ಚಿಕ್ಕಬಳ್ಳಾಪುರ: ಒಂದಲ್ಲ ಎರಡಲ್ಲ, ಕುಡಿದು ಬಿಸಾಡಿದ್ದ ನೂರಾರು ಮದ್ಯದ ಬಾಟಲುಗಳು, ಸೇದಿ ಬಿಸಾಡಿದ ಬೀಡಿ, ಸಿಗರೇಟು, ನಿಷೇಧಿತ ಪ್ಲಾಸ್ಟಿಕ್ ನೀರಿನ ಬಾಟಲುಗಳಿಗೆ ಲೆಕ್ಕವಿಲ್ಲ. ನೋಡಿದವರಿಗೆ ಇದು ತಾಪಂ ಆವರಣವೋ ಅಥವಾ ಯಾವುದಾದರೂ ಕ್ಲಬ್ ಎನ್ನುವ ಮಟ್ಟಿಗೆ ಮದ್ಯದ ಬಾಟಲುಗಳ ರಾಶಿ ತಾಪಂ ಆವರಣದ ಭದ್ರಯತೆನ್ನು ಅಣಕಿಸುವಂತಿತ್ತು.
ಜಿಲ್ಲಾ ಕೇಂದ್ರದ ತಾಪಂ ಆವರಣದಲ್ಲಿ ಶನಿವಾರ ಸ್ಥಳೀಯ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆ ಪ್ರಯುಕ್ತ ಶ್ರಮದಾನ ನಡೆಸಲು ಆಗಮಿಸಿದ್ದ ವೇಳೆ ನಗರದಲ್ಲಿ ರಾತ್ರಿ ವೇಳೆ ಪುಂಡ ಪೋಕರಿಗಳು ಕುಡಿದು ಬಿಸಾಡಿದ್ದ ಮದ್ಯದ ಬಾಟಲುಗಳ ರಾಶಿ ರಾಶಿ ಕಂಡು ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಯಿತು.
ತಾಪಂಗೆ ನೂತನ ಇಒ ಆಗಿ ಅಧಿಕಾರ ಸ್ವೀಕರಿಸಿರುವ ಹರ್ಷವರ್ಧನ್, ತಾಪಂ ಆವರಣದ ಅವ್ಯವಸ್ಥೆ ಬಗ್ಗೆ ಕಣ್ಣಾರೆ ನೋಡಿ ಸ್ಥಳೀಯ ಹಾಸ್ಟೆಲ್ ಮಕ್ಕಳ ನೆರವಿನೊಂದಿಗೆ ಆವರಣದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರು. ಆದರೆ ಆವರಣದಲ್ಲಿ ಮದ್ಯದ ಬಾಟಲುಗಳು, ಬಿಡಿ, ಸಿಗರೇಟು ಕಡ್ಡಿಗಳು ಕಂಡು ಬಂದಿದ್ದು ಮಾತ್ರ ತಾಪಂ ಆವರಣದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳ ಬಗ್ಗೆ ಸಾಕ್ಷತ್ ದರ್ಶನ ಆಯಿತು. ಸ್ವಚ್ಛತೆಯಲ್ಲಿ ತೊಡಗಿದ್ದ ಅಧಿಕಾರಿಗಳೇ ಮುಜಗರಕ್ಕೀಡಾಗುವಂತಾಯಿತು.
ಅವ್ಯವಸ್ಥೆಗೆ ವಿದ್ಯಾರ್ಥಿಗಳ ಮುಕ್ತಿ: ಚಿಕ್ಕಬಳ್ಳಾಪುರ ತಾಪಂ ಆವರಣ ಸೋಮಾರಿಗಳ ತಾಣವಾಗಿದ್ದು, ದಿನದ 24 ಗಂಟೆ ಕಾಲ ಆವರಣದಲ್ಲಿ ಸಾರ್ವಜನಿಕರು ಇದ್ದರೆ ರಾತ್ರಿ ವೇಳೆ ನಡೆಯಬೇಕಾದ ಅನೈತಿಕ ಚಟುವಟಿಕೆಗಳ ನಡೆಯುವ ತಾಣ ಆಗಿ ತಾಪಂ ಆವರಣ ಅನೈರ್ಮಲ್ಯದಿಂದ ಕೂಡಿತ್ತು. ಆದರೆ ಇಒ ಆಗಿ ಆಗಮಿಸಿರುವ ಹರ್ಷವರ್ಧನ್‌ರ ವಿಶೇಷ ಆಸಕ್ತಿಯಿಂದ ಹಾಸ್ಟೆಲ್ ಮಕ್ಕಳನ್ನು ಬಳಸಿಕೊಂಡು ಸ್ವಚ್ಛತಾ ಅಭಿಯಾನ ನಡೆಸಿ ಆವರಣ ಸ್ವಚ್ಚಗೊಳಿಸಿದರು.
ಆವರಣಲ್ಲಿ ಠಿಕಾಣಿ ಹಾಕಿದ್ದ ನಿಷೇಧಿತ ಪ್ಲಾಸ್ಟಿಕ್ ಕೈ ಚೀಲಗಳು, ಮುಳ್ಳು ಕಡ್ಡಿಗಳು, ಪಾರ್ಥೇನಿಯಂ ಗಿಡಗಳನ್ನು ಕಿತ್ತು ಆವರಣವನ್ನು ಸ್ವಚ್ಛಗೊಳಿಸಿದರು. ಸ್ವಚ್ಛತಾ ಅಭಿಯಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ನಿಲಯ ಪಾಲಕರಾದ ಶ್ರೀನಿವಾಸ್ ಸೇರಿದಂತೆ ಹಾಸ್ಟೆಲ್‌ನ ವಿದ್ಯಾರ್ಥಿಗಳು, ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.