ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ದಾಳಿ ನಡೆಸಿದ ಗುಂಡುಗಳು ಸ್ಫೋಟಗೊಳ್ಳದೆ ಇನ್ನೂ ಭೂಮಿಯ ಆಳದಲ್ಲಿ ಸೇರಿವೆ. ಆದರೆ, ಇದರ ಬಗ್ಗೆ ಜನರಿಗೆ ಯಾವುದೇ ಮಾಹಿತಿ ಇಲ್ಲ.
ಕಬ್ಬಿಣದ ಉಂಡೆಯಂತಿರುವ ಈ ಗುಂಡುಗಳು ಒಂದು ವೇಳೆ ಸ್ಫೋಟಿಸಿದರೆ, ಸುಮಾರು 500 ವರ್ಷಗಳ ಕಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲ್ಲುಕಡ್ಡಿಯೂ ಬೆಳೆಯುವುದಿಲ್ಲ. ಅಷ್ಟು ತೀವ್ರತೆ ಇರುವ ಗುಂಡೊಂದು ಗುಜರಿ ಅಂಗಡಿಗೆ ಬಂದು ಬೀಳುತ್ತದೆ.
ಗುಜರಿ ಅಂಗಡಿಯಿಂದ ಲೋಡ್ ಸಾಗಿಸುವ ಲಾರಿ ಚಾಲಕ ಇಲ್ಲಿ ಕಥಾನಾಯಕ. ಇವರಿಬ್ಬರ ಪಯಣವೇ ಈ ಸಿನಿಮಾ. ಈ ಪ್ರಯತ್ನದಲ್ಲಿ ನಿರ್ದೇಶಕರಾದ ಅತೀರನ್ ಅತಿರೈ ಗೆದ್ದಿದ್ದಾರೆ. ಈ ಸಿನಿಮಾ ಯುದ್ಧವನ್ನು ಪ್ರಶ್ನಿಸುವುದಲ್ಲದೆ ಜಾತಿ ಪದ್ಧತಿಯನ್ನು ಪ್ರಶ್ನಿಸುವ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಕೆಲವು ಅಂಶಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ಲಾರಿ ಓಡಿಸಿಕೊಂಡಿರುವ ಕಥಾನಾಯಕನಿಗೂ ಮೇಲ್ಜಾತಿಯ ಕಥಾನಾಯಕಿಯ ನಡುವೆ ಇರುವ ಪ್ರೀತಿಯನ್ನು ಜಾತಿಯ ದೃಷ್ಟಿಕೋನದಲ್ಲಿ ನೋಡುವ ಕಥಾನಾಯಕಿಯ ಸಂಬಂಧಿಕರು. ತಂಗಿಯನ್ನು ತನ್ನ ಜಾತಿಯವರಿಗೇ ಕೊಟ್ಟು ಮದುವೆ ಮಾಡುವುದು ಹೆಚ್ಚುಗಾರಿಕೆ ಎಂದು ನಂಬಿದ ಅಣ್ಣ. ಆ ಗುಂಡು ಸ್ಫೋಟಗೊಂಡು ಹಲವಾರು ಮಂದಿ ಮರಣಹೊಂದಿದರೂ ಪರವಾಗಿಲ್ಲ, ಆದರೆ, ಗುಂಡನ್ನು ಯಾರೂ ಹುಡುಕಬಾರದು ಎಂಬ ಸ್ವಾರ್ಥ ಹೊಂದಿದ ಕಾರ್ಪೊರೇಟ್ ವಲಯ. ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ದಾಳಿ ನಡೆಸಿದ ಹಲವಾರು ಗುಂಡುಗಳು ಹೀಗೆ ಭೂಗರ್ಭದಲ್ಲಿ ಸೇರಿದೆ ಎಂದು ಜನರಿಗೆ ತಿಳಿಸಬೇಕು ಎಂಬ ಆಶಾವಾದದೊಂದಿಗೆ ಸಕ್ರಿಯರಾದ ಇಬ್ಬರು ಯುವತಿಯರು. ಹೀಗೆ, ಹಲವರ ದೃಷ್ಟಿಕೋನದಲ್ಲಿ ಈ ಚಿತ್ರ ಸಾಗುತ್ತದೆ.
ಶಾಂತಿಯಿಂದ ಮಾತ್ರ ನಾವು ಜಗತ್ತನ್ನು ಗೆಲ್ಲಬಹುದು. ಎರಡನೆಯ ವಿಶ್ವಯುದ್ಧದಿಂದಾದ ಪರಿಣಾಮಗಳಿಂದ ನಾವು ಹೊರಬಂದಿಲ್ಲ. ಇನ್ನು ಮೂರನೆಯ ವಿಶ್ವಯುದ್ಧ ಬೇಕೇ ಎಂಬ ಪ್ರಶ್ನೆಯನ್ನು ಪ್ರೇಕ್ಷಕನಲ್ಲಿಯೇ ಉಳಿಸುತ್ತದೆ. ಇರಂಡಂ ಉಲಗಪೋರಿನ್ ಕಡೈಸಿ ಗುಂಡು ಎಂಬ ಸಿನಿಮಾ ನನ್ನನ್ನು ಬಹುವಾಗಿ ಕಾಡಿತು.
ಪ್ರಶಾಂತ್ ಎಸ್., ಕೆಳಗೂರು