Advertisement

ಮನೆ ಬಿಟ್ಟು ಕೆಲಸ ಹುಡುಕಲು ಹೋದವನು ಇಂದು ನಿತ್ಯ ದುಡಿಯುವ ಯಾತ್ರಿಗ.!

05:41 PM Sep 03, 2022 | ಸುಹಾನ್ ಶೇಕ್ |

ಎಲ್ಲರಿಗೂ ಜೀವನದಲ್ಲಿ ಏನಾದರೂ ಮಾಡಬೇಕೆನ್ನುವ ಕನಸು ಇರುತ್ತದೆ. ಒಂದೊಳ್ಳೆ ಕೆಲಸ, ದಿನ ಸಾಗಿಸಲು ಸಾಕಾಗುವಷ್ಟು ಸಂಬಳ ಇದ್ದರೆ, ಜೀವನದಲ್ಲಿ ಎಲ್ಲವೂ ಸಿಕ್ಕಂತೆ. ಆದರೆ ಇವಿಷ್ಟೇ ಆಗಿದ್ದರೆ ಎಲ್ಲರ ಬದುಕು ಚೆನ್ನಾಗಿಯೇ ಇರುತ್ತಿತ್ತು. ಜೀವನ ಎಂದರೆ ಕಷ್ಟ- ಸುಖ, ಸೋಲು – ಗೆಲುವು, ನಗು – ಆಳು, ನೆಮ್ಮದಿ- ಅಶಾಂತಿ ಹೀಗೆ ಎಲ್ಲವೂ 50-50 ಯಂತೆ ಸಾಗುವಂಥದ್ದು.!

Advertisement

ಇದನ್ನೂ ಓದಿ:ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮುಖ್ಯ ಕೋಚ್ ಆದ ಬ್ರಿಯಾನ್ ಲಾರಾ

ಕಲಿತ ಮೇಲೆ ಉದ್ಯೋಗ ಹುಡುಕುವುದು ಅಥವಾ ಉದ್ಯೋಗ ಸಿಗುವುದು ಅಷ್ಟು ಸುಲಭ ಖಂಡಿತ ಅಲ್ಲ. ಕೇರಳದ ಪಾಲಾ ಕೊಟ್ಟಾಯಂ ಮೂಲದ ಜಿಬಿನ್‌ ಮಧು ಜರ್ನಿ ಕೂಡ ಹೀಗೆಯೇ ಆರಂಭವಾಯಿತು.ಹೊಟೇಲ್‌ ಮ್ಯಾನೇಜ್‌ ಮೆಂಟ್‌ ಕಲಿತ ಜಿಬಿನ್‌ ಗೆ ಸುತ್ತವುದು ಅಂದರೆ ಇಷ್ಟ. ಆಗಾಗ ಅಕ್ಕಪಕ್ಕದ ಸ್ಥಳಗಳಿಗೆ ಸುತ್ತಾಡಿ ಬರುವುದು ಜಿಬಿನ್‌ ಗೆ ಅಭ್ಯಾಸದಂತೆ ಒಂದು ಹವ್ಯಾಸ!

ವಯಸ್ಸು ದಾಟುತ್ತಿದೆ. ಕೆಲಸವೊಂದು ಹುಡುಕಬೇಕೆಂದು ತನ್ನ ಯಮಹಾ ಎಫ್‌  ಜೆಡ್‌ ಬೈಕ್‌ ಗೆ ಫುಲ್‌ ಟ್ಯಾಂಕ್‌ ಪೆಟ್ರೋಲ್ ಹಾಕಿಸಿಕೊಂಡು, ತನ್ನ ಬಟ್ಟೆ ಪ್ಯಾಕ್‌ ಮಾಡಿ, ಕಿಸೆಯಲ್ಲಿ 5000 ಸಾವಿರ ರೂಪಾಯಿ ಇಟ್ಟುಕೊಂಡು ಕೆಲಸ ಹುಡುಕುವ ನೆಪದಿಂದ ಏ.1, 2021 ರಂದು ಮನೆಯಿಂದ ಹೊರಡುತ್ತಾನೆ.  ಜಿಬಿನ್‌ ಗೆ ಮೊದಲಿನಿಂದಲೂ ಒಂದು ಆಫೀಸ್‌ ನಲ್ಲಿ 9-10 ಗಂಟೆ ಕೆಲಸ ಮಾಡುತ್ತಾ ಕೂರುವುದು ಇಷ್ಟವಿರಲಿಲ್ಲ. ಏಕಂದರೆ ಜಿಬಿನ್‌ ಗೆ ಸದಾ ಏನಾದರೂ ಕಲಿಯುತ್ತಿರಬೇಕು, ಹೊಸತನ್ನು ಅನುಭವಿಸಬೇಕೆನ್ನುವುದು ಮನದಲ್ಲಿತ್ತು. ಎಲ್ಲೋ ಒಂದು ಕಡೆ ಕೆಲಸ ಸಿಕ್ಕಿದರೆ ಒಂದು ತಿಂಗಳು ಕೆಲಸ ಮಾಡಿ, ಸಂಬಳ ಪಡೆದು ಬೇರೆಯಲ್ಲಿಯಾದ್ರು ಸುತ್ತಾಡೋಕೆ ಹೋಗಬೇಕೆನ್ನುವ ಯೋಜನೆ ಜಿಬಿನ್‌ ರದು.

