“ಆಸೆ ಇಟ್ಕೊಬಾರ್ಧು, ದೇವರ ಆಸೆ ಇರಬೇಕಪ್ಪಾ! ನೀನಿಲ್ಲದೆ ನಾನಿಲ್ಲ, ಪರಮಾತ್ಮ, ನೀನಿದ್ದಿಯಲ್ಲ? ನನಗೆ ಆನೆ ಬಲ ಬಂದಿದೆ ಎಂದು ಕೈಮುಗಿತೀನಿ…’
ಇದು ಭಿಕ್ಷುಕಿಯೊಬ್ಬಳು ಹೇಳುವ ಫಿಲಾಸಫಿಯ (ತತ್ವಜ್ಞಾನ) ಮಾತುಗಳು.
Advertisement
ಸ್ನಾನಕ್ಕಾಗಿ ಉಡುಪಿಯಿಂದ ಭಟ್ಕಳಕ್ಕೆ!ಭಿಕ್ಷುಕಿ ಸರೋಜಮ್ಮ ಬೆಂಗಳೂರಿನ ಶ್ರೀರಾಮ ಪುರದವರಂತೆ. ಮದುವೆಯಾಗಿ ಮಂಡ್ಯದ ಬೋವಿ ಕಾಲನಿ, 9ನೆಯ ಕ್ರಾಸ್‌ನಲ್ಲಿ ಗಂಡನ ಮನೆ ಸೇರಿದರು. ಸುಮಾರು 20 ವರ್ಷಗಳ ಹಿಂದೆ ಮನೆಯಿಂದ ಸೀದಾ ಹೊರಬಿದ್ದು ಗೋವಾಕ್ಕೆ ತೆರಳಿದರು. ಅಲ್ಲಿಂದ ಮುಂಬೈನಲ್ಲಿದ್ದ ತಂಗಿ ಮನೆಗೆ ಹೋಗಿ ಅಲ್ಲಿ ಐದು ವರ್ಷವಿದ್ದರು. ಅವರು ಮೃತಪಟ್ಟ ಬಳಿಕ ಗೋವಾಕ್ಕೆ ಬಂದರು. ಅಲ್ಲಿ ಒಬ್ಬರು ಭಿಕ್ಷುಕಿ ಒಡನಾಡಿ ಮದ್ರಾಸ್ ಮೂಲದ ಅಲ್ಸಾರಿ “ಉಡುಪಿಗೆ ಹೋದರೆ ಚೆನ್ನ, ಜನರೂ ಒಳ್ಳೆಯವರಿದ್ದಾರೆಂದು’ ಉಡುಪಿಗೆ ಕರೆ ತಂದರು. ಈಗ ಅಲ್ಸಾರಿ ಇಲ್ವಂತೆ. ಸರೋಜಮ್ಮ ಉಡುಪಿ ರೈಲ್ವೆ ನಿಲ್ದಾಣದ ಬಳಿಯೂ ಬಹಳ ವರ್ಷವಿದ್ದರು. ಸುಮಾರು 15 ವರ್ಷ ಮನೆಗೆಲಸ ಮಾಡಿಕೊಂಡಿದ್ದ ಸರೋಜಮ್ಮ ರೈಲ್ವೆ ನಿಲ್ದಾಣದಲ್ಲಿ ಇರುವಾಗ ನೀರಿನ ಸಮಸ್ಯೆ ಎಂದು ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಹೋದರು. ಅಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಾಗ ಯಾರೋ ಉಡುಪಿ ಜಿಲ್ಲಾಸ್ಪತ್ರೆಗೆ ಸೇರಿಸಿದರು. ಸುಮಾರು ಒಂದೂವರೆ ವರ್ಷ ಜಿಲ್ಲಾಸ್ಪತ್ರೆಯಲ್ಲಿದ್ದ ಸರೋಜಮ್ಮ ಕಳೆದ ನಾಗರಪಂಚಮಿ ದಿನ ಆಸ್ಪತ್ರೆಯಿಂದ ಬಿಡುಗಡೆಗೊಂಡರು.
