Advertisement

ಮಾಜಿ ಗುಪ್ತಚರ ಅಧಿಕಾರಿ ಸಾವು ಕೇಸ್ ಗೆ ಬಿಗ್ ಟ್ವಿಸ್ಟ್:ಕೊಲೆ ಎನ್ನುತ್ತಿದೆ ಸಿಸಿಟಿವಿ ದೃಶ್ಯ

05:10 PM Nov 06, 2022 | Team Udayavani |

ಮೈಸೂರು: ಇಲ್ಲಿನ ಮಾನಸ ಗಂಗೋತ್ರಿ ಆವರಣದಲ್ಲಿ ನಡೆದ ನಿವೃತ್ತ ಐಬಿ (ಇಂಟಲಿಜೆನ್ಸ್ ಬ್ಯುರೋ) ಅಧಿಕಾರಿ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

Advertisement

ಅಪರಿಚಿತ ವಾಹನ ಡಿಕ್ಕಿ ಹೊಡೆದು ರಸ್ತೆ ಅಪಘಾತದಲ್ಲಿ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರನ್ನು ಘಟನಾ ಸ್ಥಳದಲ್ಲಿ ಸಿಕ್ಕ ಮಾಹಿತಿ ಬೆಚ್ಚಿ ಬೀಳಿಸಿದೆ. ಈಗ ಘಟನಾ ಸ್ಥಳದಲ್ಲಿ ಸಿಕ್ಕ ಮಾಹಿತಿ ಆಧರಿಸಿ, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೈಸೂರಿನ ಮಾನಸ ಗಂಗೋತ್ರಿಯ ಆವರಣದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿತ್ತು. ಮೈಸೂರಿನ ಶಾರದಾದೇವಿನಗರದ ನಿವಾಸಿ ಆರ್.ಎನ್. ಕುಲಕರ್ಣಿ (82) ಅವರು ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಮಾನಸ ಗಂಗೋತ್ರಿಯ ಆವರಣದಲ್ಲಿ ಸಿಕ್ಕ ಮಾಹಿತಿ ಆಧಾರದ ಮೇಲೆ ಸಂಚಾರ ಠಾಣೆ ಪೊಲೀಸರು ಪ್ರಕರಣವನ್ನು ಜಯಲಕ್ಷ್ಮೀಪುರಂ ಠಾಣೆಗೆ ವರ್ಗಾಯಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಾರದಾದೇವಿ ನಗರದ ನಿವಾಸಿ ಕುಲಕರ್ಣಿ ಎಂದಿನಂತೆ ಶುಕ್ರವಾರ ಸಂಜೆ ವಾಯುವಿಹಾರಕ್ಕೆ ಕಾರಿನಲ್ಲಿ ಮಾನಸಗಂಗೋತ್ರಿ ಕ್ಯಾಂಪಸ್‌ಗೆ ತೆರಳಿದ್ದರು. ನಿತ್ಯದಂತೆ ಕಾರು ನಿಲ್ಲಿಸಿಕೊಂಡು ಚಾಲಕ ನಿಂತಿದ್ದರು. ಆ ವೇಳೆ ವಾಯುವಿಹಾರದಲ್ಲಿದ್ದ ಕುಲಕರ್ಣಿ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ವಿಷಯ ತಿಳಿದ ಅವರ ಕಾರು ಚಾಲಕ ಸ್ಥಳಕ್ಕೆ ದೌಡಾಯಿಸಿ ಅವರನ್ನು ತಕ್ಷಣ ಕಾಮಾಕ್ಷಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ತಲೆಗೆ ತೀವ್ರ ತರವಾದ ಪೆಟ್ಟು ಬಿದ್ದಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಕುಲಕರ್ಣಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಸೂರ್ಯ, ಅಶ್ವಿನ್ ಆಟಕ್ಕೆ ತಲೆಬಾಗಿದ ಜಿಂಬಾಬ್ವೆ; ಭಾರತಕ್ಕೆ ಸೆಮಿ ಫೈನಲ್ ಎದುರಾಳಿ ಯಾರು?

