಹಾರಿಸಬೇಕೆಂಬ ಹುಮ್ಮಸ್ಸು ಅವರ ಸಾಧನೆಗೆ ಕಾರಣವಾಯಿತು. ಹಾಕಿ ಮಾಂತ್ರಿಕ ಎಂದೇ ಖ್ಯಾತಿ ಪಡೆದ ಧ್ಯಾನಚಂದ್ ಅವರ ಸಾಧನೆಯನ್ನು ಗೌರವಿಸುವ ಉದ್ದೇಶದಿಂದ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಪರಿಶ್ರಮ, ಶಿಸ್ತು, ಕೌಶಲ್ಯವಿದ್ದರೆ ಕ್ರೀಡಾ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ ಮಾಡಬಹುದಾಗಿದೆ ಎಂದು ಹೇಳಿದರು.
ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲೇಶಪ್ಪ ಕುರಗೋಡಿ ಮಾತನಾಡಿ, ಸಾಧನೆಗೆ ಪರಿಶ್ರಮ ಕಾರಣವೇ ಹೊರತು ಅದೃಷ್ಟವಲ್ಲ. ಅದೃಷ್ಟ ಎಂದು ಕುಳಿತರೆ ಏನೂ ಆಗುವುದಿಲ್ಲ. ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಡಾ| ಬಸವರಾಜ ರಾಜಋಷಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಪಟುಗಳು ದೈಹಿಕವಾಗಿ ಸದೃಢವಾಗಿದ್ದರೆ ಸಾಲದು, ಮಾನಸಿಕವಾಗಿಯೂ ಸದೃಢತೆ ಅವಶ್ಯ. ಈ ದಿಸೆಯಲ್ಲಿ ರಾಜಯೋಗ ಮನಸಿನ ಏಕಾಗ್ರತೆ ಹೆಚ್ಚಿಸಲು, ಮನೋಬಲ ವೃದ್ಧಿಸುವಲ್ಲಿ ಪೂರಕವಾಗಲಿದೆ ಎಂದು ಹೇಳಿದರು.
ಡಾ| ಐ.ಎಂ. ಮಕ್ಕುಭಾಯಿ, ಜಾರ್ಜ್ ಮಾಣಿಕ್ಯಂ, ರಾಜೇಂದ್ರ ಸಿಂಗ್ ಮಾತನಾಡಿದರು. ರಾಜಯೋಗಿನಿ ನಿರ್ಮಲಾ ಇದ್ದರು. ಕ್ರೀಡಾ ಕ್ಷೇತ್ರದ ಸಾಧಕರಾದ ಅಭಿಷೇಕ ಹೊಸಕೇರಿ, ಸನಾ ಮಳಗಿ, ತನಿಷಾ ಗೋಟಡಕೆ, ಡಾ| ನಾಜಿಮ್ ಜಾವೇದ ಖಾನ್, ಜ್ಯೋತಿ ಸಣ್ಣಕ್ಕಿ, ತಬಸ್ಸುಮ್ ಖಾಜಿ, ಕೃತಿಕಾ, ಫಾತೂಬಿ ಖನಾಲಿ, ಉದಯವಾಣಿಯ ಹಿರಿಯ ವರದಿಗಾರ ವಿಶ್ವನಾಥ ಕೋಟಿ ಸೇರಿದಂತೆ ವಿವಿಧ ಪತ್ರಿಕೆಗಳ ವರದಿಗಾರರನ್ನು ಸನ್ಮಾನಿಸಲಾಯಿತು.