Advertisement

ಸಾವಿನ ಆಟಕ್ಕೆ ಭಾರತದಲ್ಲೂ ಬಾಲಕನೊಬ್ಬನ ಬಲಿ!

07:39 AM Aug 01, 2017 | Team Udayavani |

ಮುಂಬೈ: ರಷ್ಯಾ ಮೂಲದ “ಬ್ಲೂ ವೇಲ್‌’ ಭಾರತದಲ್ಲಿ ಮೊದಲ ಬಲಿ ಪಡೆದಿದೆ! ಮುಂಬೈನ ಪೂರ್ವ ಅಂಧೇರಿಯಲ್ಲಿ ವಾಸವಿದ್ದ 14 ವರ್ಷದ ಬಾಲಕ ಏಳಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟಿದ್ದಾನೆ. ಆನ್‌ಲೈನ್‌ನಲ್ಲಿ ನಡೆಯುವ ಈ “ಆತ್ಮಹತ್ಯೆಯ ಆಟ’, ಈಗಾಗಲೇ ರಷ್ಯಾದಲ್ಲಿ 130 ಜೀವಗಳನ್ನು ಬಲಿ ಪಡೆದಿದೆ. ಅಲ್ಲದೆ, ಇಂಗ್ಲೆಂಡ್‌,  ಅಮೆರಿಕದಲ್ಲೂ ಇದರ ಹುಚ್ಚು ತೀವ್ರವಾಗಿದ್ದು ಆಗಾಗ ಬಾಲಕರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ.

Advertisement

ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಕನ ಹೆಸರು ಮನ್‌ಪ್ರೀತ್‌ ಸಿಂಗ್‌ (14). ಶನಿವಾರ ಆತ್ಮಹತ್ಯೆ ಮಾಡಿಕೊಂಡಿರುವ ಮನ್‌ಪ್ರೀತ್‌, ಆ ದಿನ ಶಾಲೆಗೆ ಹೋಗಿದ್ದಾಗ, “ನಾನು “ಬ್ಲೂವೇಲ್‌ ಚಾಲೆಂಜ್‌’ ಗೇಮ್‌ ಆಡಬೇಕಿರುವ ಕಾರಣ ಸೋಮವಾರ ಶಾಲೆಗೆ ಬರುವುದಿಲ್ಲ’ ಎಂದು ತನ್ನ ಸಹಪಾಠಿಗಳಿಗೆ ಹೇಳಿದ್ದ. ಹಾಗೆ ಹೇಳಿ ಹೋದವನು ಅದೇ ದಿನ ಸಂಜೆ ಹೊತ್ತಿಗೆ ದುರಂತ ಅಂತ್ಯ ಕಂಡಿದ್ದಾನೆ.

ಮೂಲತಃ ರಷ್ಯಾದಲ್ಲಿ ಹುಟ್ಟಿಕೊಂಡ “ಬ್ಲೂ ವೇಲ್‌ ಸೂಸೈಡ್‌ ಚಾಲೆಂಜ್‌ ಗೇಮ್‌’ ಒಂದು ಆನ್‌ಲೈನ್‌ ಆಟವಾಗಿದ್ದು, ಆ ದೇಶದಲ್ಲಿ ಮಕ್ಕಳ ಸರಣಿ ಆತ್ಮಹತ್ಯೆಗಳಿಗೆ ಕಾರಣವಾಗಿದೆ. ಮಾತ್ರವಲ್ಲದೆ, ರಷ್ಯಾ, ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌, ಚಿಲಿ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹರಡಿರುವ ಈ ಆಟದ ನಶೆ, ಈವರೆಗೆ 180ಕ್ಕೂ ಹೆಚ್ಚು ಮಕ್ಕಳನ್ನು ಬಲಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಜೂನ್‌ ತಿಂಗಳ ಎರಡನೇ ವಾರ ರಷ್ಯಾ ಪೊಲೀಸರು 22 ವರ್ಷದ ಆರೋಪಿಯೊಬ್ಬನನ್ನು ಬಂಧಿಸಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಈ ಆಟ, ಆಟಗಾರರನ್ನು ನಿರ್ವಹಿಸುತ್ತಿದ್ದ ಈ ವ್ಯಕ್ತಿ ಯಾವ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದ ಎಂಬುದು ಈವರೆಗೆ ಪ್ರಶ್ನೆಯಾಗೇ ಉಳಿದಿದೆ. ಆದರೆ ಇಂಥದೊಂದು ಅಪಾಯಕಾರಿ ಆಟ ಭಾರತಕ್ಕೆ ಕಾಲಿರಿಸಿರುವುದು, ಆಗಲೇ ಒಂದು ಜೀವ ಬಲಿ ಪಡೆದಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.

ಮನ್‌ಪ್ರೀತ್‌ ಸಾವಿಗೆ ಬ್ಲೂ ವೇಲ್‌ ಆಟವೇ ಕಾರಣ ಎಂದು ಪೊಲೀಸರು ಖಚಿತಪಡಿಸಿಲ್ಲ. ಆದರೆ ಆತ ಬ್ಲೂ ವೇಲ್‌ ಸ್ಪರ್ಧಿಯಾಗಿದ್ದ ಎಂದು ಆತನ ಸ್ನೇಹಿತರು ಹಾಗೂ ನೆರೆ ಹೊರೆಯವರು ಹೇಳುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next