Advertisement

‘ಕುಲಕರ್ಣಿ ಗಂಗೋತ್ರಿ ಕ್ಯಾಂಪಸ್‌ನಲ್ಲಿ ವಾಯು ವಿಹಾರದಲ್ಲಿದ್ದಾಗ ನಾನು ಎಂದಿನಂತೆ ಒಂದು ಜಾಗದಲ್ಲಿ  ಕಾರು ನಿಲ್ಲಿಸಿಕೊಂಡು ಕಾಯುತ್ತಿದ್ದೆ. ಆದರೆ ಸುಮಾರು ಸಂಜೆ 5.45ರ ವೇಳೆಯಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಯಾರೋ ಒಬ್ಬರು ನೀವು ನಿತ್ಯ ಕರೆದುಕೊಂಡು ಬರುತ್ತಿದ್ದ ವ್ಯಕ್ತಿಗೆ ಯಾವುದೋ ವಾಹನ ಗುದ್ದಿಕೊಂಡು ಹೋಗಿದೆ ಎಂದು ತಿಳಿಸಿದರು. ನಾನು ತಕ್ಷಣ ಹೋಗಿ ಅವರನ್ನು ಆಸ್ಪತ್ರೆಗೆ ಕರೆತಂದಿದ್ದಾಗಿ’ ಕಾರು ಚಾಲಕ ನಿಂಗರಾಜು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಅಪಘಾತದ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ. ಕ್ಯಾಂಪಸ್‌ನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ನೋಂದಣಿ ಸಂಖ್ಯೆ ಇಲ್ಲದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿರುವುದು ಕಂಡು ಬಂದಿದೆ. ಏಕಾಏಕಿ ಡಿಕ್ಕಿ ಹೊಡೆದ ಮೇಲೆ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದು, ಕೊಲೆ ಉದ್ದೇಶವೇ ಎಂಬ ಅನುಮಾನವನ್ನು ಪೊಲೀಸರಿಗೆ ಖಚಿತವಾಗಿದೆ.

ಕೊನೆಗೆ ರಸ್ತೆ ತಡೆಗೋಡೆಗೆ ಕಾರು ತರಚಿರುವುದು ಸಹ ಕಂಡು ಬಂದಿದೆ. ವಾಯುವಿಹಾರ ಮಾಡುತ್ತಿದ್ದುದು ಸಾರ್ವಜನಿಕ ರಸ್ತೆಯಲ್ಲಿ ಅಲ್ಲ. ಕೊಲೆ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂಬ ಅಂಶ ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಲತಃ ಹಾವೇರಿ ಜಿಲ್ಲೆ ಸವಣೂರಿನ ಕುಲಕರ್ಣಿ, 1963ರಲ್ಲಿ ಕೇಂದ್ರ ಸರಕಾರದ ಇಂಟೆಲಿಜೆನ್ಸ್ ಬ್ಯುರೋ ಸೇರ್ಪಡೆಗೊಂಡು ನಾನಾ ಹುದ್ದೆ ಹಾಗೂ ಸ್ಥಳಗಳಲ್ಲಿ ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಭಾರತೀಯ ರಾಜತಾಂತ್ರಿಕ ಕಾರ್ಯಗಳು, ಕಾರ್ಪೊರೇಟ್ ಕ್ಷೇತ್ರದಲ್ಲೂ ಕೆಲಸ ಮಾಡಿದ್ದರು. ವಾಯುಯಾನ ಸಂಶೋಧನಾ ಕೇಂದ್ರ (ಎಆರ್‌ಸಿ), ಕೇಂದ್ರ ಸರಕಾರದ ವಿದೇಶಿ ಇಂಟೆಲಿಜೆನ್ಸ್ ಏಜೆನ್ಸಿ ಸಂಶೋಧನೆ ಮತ್ತು ವಿಶ್ಲೇಷಣೆ ದಳ(ರಾ)ದಲ್ಲಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮಾರ್ಕೆಟಿಂಗ್ ವಿಭಾಗದಲ್ಲಿ ವಿಜಿಲೆನ್ಸ್ ಚೀಫ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next