ಹರೆಯದಲ್ಲೇ ಇಡೀ ಭಾರತವನ್ನು ಸುತ್ತಾಡಬೇಕು ಎಂದು ಜಿಬಿನ್‌ ಅಂದುಕೊಂಡಿದ್ದರಂತೆ. ಕೆಲಸಕ್ಕಾಗಿ ಮನೆಯಿಂದ ಹೊರಟವನಿಗೆ ಪ್ರವಾಸಿ ಸ್ಥಳಗಳಿಗೆ ತಿರುಗುವುದರಲ್ಲೇ ಹೆಚ್ಚೇಚ್ಚು ಖುಷಿಯನ್ನು ನೀಡಿತ್ತು. ಪಾರ್ಟ್‌ ಟೈಮ್‌ ಜಾಬ್‌ ಹುಡುಕಲು ಹೋದಾಗ, ಸುಮಾರು 14-15 ಜನರನ್ನು ಭೇಟಿಯಾದ ಬಳಿಕ ಸ್ವಲ್ಪ ಸಂಬಳದಲ್ಲಿ ಜಿಬಿನ್‌ ದಾಬಾವೊಂದರಲ್ಲಿ ಕೆಲಸ ಮಾಡಿ, ಕೆಲವೇ ದಿನಗಳಲ್ಲಿ ಮತ್ತೊಂದು ಪಯಣಕ್ಕೆ ಹೊರಡುತ್ತಾರೆ.

Advertisement

ಖಾಲಿಯಾದ ಹಣ; ಹೊಸ ಕೆಲಸದ ಸೃಷ್ಟಿ: 

ಪಾರ್ಟ್‌ ಟೈಮ್‌ ಕೆಲಸ ಹುಡಕಬೇಕೆಂದು ಅಂದುಕೊಂಡ ಜಿಬಿನ್‌ ಗೆ, ತನ್ನ ಬಳಿ ಇದ್ದ ಹಣ ಖಾಲಿಯಾಗುವುದು ಅರಿವಿಗೆ ಬರುತ್ತದೆ. ಆದರೆ ಅದರೊಂದಿಗೆ ಹೊಸ ಯೋಚನೆಯೊಂದು ಬರುತ್ತದೆ. ಜಿಬಿನ್‌ ಬಳಿ ಅಡುಗೆಯ ಸಾಮಾನುಗಳು,ಅದಕ್ಕೆ ಸಂಬಂಧಿಸಿದಂಥ ಸಾಮಾಗ್ರಿಗಳು ಇರುತ್ತವೆ. ಇದರೊಂದಿಗೆ ಒಂದು ಸಣ್ಣ ಸೀಮೆಎಣ್ಣೆ ಒಲೆಯೂ ಇರುತ್ತದೆ. ಕೆಲವು ಪಾತ್ರೆಗಳು ಜೊತೆಗೆ ಕೆಲವು ಕೇರಳದ ಕೆಂಪು ಮಟ್ಟಾ ಅಕ್ಕಿ ಇರುತ್ತದೆ. ಇಷ್ಟು ಮಾತ್ರವಲ್ಲದೆ ಮತ್ತಷ್ಟು ಸಾಮಾಗ್ರಿಗಳು ಖರೀದಿಸುತ್ತಾರೆ. ನೋಡಲ್ಸ್‌, ಬ್ರೆಡ್‌, ಚಹಾ,ಕಾಫಿ, ಅನ್ನವನ್ನು ರೆಡಿ ಮಾಡಿ ಬೈಕ್‌ ನ್ನೇ ಕಿಚನ್‌ ನ್ನಾಗಿ ಮಾಡಿ, ಪ್ರವಾಸಿಗರಿಗೆ ಮಾರಲು ಶುರು ಮಾಡುತ್ತಾರೆ. ಒಂದೇ ಕಡೆ ನಿಲ್ಲದೆ, ಬೇರೆ – ಬೇರೆ ಕಡೆ ಹೋಗುವುದರಿಂದ ಜಿಬಿನ್‌ ಮೂವಿಂಗ್‌ ಕಿಚನ್‌ ಹಣಗಳಿಸಲು ಶುರು ಮಾಡುತ್ತದೆ.