ಈಗ ಸರೋಜಮ್ಮನವರಿಗೆ ಸೀದಾ ನಡೆಯಲು ಆಗದು, ವಾಕರ್ ಹಿಡಿದುಕೊಂಡು ಕಷ್ಟದಲ್ಲಿ ನಡೆಯುತ್ತಾರೆ. ಸುಮಾರು ಆರು ತಿಂಗಳ ಹಿಂದೆ ಸರೋಜಮ್ಮ ಇಂದ್ರಾಳಿ ರುದ್ರಭೂಮಿ ಹೊರಗಿನ ಬಸ್ ತಂಗುದಾಣದಲ್ಲಿ ಮಲಗಿದ್ದಾಗ ಸಮಾಜ ಸೇವಕ ಅನ್ಸರ್ ಅಹಮ್ಮದ್ ಅವರು ಬೀಡಿನಗುಡ್ಡೆ ಬಳಿ ನಗರಸಭೆ ನಿರ್ಮಿಸಿದ್ದ ನಿರಾಶ್ರಿತ ಧಾಮಕ್ಕೆ ತಂದು ಸೇರಿಸಿದರು. ಅವರಿಗೆ ಬೇಕಾದ ಸೀರೆ ಮೊದಲಾದ ಅಗತ್ಯ ವಸ್ತುಗಳನ್ನು ತಂದುಕೊಟ್ಟ ಅನ್ಸರ್ ಅಹಮ್ಮದ್ ಸುಮಾರು ಒಂದು ತಿಂಗಳು ಊಟವನ್ನೂ ಕೊಟ್ಟರು. ಈಗಲೂ ಆಗಾಗ್ಗೆ ಹೋಗಿ ಮಾತನಾಡಿಸಿ ಬರುತ್ತಾರೆ. ಬಸ್ ತಂಗುದಾಣದಲ್ಲಿರುವಾಗಿನಿಂದಲೇ ಮಣಿಪಾಲದ ಅರ್ಚಕ, ಜ್ಯೋತಿಷಿ ಕಿರಣ್‌ಕುಮಾರ್ ಆಗಾಗ್ಗೆ ಊಟ ತಂದುಕೊಡುತ್ತಿದ್ದಾರೆ. ಸಮಾಜಸೇವಕ ಅಂಬಲಪಾಡಿ ವಿಶು ಶೆಟ್ಟಿ 3 ಬಾರಿ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ನಿರಾಶ್ರಿತ ಧಾಮದಲ್ಲಿ ನೀರು, ಬೆಳಕು ವ್ಯವಸ್ಥೆಗಳಿವೆ. ಸರೋಜಮ್ಮ ನವರಿಗೆ ಬೇಕಿರುವುದು ಈಗ ಊಟ ತಿಂಡಿ ಮಾತ್ರ. ಮೆನೇಮೆಂಟ್ ಪ್ಲಾನ್!
ಇವರಿಗೆ ಸರಿಯಾಗಿ ನಡೆಯಲಾಗದು, ವಾಕರ್ ಬೇಕು. ಬಸ್ ಹತ್ತುವುದೂ ಆಗದು. ಬೆಳಗ್ಗೆ ಸುಮಾರು 6 ಗಂಟೆಗೆ ರಿಕ್ಷಾದಲ್ಲಿ ತೆರಳುತ್ತಾರೆ. ಆದರೆ ಇವರ ಫಿನಾನ್ಶಿಯಲ್ ಮೆನೇಮೆಂಟ್, ಪ್ಲಾನಿಂಗ್ ಬಹಳ ಸ್ಪಷ್ಟವಿದೆ. ಇದನ್ನು ಕಂಡಾಗ ಬಹುತೇಕ ಎಲ್ಲ ಭಿಕ್ಷುಕರ ದಿನಚರಿಗಳೂ ಹೀಗೆ ಇರಬಹುದು ಎಂದೆನಿಸುತ್ತದೆ. ರವಿವಾರ ಆದಿ ಉಡುಪಿ ಸಂತೆ, ಮಂಗಳವಾರ ಇಂದ್ರಾಳಿ ದೇವಸ್ಥಾನ, ಶುಕ್ರವಾರ ಸಿಟಿ ಬಸ್ ನಿಲ್ದಾಣ ಬಳಿಯ ನಾಗನ ಕಟ್ಟೆಗೆ ಹೋಗಿ ಮಧ್ಯಾಹ್ನದವರೆಗೆ ಬೇಡುತ್ತಾರೆ. ಮಧ್ಯಾಹ್ನ ಸುಮಾರು 2 ಗಂಟೆಗೆ ಊಟ ಮಾಡಿಕೊಂಡು ಬೀಡಿನಗುಡ್ಡೆಗೆ ರಿಕ್ಷಾದಲ್ಲಿ ಬರುತ್ತಾರೆ. ಆಟೋ ರಿಕ್ಷಾಕ್ಕೆ 30, 50, 100 ತೆಗೆದಿರಿಸಬೇಕು. ಮಿಕ್ಕಿ ಉಳಿದದ್ದರಲ್ಲಿ ಊಟ, ತಿಂಡಿ ಆಗಬೇಕು. ಒಂದು ಊಟಕ್ಕೆ 30 ರೂ.