ಪಣಜಿ: ಚಿಕ್ಕಪ್ಪನು 13 ವರ್ಷದ ಬಾಲಕನ್ನು 35 ಅಡಿ ಆಳದ ಬಾವಿಗೆ ಎಸೆದಿರುವ ಘಟನೆ ಮಂಗಳವಾರ ಸಂಜೆ ಗೋವಾದ ಕುಡ್ತರಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡ್ತರಿ ಪೋಲಿಸರು ಆರೋಪಿ ಬಸವರಾಜ್ ಕಾಗಿ (45) ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಬಸವರಾಜ್ ಕಾಗಿ ಮಡಗಾಂವ್ ಮೋತಿಡೊಂಗರ ಪರಿಸರದಲ್ಲಿ ವಾಸಿಸುತ್ತಿದ್ದ. ಕಾಡಿನಲ್ಲಿ ಒಂದು ಮಾವಿನ ಮರಕ್ಕೆ ಭಾರಿ ಪ್ರಮಾಣದಲ್ಲಿ ಮಾವಿನ ಹಣ್ಣಿದೆ ತೋರಿಸುತ್ತೇನೆ ಎಂದು ಆರೋಪಿ ಬಸವರಾಜ ಬಾಲಕನನ್ನು ಕರೆದುಕೊಂಡು ಹೋಗಿ ಅಲ್ಲಿದ್ದ 35 ಅಡಿ ಆಳದ ಬಾವಿಗೆ ನೂಕಿ ಪರಾರಿಯಾಗಿದ್ದ.
ಅದೃಷ್ಟವಶಾತ್ ಬಾಲಕ ಬಾವಿಯಲ್ಲಿದ್ದ ಮೆಟ್ಟಿಲುಗಳ ಸಹಾಯದಿಂದ ಮೇಲಕ್ಕೆ ಹತ್ತಿ ಮಧ್ಯರಾತ್ರಿಯ ಕತ್ತಲೆಯಲ್ಲಿ ತನ್ನ ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡಿದ. ನಂತರ ಮನೆಗೆ ಬಂದು ಎಲ್ಲರಿಗೂ ವಿಷಯ ತಿಳಿಸಿದ ನಂತರ ಪೋಲಿಸ್ ದೂರು ನೀಡಲಾಯಿತು.
ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಮರೆಸಿಕೊಂಡಿದ್ದ ಚಿಕ್ಕಪ್ಪನನ್ನು ಪೋಲಿಸರು ಬುಧವಾರ ಬಂಧಿಸಿದ್ದಾರೆ.
ಬಸವರಾಜ್ ಕಾಗಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು, ಈ ವಿಷಯ ಬಾಲಕನಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಅಕ್ರಮ ಸಂಬಂಧದ ವಿಷಯ ಬಯಲಾಗುವ ಭೀತಿಯಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಕುರಿತಂತೆ ಮಾಯಣಾ ಕುಡತರಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.