ಕೆಲ ಪ್ರವಾಸಿ ತಾಣದಲ್ಲಿ ಹೊಟ್ಟೆ ತುಂಬಿಸುವ ಹೊಟೇಲ್‌ ಸ್ಟಾಲ್‌ ಗಳು ಇರಲ್ಲ. ಅಂಥ ಸ್ಥಳದಲ್ಲಿ ಜಿಬಿನ್‌ ಅವರ ಬೈಕ್‌ ಫುಡ್‌ ಸ್ಟಾಲ್‌, ಬರುವ ಪ್ರವಾಸಿಗರಿಗೆ ಅನ್ನ, ಆಹಾರ,ಟೀ- ಕಾಫಿ ನೀಡುತ್ತದೆ. ಜಿಬಿನ್‌ ದಿನಕ್ಕೆ  500- 600 ರೂಪಾಯಿಯನ್ನು ಈ ಮೂಲಕ ದುಡಿಯುತ್ತಾರೆ. ಕೇರಳದವರು ಬಂದರೆ ಅವರಿಗೆ ಕುಚ್ಚಿಗೆ ಅಕ್ಕಿಯ ಅನ್ನ ನೀಡುತ್ತಾರೆ.

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಿರುಗುವಾಗ ತುಂಬಾ ಜನರು ಇಂಥ ರನ್ನಿಂಗ್‌ ಸ್ಟಾಲ್‌ ನ್ನು ಇಟ್ಟಿರುವುದನ್ನು ನೋಡಿದ ಬಳಿಕ ಜಿಬಿನ್‌ ತಾವು ಕೂಡ ಇಂಥ ಬೈಕ್‌ ಫುಡ್‌ ಸ್ಟಾಲ್‌ ಇಡಲು ಮುಂದಾದರು.

ಮನೆ ಬಿಟ್ಟು ಕೆಲಸಕ್ಕೆ ಹುಡುಕಲು ಹೊರಟ ಮಗನ ಬಗ್ಗೆ ಅಪ್ಪ -ಅಮ್ಮ, ಹಾಗೂ ಜಿಬಿನ್‌ ಸ್ನೇಹಿತರು, ಜಿಬಿನ್‌ ನ ಅವರ ಯೂಟ್ಯೂಬ್‌ ಹಾಗೂ ಇನ್ಸ್ಟಾಗ್ರಾಮ್‌ ಮೂಲಕ ತಿಳಿದುಕೊಳ್ಳುತ್ತಾರೆ. ಜಿಬಿನ್‌ ತನ್ನ ಪ್ರತಿದಿನ ಸೋಶಿಯಲ್‌ ಮೀಡಿಯಾದಲ್ಲಿ ಆಗು – ಹೋಗುಗಳನ್ನು ಆಪ್ಲೋಡ್‌ ಮಾಡುತ್ತಲೇ ಇರುತ್ತಾರೆ.