ನಂತೆ ಎರಡು ಊಟ, ತಿಂಡಿ ಸೇರಿ ದಿನಕ್ಕೆ ಸುಮಾರು 100 ರೂ. ಬೇಕು. ಇನ್ನು ಸಾಬೂನು, ಎಣ್ಣೆ, ವೀಳ್ಯ ತಂಬಾಕಿಗೆಂದು ಖರ್ಚಿಗೆ ಬೇಕು. ಅಂಗಡಿಗಳಿಗೆ ಹೋಗಿ ಬೇಡಿದರೆ ಒಂದೋ, ಎರಡೋ ರೂ. ಕೊಡ್ತಾರೆ, ಕೆಲವರು ಮುಂದೆ ಹೋಗಿ ಅಂತಾರೆ. ಮಿಕ್ಕುಳಿದ ದಿನಗಳಲ್ಲಿ ಎಲ್ಲಿಗೆ ಹೋಗೋದು? ಹೋದರೆ ಖರ್ಚಿಗೆ ಸಾಕಾಗುವುದಿಲ್ಲ. ಹಾಗೋ ಹೀಗೋ ಜೀವನ ನಡೆಯತ್ತೆ ಎನ್ನುತ್ತಾರೆ ಸರೋಜಮ್ಮ.
Related Articles
ಮನೆಯಲ್ಲಿ ಮಕ್ಕಳು, ಸೊಸೆಯಂದಿರು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಹೊರಬಿದ್ದವರು ಸರೋಜಮ್ಮ. ಅವರು ಮನೆಯವರಲ್ಲಿ ತಿಳಿಸಿಯೂ ಬರಲಿಲ್ಲ. “ನಾವು ಪತ್ರಿಕೆಯಲ್ಲಿ ಬರೆದಾಗ ಅದನ್ನು ಓದಿ ಮಕ್ಕಳು ಬಂದರೆ ನೀವು ಹೋಗ್ತಿರಾ?’ ಎಂದು ಕೇಳಿದರೆ “ನನಗೆ ಇದೇ ಸಂತೋಷ, ಸುಖ. ಇದ್ದಾಗ ನೋಡಿಕೊಳ್ಳದವರು ಇನ್ನೇನು ನೋಡಿಕೊಳ್ತಾರೆ? ಅದು ಹಂಗಿನ ಊಟ, ಇಲ್ಲಿ ನನ್ನ ಕೈ ನನ್ನ ಬಾಯಿ. ಇನ್ನೆಷ್ಟು ವರ್ಷ ಬಾಳಿಕೆ ಬತ್ತೇನೆ? ಕಷ್ಟವೇ ಸುಖ- ಸುಖವೇ ಕಷ್ಟ. ದೇವರ ದರ್ಶನ ಮಾಡ್ತೇನೆ. ಊಟ ಇಲ್ದಿದ್ರೆ ನೀರು ಕುಡಿದು ತೃಪ್ತಿ ಪಡ್ತೇನೆ. ಏನೇ ಹೇಳಿದ್ರೂ ನಾನ್ ವಾಪಸ್ ಹೋಗೋದಿಲ್ಲ. ನಾನ್ ಬರೋವಾಗ ಮಕ್ಳನ್ ತಂದಿದ್ದೇನಾ? ಒಬ್ಳೆ ಬಂದೆ ಒಬ್ಳೆ ಹೋಗ್ತೀನೆ. ಮಕ್ಳು ಮರಿ, ಹೊಲ ಎಲ್ಲ ಬ್ರಾಂತಿ. ಪರಮಾತ್ಮ ಆಡ್ಲಿಕ್ಕೆ ಬಿಟ್ಟಿದ್ದಾನೆ. ಒಂದ್ ದಿನ ಬಿದ್ ಹೋಗತ್ತೆ. ಯಾರೋ ಎತ್ತಿ ಬಿಸಾಕ್ತಾರೆ’ ಎನ್ನುತ್ತಾರೆೆ.
