ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅತ್ತಾವರ 55ನೇ ವಾರ್ಡಿನ 6ನೇ ಅಡ್ಡರಸ್ತೆಯಲ್ಲಿರುವ ರಾಜಕಾಲುವೆ ಅವ್ಯವಸ್ಥೆಯಿಂದಾಗಿ ಇಲ್ಲಿನ ಗ್ರೀನ್ ಫೀಲ್ಡ್ ಅಪಾರ್ಟ್‌ಮೆಂಟ್ ತಡೆಗೋಡೆ ಕುಸಿದಿದ್ದು, ಕಟ್ಟಡ ಅಪಾಯದ ಅಂಚಿನಲ್ಲಿದೆ.
ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಗೆ ಇಲ್ಲಿನ ಪಕ್ಕದ ರಸ್ತೆಯ ರಾಜಕಾಲುವೆಯ ಒಂದು ಬದಿಯ ತಡೆಗೋಡೆ ಕುಸಿದಿತ್ತು. ಈ ಕುರಿತಂತೆ ಸ್ಥಳೀಯರು ಮನಪಾ ಅಧಿಕಾರಿಗಳಿಗೆ ಮನವಿ ನೀಡಿದರೂ ಶೀಘ್ರ ಸಮಸ್ಯೆ ಬಗೆಹರಿದಿಲ್ಲ. ಅನೇಕ ಬಾರಿ ಮನವಿ ಮಾಡಿದ ಬಳಿಕ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ತಡೆಗೋಡೆ ಕುಸಿದ ಭಾಗದಲ್ಲಿ ಮರಳು ಚೀಲವನ್ನು ಇಟ್ಟಿದ್ದು, ಶಾಶ್ವತ ಪರಿಹಾರ ಕಲ್ಪಿಸಲಿಲ್ಲ. ಇದಾದ ಬಳಿಕ ಸುರಿದ ಮಳೆಗೆ ರಾಜಕಾಲುವೆಯಲ್ಲಿ ನೀರಿನ ಹರಿವಿನ ರಭಸ ಹೆಚ್ಚಾಗಿ ರಾಜಕಾಲುವೆಯ ಎರಡೂ ಬದಿ ಅಪಾಯ ಎದುರಾಗಿತ್ತು.
ಇದನ್ನೂ ಓದಿ:ಜನತಾ ಬಜಾರ್ ಜಾಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕೃಷಿ ವಿಭಾಗದ ಕಟ್ಟಡ ನಿರ್ಮಾಣ
ಕಳೆದ ವಾರ ಸುರಿದ ಮಳೆಗೆ ರಾಜಕಾಲುವೆಯಲ್ಲಿ ನೀರಿನ ಹರಿವಿನ ರಭಸಕ್ಕೆ ಅಪಾರ್ಟ್‌ಮೆಂಟ್ ತಡೆಗೋಡೆ ಕುಸಿಯಲು ಆರಂಭಿಸಿದ್ದು, ತತ್‌ಕ್ಷಣ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದೀಗ ಶುಕ್ರವಾರ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದಿದೆ ಎನ್ನುತ್ತಾರೆ ಅಪಾರ್ಟ್‌ಮೆಂಟ್ ನಿವಾಸಿ ಲಾರೆನ್ಸ್ ಜೋಯೆಲ್ ವೇಗಸ್. ಈ ತಡೆಗೋಡೆ ಪಕ್ಕದಲ್ಲಿಯೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದ್ದು, ಅಪಾಯ ಸೂಚಿಸುತ್ತಿದೆ. ಈ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ಕು ಮಹಡಿಗಳಿದ್ದು, 15 ಮನೆಗಳಿವೆ.