ಬೈಕ್‌ ಫುಡ್‌ ಸ್ಟಾಲ್‌ ಹಾಕಿ, ಜನರೊಂದಿಗೆ ಹೆಚ್ಚಿಗೆ ಬೆರೆಯುವ ಜಿಬಿನ್‌ ಗೆ, ಜನ ತುಂಬಾ ಪ್ರೀತಿ ತೋರಿಸುತ್ತಾರೆ. ಕೆಲವರು ಜಿಬಿನ್‌ ಗೆ ಕೆಲಸದ ಆಫರ್‌ ನೀಡುತ್ತಾರೆ. ಕೆಲವರು ಮಲಗಲು ಜಾಗವನ್ನು ನೀಡುತ್ತಾರೆ. ಅಸ್ಸಾಂನ ಒಬ್ಬ ವ್ಯಕ್ತಿ ತನ್ನಗಾಗಿ ಟೆಂಟ್‌ ವೊಂದನ್ನು ಉಡುಗೊರೆಯಾಗಿ ನೀಡಿದ್ದ ಎನ್ನುತ್ತಾರೆ ಜಿಬಿನ್.

ಸದಾ ಬೈಕ್‌ ನಲ್ಲಿ ಸುತ್ತವ ಜಿಬಿನ್‌ ಗೆ, ಅವರ ಬೈಕ್‌ ತುಂಬಾ ಸಲಿ ಕೈಕೊಟ್ಟಿದೆ. ಸುಮಾರು 10 ಸಾವಿರ ರೂಪಾಯಿಯನ್ನು ಬೈಕ್‌ ರಿಪೇರಿ ಮಾಡಲು ಖರ್ಚು ಮಾಡಿದ್ದಾರೆ. ಈ ಎಲ್ಲಾ ಸಂದರ್ಭದಲ್ಲಿ ಅವರಿಗೆ, ಸೋಶಿಯಲ್‌ ಮೀಡಿಯಾ ಫಾಲೋವರ್ಸ್‌, ಯೂಟ್ಯೂಬ್‌ ಸಬ್‌ ಸ್ಕ್ರೈಬರ್ಸ್‌ ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ ಎನ್ನುತ್ತಾರೆ ಜಿಬಿನ್. ʼಕುಂಬು ಟ್ರಾವೆಲ್‌ʼ ಎನ್ನುವ ಯೂಟ್ಯೂಬ್‌ ಚಾನೆಲ್‌ ಹೊಂದಿರುವ ಜಿಬಿನ್‌ 17 ಸಾವಿರ ಸಬ್ ಸ್ಕ್ರೈಬರ್ಸ್‌ ನ್ನು ಹೊಂದಿದ್ದಾರೆ. ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಜಿಬಿನ್‌ ವ್ಲಾಗ್ ಮಾಡುತ್ತಾರೆ.

ಪ್ರತಿದಿನ ಸಂಚಾರಿಸುವ ಜಿಬಿನ್‌ ಯಾವುದೋ ಒಂದು ಸ್ಥಳದಲ್ಲಿ ಸ್ವಲ್ಪ ದಿನ ಇರುತ್ತಾರೆ. ಅಲ್ಲಿ ಸಣ್ಣ ಕೆಲಸ ಅಥವಾ ತನ್ನ ಬೈಕ್‌ ಫುಡ್‌ ಸ್ಟಾಲ್‌ ಇಡುತ್ತಾರೆ. ದಿಲ್ಲಿಯಲ್ಲಿ ರೈತರ ದೊಡ್ಡ ಪ್ರತಿಭಟನೆ ವೇಳೆ ತನ್ನ ಫುಡ್‌ ಸ್ಟಾಲ್‌ ನ್ನು ಇಟ್ಟಿದ್ದರು.

ಇದುವರೆಗೆ ಜಿಬಿನ್‌ ತನ್ನ ಬೈಕ್‌ ನಲ್ಲಿ ಒಂಟಿಯಾಗಿ, ತಮಿಳು ನಾಡು, ಮಧ್ಯ ಪ್ರದೇಶ, ಜಮ್ಮು – ಕಾಶ್ಮೀರ್‌, ಉತ್ತರಖಂಡ, ಮೇಘಾಲಯ, ಮಹಾರಾಷ್ಟ್ರ, ಸಿಕ್ಕಿಂ,ಹಿಮಚಲ ಪ್ರದೇಶ ಸುತ್ತಿದ್ದಾರೆ. ಇದರೊಂದಿಗೆ, ನೇಪಾಲ, ಮಾಯನ್ಮರ್‌ ನಲ್ಲಿ ಪಯಣ ಮಾಡಿದ್ದಾರೆ.

 

-ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next