Advertisement
ಶಾಲೆ ಕಾಣದ ಅಜ್ಜಿಇಷ್ಟೆಲ್ಲ ಫಿಲಾಸಫಿ ಮಾತನಾಡುವ ಅಜ್ಜಿ ಏನೂ ಓದಿಲ್ಲ. “ಆ ಕಾಲದಲ್ಲಿ ಸ್ಕೂಲೂ, ಬಸ್ಸೂ ಇರ್ಲಿಲ್ಲ. ಜಟ್ಕಾ ಗಾಡಿ ಇತ್ತು. ಓದೂದು ಎಲ್ಲಿತ್ತು? ಬೆಳ್ಳಿ ರೂಪಾಯಿ ಕಾಲ. ರಾಜನ ತಲೆ ಅದರಲ್ಲಿತ್ತು’ ಎನ್ನುತ್ತಾರೆ. ಬೆಂಗಳೂರಿನಲ್ಲಿ ಸಂಬಂಧಿಕರು ಯಾರಾದರೂ ಇದ್ದಾರಾ ಎಂದು ಪ್ರಶ್ನಿಸಿದರೆ “ಬೇಕಾದಷ್ಟ್ ಮಂದಿ ಇರಬೌದು. ನಮ್ಮಕ್ಲೆ ನಮ್ಗೆ ಇಲ್ಲದಿದ್ರೆ ಬೇರೆಯವರು ಇದ್ದೆನು?’ ಎಂದು ವೈರಾಗ್ಯದ ಉತ್ತರ ಕೊಡುತ್ತಾರೆ. ಸರೋಜಮ್ಮನವರಿಗೆ 80 ವರ್ಷ ದಾಟಿರಬಹುದು. ಅವರ ಫಿಲಾಸಫಿ ಹೊರತುಪಡಿಸಿದರೆ ಇತರ ವಿವರಗಳು ವಯಸ್ಸಿನ ಕಾರಣದಿಂದ ಸರಿಯೋ, ಇಲ್ಲವೋ ಹೇಳಲಾಗದು. ಸಂಸ್ಕಾರ+ಜೀವನಾನುಭವ
ತಣ್ತೀಜ್ಞಾನಿಗಳು ಜಗತ್ತಿನೆಲ್ಲೆಡೆ ಇದ್ದು ಹೋಗಿದ್ದಾರೆ. ಅವರೆಲ್ಲರನ್ನು ನಾವು ಜ್ಞಾನಿಗಳು ಎಂದು ಪರಿಗಣಿಸಿ ಗೌರವಿಸು ತ್ತೇವೆ. ಭಾರತದಲ್ಲಿ ಶಂಕರ, ರಾಮಾನುಜ, ಮಧ್ವರನ್ನು ಧಾರ್ಮಿಕ ಆಧಾರಿತ ತಣ್ತೀಜ್ಞಾನಿಗಳೆಂದೂ ಪ್ಲೇಟೋ, ಅರಿಸ್ಟಾಟಲ್, ಸಾಕ್ರೆಟೆಸ್ ಮೊದಲಾದ ಪಾಶ್ಚಾತ್ಯ ಮೂಲದ ತಣ್ತೀಜ್ಞಾನಿಗಳನ್ನು ಲೌಕಿಕ ಆಧಾರಿತ ತಣ್ತೀಜ್ಞಾನಿಗಳೆಂದೂ ವ್ಯಾಖ್ಯಾನಿಸಬಹುದು. ಧಾರ್ಮಿಕ ತಣ್ತೀಜ್ಞಾನಿಗಳಲ್ಲಿ ಲೌಕಿಕ ವಿಚಾರಗಳನ್ನೂ, ಲೌಕಿಕ ತಣ್ತೀಜ್ಞಾನಿಗಳಲ್ಲಿ ಧಾರ್ಮಿಕ ವಿಚಾರಗಳ ಎಳೆಗಳನ್ನೂ ಗುರುತಿಸಬಹುದು. ಏನೂ ಓದು ಬರೆಹವಿಲ್ಲದ ಈ ಭಿಕ್ಷುಕಿ ಬಾಯಲ್ಲಿ ತಣ್ತೀಜ್ಞಾನದ ಮಾತುಗಳು ಹೊರಹೊಮ್ಮುತ್ತಿರುವ ಹಿಂದಿನ ಕಾರಣ ಜಿಜ್ಞಾಸೆಗೆ ಒಡ್ಡುತ್ತದೆ. ಜನ್ಮಾಂತರದ ಸಂಸ್ಕಾರ + ಈ ಜನ್ಮದ ಜೀವನಾನುಭವ ಎಂದೂ ಹೈಪೋತಿಸಿಸ್ ಮಾಡ ಬಹುದು. ಭಿಕ್ಷೆ, ಫಿಲಾಸಫಿ, ವೈದ್ಯಕೀಯ…
