ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಂತೆಯೇ ಮೋದಿ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲಾಗಿದ್ದು, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರನ್ನು ಕೈಬಿಟ್ಟು ಆ ಸ್ಥಾನಕ್ಕೆ ನಿವೃತ್ತ IAS ಅಧಿಕಾರಿ, ಸಂಸದ ಅರ್ಜುನ್ ರಾಮ್ ಮೇಘವಾಲ್ ಅವರನ್ನು ನೇಮಕ ಮಾಡಲಾಗಿದೆ. ಮೇಘವಾಲ್ ಈ ಮೊದಲು ಹೊಂದಿದ್ದ ಖಾತೆಗಳಾದ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ ಸ್ಥಾನದ ಜೊತೆಗೆ ಹೆಚ್ಚುವರಿಯಾಗಿ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಿಜಿಜು ಅವರಿಗೆ ಭೂ ವಿಜ್ಙಾನ ಸಚಿವಾಲಯದ ಖಾತೆಯನ್ನು ನೀಡಲಾಗಿದೆ.
ಯಾರು ಈ ಅರ್ಜುನ್ ರಾಮ್ ಮೇಘವಾಲ್?
ರಾಜಸ್ಥಾನದ ಬಿಕನೇರ್‌ನ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಮೇಘವಾಲ್ ತಮ್ಮ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿ, ಭೀನಾಸರ್‌ನ ಜವಾಹರ್ ಜೈನ್ ಸೆಕೆಂಡರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ವಿಶೇಷವೇನೆಂದರೆ, ಅವರು ತಮ್ಮ 8 ನೇ ತರಗತಿಯಲ್ಲಿದ್ದಾಗಲೇ ಅಂದರೆ ತಮ್ಮ 14 ವರ್ಷ ವಯಸ್ಸಿನಲ್ಲೇ ವಿವಾಹವಾಗಿದ್ದರು. ವಿವಾಹದ ಬಳಿಕ ವಿದ್ಯಾಭ್ಯಾಸ ಮುಂದುವರೆಸಿದ ಇವರು ಬಿಎ, LLB ಪದವಿಯನ್ನೂ ಪಡೆದಿದ್ದಾರೆ, ಫಿಲಿಪೈನ್ಸ್ ವಿವಿಯಿಂದ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ MBA ಪದವಿಯನ್ನೂ ಪಡೆದಿದ್ದಾರೆ.
ಸೈಕಲ್ ಪ್ರಿಯ ಮೇಘಾವಾಲ್‌ರಿಂದ ಸಂಸತ್ತಿಗೂ ಸೈಕಲ್ ಸವಾರಿ.!
ಈ ಅರ್ಜುನ್ ರಾಮ್ ಮೇಘವಾಲ್‌ರಿಗೆ ಸೈಕಲ್ ರೈಡಿಂಗ್ ಎಂದರೆ ಅಚ್ಚುಮೆಚ್ಚು. ಅವರು ಸಂಸದರಾಗಿದ್ದಾಗ ಸಂಸತ್ತಿಗೂ ಸೈಕಲ್ ತುಳಿದುಕೊಂಡೇ ಬರುತ್ತಿದ್ದರು.! 2016ರಲ್ಲಿ ಮೋದಿ ಸಂಪುಟದಲ್ಲಿ ಸಚಿವರಾದಾಗ ಸಂಸತ್ತಿಗೆ ಸೈಕಲ್ ಸವಾರಿ ನಿಲ್ಲಿಸಿದ್ದರು.
ನಿವೃತ್ತ IAS ಅಧಿಕಾರಿ ಈಗ ಕೆಂದ್ರ ಕಾನೂನು ಸಚಿವ
ರಾಜಸ್ಥಾನ ಕೇಡರ್‌ನ IAS ಅಧಿಕಾರಿಯಾಗಿದ್ದ ಅರ್ಜುನ್ ರಾಮ್ ಮೇಘವಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಸಮಾಜ ಸೇವೆಯ ಉದ್ದೇಶದಿಂದ ರಾಜಕೀಯ ರಂಗ ಪ್ರವೇಶಿಸಿದ ಇವರು 2009ರಲ್ಲಿ BJPಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
ಹೆಚ್ಚಾಗಿ ತಮ್ಮ ಕೇಸರಿ-ಹಸಿರು ಬಣ್ಣದ ರುಮಾಲಿನೊಂದಿಗೇ ಗುರುತಿಸಲ್ಪಡುವ ಮೇಘವಾಲ್ ತಮ್ಮ ರಾಜಕೀಯ ಜೀವನದಲ್ಲಿ ವಿವಿಧ ಹುದ್ದೆಗಳನ್ನು, ವಿವಿಧ ಸಲಹಾ ಸಮಿತಿಗಳ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿರ್ವಹಿಸಿದ ಗರಿಮೆಯನ್ನು ಹೊಂದಿದ್ದಾರೆ. ಅಲ್ಲದೇ ರಾಜಸ್ಥಾನ ಬಿಜೆಪಿ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ , ಲೋಕಸಭೆಯ ಮುಖ್ಯ ಸಚೇತಕರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ: DK; 27ನೇ ವರ್ಷಕ್ಕೆ ರಾಜಕೀಯ ಪ್ರವೇಶ…ಟ್ರಬಲ್ ಶೂಟರ್ ಡಿಕೆಶಿ ರಾಜಕೀಯದ ಏಳು..ಬೀಳು