ಭಿಕ್ಷೆಗೂ ಫಿಲಾಸಫಿಗೂ ಅನ್ಯೋನ್ಯ ಸಂಬಂಧವಿದೆ. ಜಗತ್ತಿನಾದ್ಯಂತ ವಿಮಾನದಲ್ಲಿ ಹಾರಾಡಿ ಹವಾನಿಯಂತ್ರಿತ ಸಭಾಂಗಣದಲ್ಲಿ ಭಾಷಣ ಮಾಡುವ ಫಿಲಾಸಫರ್‌ಗಳನ್ನು, “ನಾವು ಬರಬೇಕಾದರೆ ಇಷ್ಟು ಸಾವಿರ ಜನರು ಪಾಲ್ಗೊಳ್ಳಬೇಕು’ ಎಂದು ಕಟ್ಟಪ್ಪಣೆ ಮಾಡುವವರನ್ನು ಕಂಡಾಗ ತಪ್ಪು ಭಾವನೆ ಬರುತ್ತದೆ. ಬೌದ್ಧರಲ್ಲಿ ಬೌದ್ಧ ಬಿಕ್ಕುಗಳೆನ್ನುತ್ತಾರೆ. ಜೈನ ಮುನಿಗಳ ಆಹಾರಕ್ಕೆ “ಆಹಾರ ಚರ್ಯೆ’ ಎನ್ನುತ್ತಾರೆ. ಸನ್ಯಾಸಿಗಳ ಊಟದ ಸಾಂಪ್ರದಾಯಿಕ ಹೆಸರು “ಭಿಕ್ಷೆ’.ಆರೆಸ್ಸೆಸ್ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ದಿನದಲ್ಲಿ ಮಾಡುತ್ತಿದ್ದ ಒಂದೇ ಹೊತ್ತಿನ ಮಧ್ಯಾಹ್ನದೂಟವನ್ನು “ಭವತಿ ಭಿಕ್ಷಾಂದೇಹಿ’ ಎಂದೇ ಮಾಡಿದ್ದರು. ಪುತ್ತೂರು ತಾಲೂಕು ಕಾಂಚನದಲ್ಲಿ ನಡೆಯುವ ವಾರ್ಷಿಕ ಕಾಂಚ ನೋತ್ಸವದಲ್ಲಿ ಭಿಕ್ಷೆ ಕೇಳಿ ಸಂಗ್ರಹವಾಗುವ ಧಾನ್ಯದಿಂದ ಅಡುಗೆ ತಯಾರಿಸುತ್ತಾರೆ. ಇದನ್ನು “ಊಂಛವೃತ್ತಿ’ ಎನ್ನುತ್ತಾರೆ. ದ್ರೋಣ ಧೃತರಾಷ್ಟ್ರನ ಆಸ್ಥಾನಕ್ಕೆ ಸೇರುವ ಮುನ್ನ ಇನ್ನೊಂದು ಬಗೆಯ ಊಂಛವೃತ್ತಿಯಲ್ಲಿದ್ದ. ಇದು ಬೆಳೆ ಕಟಾವಿನ ಬಳಿಕ ಬಿದ್ದ ಧಾನ್ಯಗಳನ್ನು ಸಂಗ್ರಹಿಸಿ ಅದರಿಂದ ಅಡುಗೆ ತಯಾರಿಸುವುದು. ಕಟಾವು ಬಳಿಕ ಇರುವ ಧಾನ್ಯದ ತೆನೆಗಳನ್ನು ದನಗಳು ತಿಂದು ಜೀರ್ಣವಾಗದೆ ಸೆಗಣಿಯಲ್ಲಿ ಬಂದ ಕಾಳುಗಳನ್ನು ತೊಳೆದು ಅದನ್ನು ಅಡುಗೆ ಮಾಡುವುದು ಮತ್ತೂಂದು ಬಗೆ. ದನ, ಕುದುರೆಗಳಿಗೆ ಇಡೀ ಹುರುಳಿಯನ್ನು ತಿನ್ನಿಸಿ ಸೆಗಣಿಯಿಂದ ಬಂದ ಹುರುಳಿಯನ್ನು ತಿಂದರೆ ಮಧುಮೇಹಕ್ಕೆ ಔಷಧ ಎಂಬ ಉಲ್ಲೇಖವಿರುವುದನ್ನು ಮಣಿಪಾಲ ಮುನಿಯಾಲು ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ|ಸತ್ಯನಾರಾಯಣ ಬೆಟ್ಟು ಮಾಡುತ್ತಾರೆ. ಉದ್ದನ್ನು ದನಕ್ಕೆ ತಿನ್ನಿಸಿ ಅದರಿಂದ ಬರುವ ಹಾಲು ಸೇವಿಸಿದರೆ ಬಂಜೆತನಕ್ಕೆ ರಾಮಬಾಣ, ಕಾಸಾನುಮರದ ಹಣ್ಣನ್ನು ದನಕ್ಕೆ ತಿನ್ನಿಸಿ ಅದರ ಬೆಣ್ಣೆ, ತುಪ್ಪ ಸೇವಿಸಿದರೆ ಬೆನ್ನು ನೋವಿಗೆ ಉತ್ತಮ ಎಂಬುದನ್ನು ದ್ರವ್ಯಗುಣ ವಿಭಾಗದ ತಜ್ಞ ಡಾ|ಶ್ರೀಧರ ಬಾಯರಿ ಉಲ್ಲೇಖೀಸುತ್ತಾರೆ. ಭಿಕ್ಷಾವೃತ್ತಿ ಇಷ್ಟು ಮೇಲ್ಮಟ್ಟದ್ದಾದರೂ ನಾವು ಕಾಣುವ ಭಿಕ್ಷುಕರು ಕೈಲಾಗದವರೆಂಬ ಕಾರಣಕ್ಕೆ ಅವರನ್ನು ಕೆಳದರ್ಜೆಯವರನ್ನಾಗಿ ಕಾಣುತ್ತೇವೆ. ಅದೇ ಪ್ರಾಚೀನರ ಹೇಳಿಕೆಗಳನ್ನು ಇಂಗ್ಲಿಷ್‌ನಲ್ಲಿ ಹೇಳುವ “ಜ್ಞಾನಿ’ ಎಂಬ ಕ್ರಿಯೇಟೆಡ್ ಹಣೆಪಟ್ಟಿಯ “ತಣ್ತೀಶಾಸಿŒಗಳು’ ಬಂದಾಗ ರತ್ನಗಂಬಳಿ ಹಾಕುತ್ತೇವೆ. ಇಂತಹ ಬಹುತೇಕ “ಜ್ಞಾನಿ’ಗಳು ಹೇಳಿಕೆಗಳನ್ನು ಕೊಟ್ಟ ಮೂಲ ವ್ಯಕ್ತಿಯನ್ನು ಹೆಸರಿಸದೆ ತಮ್ಮದೇ ಬ್ರಾಂಡ್‌ನಲ್ಲಿ ಬಿತ್ತರಿಸುತ್ತಾರೆ ಅಥವಾ ತುಂಬಾ ಓದಿಕೊಂಡಿದ್ದೇನೆಂಬ ಪೋಸ್ ಕೊಡುವುದಕ್ಕಾಗಿ ಬೇರೆ ಬೇರೆ ಗ್ರಂಥಗಳನ್ನು ಕೋಟ್ ಮಾಡುವುದೂ ಇದೆ. ಮಟಪಾಡಿ ಕುಮಾರಸ್ವಾಮಿ